ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿರುವ ಹೊಸ ಮುಖಗಳಿವು

ಸ್ಯಾಂಡಲ್‌ವುಡ್‌ನಲ್ಲಿ ಕೆಲವು ನವ ಕಲಾವಿದರು ಹೊಸ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭರವಸೆ ಮೂಡಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿರುವ ಹೊಸ ಮುಖಗಳಿವು
Linkup
ಹರೀಶ್‌ ಬಸವರಾಜ್‌ ಸ್ಯಾಂಡಲ್‌ವುಡ್‌ನಲ್ಲಿ ಕೆಲವು ನವ ಕಲಾವಿದರು ಹೊಸ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭರವಸೆ ಮೂಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ಹೊಸ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಲೇ ಇರುತ್ತಾರೆ. ಈ ಪೈಕಿ ಕೆಲವರು ತಮ್ಮ ಸಿನಿಮಾ ಮೂಲಕ ಸುದ್ದಿ ಮಾಡಿದರೆ, ಇನ್ನು ಕೆಲವರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕಳೆದು ಹೋಗುತ್ತಾರೆ. ಇದೇ ರೀತಿ ಕೆಲವರ ಸಿನಿಮಾಗಳು ಹೆಚ್ಚು ಬಿಡುಗಡೆಯಾಗದೆ ಹೋದರೂ ಚಿತ್ರರಂಗದಲ್ಲಿ ಭದ್ರವಾಗಿ ತಳವೂರುವಂಥ ನಟ, ನಟಿಯರು ಕಳೆದೆರಡು ವರ್ಷಗಳಿಂದ ಕಾಣಸಿಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಟರಾದ ಪೃಥ್ವಿ ಅಂಬಾರ್‌, ಪ್ರಮೋದ್‌, ಯಶಾ ಶಿವಕುಮಾರ್‌, ಕುಮಾರ್‌, ನಾಗಭೂಷಣ್‌ ಮುಂತಾದವರು ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ಭರವಸೆಯ ನಟ, ನಟಿಯರಾಗಿ ಹೊರಹೊಮ್ಮಿದ್ದಾರೆ. 5 ಸಿನಿಮಾಗಳಲ್ಲಿ ಪೃಥ್ವಿ ನಟ ಪೃಥ್ವಿ ಅಂಬಾರ್‌ ‘ದಿಯಾ’ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಈಗ ಅವರು ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಆದರೆ ಅವರ ನಟನೆಯ ‘ದಿಯಾ’ ಸಿನಿಮಾ ಬಿಟ್ಟರೆ ಇತರ ಸಿನಿಮಾಗಳು ಕೋವಿಡ್‌ ಮುಂತಾದ ಕಾರಣಗಳಿಂದ ಬಿಡುಗಡೆಯಾಗಿಲ್ಲ. ಆದರೂ ಅವರು ಕೇವಲ ಒಂದೇ ಸಿನಿಮಾದಿಂದ ಹಲವು ಸಿನಿಮಾಗಳ ಆಫರ್‌ ಪಡೆದುಕೊಂಡಿರುವ ಅದೃಷ್ಟವಂತರು. ಚಿತ್ರೀಕರಣ ಮುಗಿದಿರುವ ಅವರ ಮೂರು ಸಿನಿಮಾಗಳು ಬಿಡುಗಡೆಯಾಗಬೇಕಿವೆ. 6 ಚಿತ್ರಗಳ ನಾಯಕ ಪ್ರಮೋದ್‌ ಗೀತಾ ಬ್ಯಾಂಗಲ್‌ ಸ್ಟೋರ್ಸ್ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದ ಪ್ರಮೋದ್‌ ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿ ನಂಜುಂಡಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ನಂತರ ಅವರು ಡಾಲಿ ಧನಂಜಯ ನಾಯಕರಾಗಿದ್ದ ‘ರತ್ನನ್‌ ಪ್ರಪಂಚ’ ಸಿನಿಮಾದಲ್ಲೂ ಅದ್ಭುತ ನಟನೆಯನ್ನು ತೋರಿದ್ದಾರೆ. ಈ ಸಿನಿಮಾದ ನಂತರ ಪ್ರಮೋದ್‌ಗೆ ಒಂದರ ಮೇಲೆ ಒಂದರಂತೆ ಸಿನಿಮಾ ಆಫರ್‌ಗಳು ಬರುತ್ತಲೇ ಇವೆ. ಈಗ ಏನಿಲ್ಲವೆಂದರೂ ಅವರು ಆರು ಸಿನಿಮಾಗಳಿಗೆ ಓಕೆ ಹೇಳಿದ್ದಾರೆ. ಈ ಪೈಕಿ ಒಂದರಲ್ಲಿ ಕಾಲೇಜು ವಿದ್ಯಾರ್ಥಿ, ಮತ್ತೊಂದರಲ್ಲಿ ರೌಡಿ, ಇನ್ನೊಂದರಲ್ಲಿ ಟ್ರಾವೆಲರ್‌ ಪಾತ್ರಗಳಲ್ಲಿ ಅವರು ನಟಿಸಲಿದ್ದಾರೆ. 'ನಾನು ಒಪ್ಪಿಕೊಂಡಿದ್ದರೆ ಇಷ್ಟೊತ್ತಿಗೆ ಹತ್ತಕ್ಕೂ ಹೆಚ್ಚು ಸಿನಿಮಾಗಳು ಅನೌನ್ಸ್‌ ಆಗಿರುತ್ತಿದ್ದವು. ಆದರೆ ಕಥೆ ಮತ್ತು ಪಾತ್ರಗಳು ಚೆನ್ನಾಗಿರುವುದನ್ನು ಮಾತ್ರ ಆರಿಸಿಕೊಳ್ಳುತ್ತಿದ್ದೇನೆ. ಜನರಿಗೆ ಸಿನಿಮಾ ನೋಡಿ ಖುಷಿಯಾಗಬೇಕು ಎಂಬುದು ನನ್ನ ಆಸೆ' ಎಂದಿದ್ದಾರೆ ನಟ . ಭರವಸೆಯ ನಾಗಭೂಷಣ್‌ ಕಳೆದ ವರ್ಷ ಗಮನ ಸೆಳೆದ ‘ಇಕ್ಕಟ್‌’ ಸಿನಿಮಾದಲ್ಲಿ ನಾಯಕರಾಗಿದ್ದ ನಾಗಭೂಷಣ್‌ರ ಟೈಮಿಂಗ್‌ ಮತ್ತು ನಟನೆಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಇದಾದ ತಕ್ಷಣ ಅವರಿಗೆ ಹಲವು ಸಿನಿಮಾಗಳ ಆಫರ್‌ ಬಂದಿದೆ. ಆದರೆ ಅವರು ಅಳೆದು ತೂಗಿ ‘ಮೇಡ್‌ ಇನ್‌ ಚೈನಾ’ ಎಂಬ ಸಿನಿಮಾ ಒಪ್ಪಿಕೊಂಡಿದ್ದು, ಇದರ ಜತೆಗೆ ‘ರಾಘವೇಂದ್ರ ಸ್ಟೋರ್ಸ್’, ‘ದಸರಾ’, ‘ಲಕ್ಕಿ ಮ್ಯಾನ್‌’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಬಡವ ರಾಸ್ಕಲ್‌’ ಸಿನಿಮಾದ ನಾಗ ಪಾತ್ರವೂ ನಾಗಭೂಷಣ್‌ಗೆ ಖ್ಯಾತಿ ತಂದುಕೊಟ್ಟಿದೆ. ಪ್ರಿಯಾಂಕಾರಿಗೂ ಅದ್ಧೂರಿ ಸ್ವಾಗತ ದುನಿಯಾ ಸೂರಿ ನಿರ್ದೇಶನ ಮಾಡುತ್ತಿರುವ ‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾದ ನಾಯಕಿಯಾಗಿರುವ ನಟಿ ಪ್ರಿಯಾಂಕಾ ಕುಮಾರ್‌ ಈಗ ‘ಅದ್ಧೂರಿ ಲವರ್‌’ ಸಿನಿಮಾಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಎರಡನೇ ಸಿನಿಮಾಗೆ ಆಯ್ಕೆಯಾಗಿರುವುದು ಇವರ ಅದೃಷ್ಟ ಎನ್ನಬಹುದು. ಲವ್‌ ಸ್ಟೋರಿಗಳನ್ನು ತೆರೆಯ ಮೇಲೆ ಸುಂದರವಾಗಿ ತೋರಿಸುವ ನಿರ್ದೇಶಕ ಎ ಪಿ ಅರ್ಜುನ್‌ ಅವರೇ ‘ಅದ್ಧೂರಿ ಲವರ್‌’ ಸಿನಿಮಾದ ಸೂತ್ರಧಾರ. ಪ್ರಿಯಾಂಕಾ ಕುಮಾರ್‌ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರವಂತಹ ನಟಿಯಾಗಿ ಹೊರ ಹೊಮ್ಮುತ್ತಾರೆ ಎಂಬ ಅಭಿಪ್ರಾಯ ‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ಸೆಟ್‌ನಲ್ಲಿಯೇ ಹುಟ್ಟಿಕೊಂಡಿತ್ತು. ಅದರಿಂದಲೇ ಈಗ ಅವರಿಗೆ ಎರಡನೇ ಸಿನಿಮಾದ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ. ಯಶಾಗೆ ಮತ್ತೊಂದು ಚಿತ್ರ ಪದವಿ ಪೂರ್ವ ಎಂಬ ಸಿನಿಮಾದ ಇಬ್ಬರು ನಾಯಕಿಯರಲ್ಲಿಒಬ್ಬರಾದ ಯಶಾ ಶಿವಕುಮಾರ್‌ ಅವರು ತಮ್ಮ ಸಿನಿಮಾ ಬಿಡುಗಡೆಯ ಮುನ್ನವೇ ‘ಬೈರಾಗಿ’, ಕಿರಣ್‌ ರಾಜ್‌ ಅವರ ಸಿನಿಮಾ ಮತ್ತು ‘ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಪ್ರಜ್ವಲ್‌ ದೇವರಾಜ್‌ರ ‘ಗಣ’ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ವೇದಿಕಾ ಮತ್ತು ಆರ್ಚನಾ ಕೂಡ ನಟಿಸುತ್ತಿದ್ದು, ಇದರಲ್ಲಿ ಯಶಾ ಯಾವ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.