
ಹೈದರಾಬಾದ್: ಕೇಂದ್ರ ಸರಕಾರಕ್ಕೆ ಪ್ರತಿ ಡೋಸ್‌ಗೆ 150 ರೂ. ನಂತೆ ಲಸಿಕೆ ನೀಡುವುದು ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲ ಎಂದು ಉತ್ಪಾದಕ ಸಂಸ್ಥೆ ಹೇಳಿದೆ. ಕೇಂದ್ರದ ಪೂರೈಕೆ ದರದಿಂದಾಗಿ ಖಾಸಗಿ ವಲಯದ ದರ ಹೆಚ್ಚುತ್ತಿದೆ ಎಂದು ಕಂಪನಿ ವಿಷಾದ ವ್ಯಕ್ತಪಡಿಸಿದೆ.
“ಇದರ ಜತೆಗೆ ಕಡಿಮೆ ಪ್ರಮಾಣದ ಖರೀದಿ, ಹೆಚ್ಚಿನ ವಿತರಣಾ ವೆಚ್ಚ ಮತ್ತು ಕಮಿಷನ್ ಸೇರಿ ಮೂಲಭೂತ ವ್ಯವಹಾರದ ಕಾರಣಗಳಿಂದ ಕೊವ್ಯಾಕ್ಸಿನ್ ಬೆಲೆ ಹೆಚ್ಚಳವಾಗಿದೆ,” ಎಂದು ಕಂಪನಿ ಹೇಳಿದೆ. ಇದರಿಂದಾಗಿ ಬೇರೆ ಲಸಿಕೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಕೊವ್ಯಾಕ್ಸಿನ್ ದರ ಹೆಚ್ಚಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
“ಸರಕಾರಕ್ಕೆ ಪ್ರತಿ ಡೋಸ್‌ಗೆ 150 ರೂ. ದರದಲ್ಲಿ ಕೊವ್ಯಾಕ್ಸಿನ್ ನೀಡುತ್ತಿರುವುದು, ಸ್ಪರ್ಧಾತ್ಮಕ ದರವೂ ಅಲ್ಲ ಮತ್ತು ದೀರ್ಘಾವಧಿಯಲ್ಲಿ ಸಮರ್ಥನೀಯವೂ ಅಲ್ಲ. ಆದ್ದರಿಂದ ವೆಚ್ಚದ ಭಾಗವನ್ನು ಸರಿದೂಗಿಸಲು ಖಾಸಗಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆ ಅನಿವಾರ್ಯ," ಎಂದು ಕಂಪನಿ ವಿವರಿಸಿದೆ.
ಕೊವ್ಯಾಕ್ಸಿನ್ ಲಸಿಕೆಯ ತಯಾರಿ, ಅದರ ಪರೀಕ್ಷೆ, ಉತ್ಪಾದನಾ ಘಟಕಗಳಿಗಾಗಿ ಭಾರತ್ ಬಯೋಟೆಕ್ ಈಗಾಗಲೇ 500 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.