'ಬ್ಯಾಡ್ ಬ್ಯಾಂಕ್'ಗೆ ಕೇಂದ್ರದಿಂದ 30,600 ಕೋಟಿ ರೂ.ಗಳ ಗ್ಯಾರೆಂಟಿ - ನಿರ್ಮಲಾ ಸೀತಾರಾಮನ್‌

ಬ್ಯಾಂಕುಗಳಿಂದ ಕೆಟ್ಟ ಸಾಲಗಳನ್ನು ಖರೀದಿಸಲಿರುವ 'ಬ್ಯಾಡ್‌ ಬ್ಯಾಂಕ್‌'ಗೆ 30,600 ಕೋಟಿ ರೂ. ಗ್ಯಾರೆಂಟಿ ನೀಡುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಘೋಷಿಸಿದ್ದಾರೆ.

'ಬ್ಯಾಡ್ ಬ್ಯಾಂಕ್'ಗೆ ಕೇಂದ್ರದಿಂದ 30,600 ಕೋಟಿ ರೂ.ಗಳ ಗ್ಯಾರೆಂಟಿ - ನಿರ್ಮಲಾ ಸೀತಾರಾಮನ್‌
Linkup
ಬ್ಯಾಂಕುಗಳಿಂದ ಕೆಟ್ಟ ಸಾಲಗಳನ್ನು ಖರೀದಿಸಲು ಅಥವಾ ನ್ಯಾಷನಲ್‌ ಅಸೆಟ್‌ ರಿಕನ್ಟ್ರಕ್ಷನ್‌ ಕಂಪನಿ ಲಿ. (ಎನ್‌ಎಆರ್‌ಸಿಎಲ್‌)ಗೆ 30,600 ಕೋಟಿ ರೂ. ಗ್ಯಾರೆಂಟಿ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ಗುರುವಾರ ಘೋಷಿಸಿದ್ದಾರೆ. ಎನ್‌ಎಆರ್‌ಸಿಎಲ್‌ ಬ್ಯಾಂಕ್‌ಗಳಿಂದ 15:85 ಅನುಪಾತದಲ್ಲಿ ಸಾಲಗಳನ್ನು ಖರೀದಿಸಲಿದೆ. ಇದರಲ್ಲಿ ಶೇ. 15ರಷ್ಟು ಹಣವನ್ನು ಕಂಪನಿಯು ನಗದು ರೂಪದಲ್ಲಿ ಬ್ಯಾಂಕ್‌ಗಳಿಗೆ ನೀಡಲಿದ್ದರೆ, ಉಳಿದ ಮೊತ್ತಕ್ಕೆ ಸೆಕ್ಯೂರಿಟಿ ರಿಸಿಪ್ಟ್‌ ನೀಡಲಿದೆ. ಈ ಸೆಕ್ಯೂರಿಟಿ ರಿಸಿಪ್ಟ್‌ಗಳಿಗೆ ಸರಕಾರ ಗ್ಯಾರೆಂಟಿ ನೀಡಲಿದೆ. ಈ ನಡೆಯಿಂದ ಬ್ಯಾಂಕ್‌ಗಳ ಲೆಕ್ಕ ಪುಸ್ತಕ ಸ್ವಚ್ಛಗೊಳಿಸಲು ಸಾಧ್ಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಎನ್‌ಎಆರ್‌ಸಿಎಲ್‌ಗೆ ವರ್ಗಾಯಿಸಲಾಗುವ ಸ್ವತ್ತುಗಳ ವಿರುದ್ಧ ಸಂಪೂರ್ಣ ನಿಬಂಧನೆಗಳನ್ನು ಹಾಕಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರಕ್ಕೆ ಇದು ಹೊಣೆಗಾರಿಕೆಯಾಗಿದೆ ಮತ್ತು ತಕ್ಷಣವೇ ಹಣಕಾಸಿನ ಕೊರತೆಯನ್ನು ಸೇರಿಸುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

  • ಒಟ್ಟು 2 ಲಕ್ಷ ಕೋಟಿ ರೂ. ಮೊತ್ತದ ಕೆಟ್ಟ ಸಾಲಗಳನ್ನು ಬ್ಯಾಂಕ್‌ಗಳ ಪುಸ್ತಕದಿಂದ ಬ್ಯಾಡ್‌ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ. ಮೊದಲ ಹಂತದಲ್ಲಿ 90,000 ಕೋಟಿ ರೂ. ಮೊತ್ತವನ್ನು ವರ್ಗಾಯಿಸಲಾಗುತ್ತದೆ.
  • 30,600 ಕೋಟಿ ರೂ. ಮೊತ್ತ ಎಲ್ಲಾ 2 ಲಕ್ಷ ಕೋಟಿ ರೂ.ಗೆ ಭದ್ರತೆಯಾಗಿ ಇರಲಿದೆ.
  • ಗ್ಯಾರೆಂಟಿಯು ಸ್ವತ್ತುಗಳ ಮುಖಬೆಲೆ ಮತ್ತು ಎನ್‌ಎಆರ್‌ಸಿಎಲ್‌ ಮೂಲಕ ಮಾರಾಟ ಮಾಡಲಾಗುವ ಸ್ವತ್ತುಗಳ ನಡುವಿನ ವ್ಯತ್ಯಾಸವನ್ನು ಪ್ರತಿನಿಧಿಸುತ್ತದೆ.
  • ಐದು ವರ್ಷಗಳ ಮಟ್ಟಿಗೆ ಮಾತ್ರ ಈ ಗ್ಯಾರೆಂಟಿ ಮಾನ್ಯವಾಗಿರಲಿದೆ.
  • ಸರ್ಕಾರವು ಶೇ. 0.25ರಷ್ಟು ಗ್ಯಾರೆಂಟಿ ಶುಲ್ಕವನ್ನು ಪಡೆಯಲಿದೆ, ಇದು ವರ್ಷಗಳಲ್ಲಿ ಕ್ರಮೇಣ ಹೆಚ್ಚಾಗಲಿದೆ.
  • ಆಸ್ತಿಗಳಿಗೆ ನೀಡಲಾಗುವ ಶೇ. 15ರಷ್ಟು ನಗದು ಮೊತ್ತವನ್ನು ಮೌಲ್ಯಮಾಪನ ಪ್ರಕ್ರಿಯೆಯ ನಂತರ ನೀಡಲಾಗುತ್ತದೆ.
  • ಉಳಿದ ಶೇ. 85ರಷ್ಟು ಮೊತ್ತವನ್ನು ಸೆಕ್ಯೂರಿಟಿ ರಿಸಿಪ್ಟ್‌ಗಳ ರೂಪದಲ್ಲಿ ನೀಡಲಾಗುತ್ತದೆ. ಇದೆಕ್ಕೆ ಸರಕಾರದ ಬೆಂಬಲ ಇರುತ್ತದೆ.
  • ಇಂಡಿಯಾ ಡೆಬ್ಟ್‌ ರಿಸೊಲ್ಯೂನ್‌ ಕಂಪನಿ ಲಿ. (ಐಡಿಆರ್‌ಸಿಎಲ್‌) ಅನ್ನೂ ಆರಂಭಿಸಲಾಗುತ್ತದೆ.
  • ಎನ್‌ಎಆರ್‌ಸಿಎಲ್‌ನಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಶೇ. 51ರಷ್ಟು ಷೇರುಗಳನ್ನು ಹೊಂದಿರಲಿವೆ.
  • ಐಡಿಆರ್‌ಸಿಎಲ್‌ನಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಶೇ. 49ರಷ್ಟು ಷೇರುಗಳನ್ನು ಹೊಂದಿರಲಿದ್ದು, ಉಳಿದ ಭಾಗವನ್ನು ಖಾಸಗಿ ಬ್ಯಾಂಕುಗಳು ಹೊಂದಿರಲಿವೆ.
ಎನ್‌ಎಆರ್‌ಸಿಎಲ್‌ ಎನ್ನುವುದು ದೇಶದ ಬ್ಯಾಡ್‌ ಬ್ಯಾಂಕ್‌ ಆಗಿದ್ದು, ಸಾಲದಾತರಿಂದ ಕೆಟ್ಟ ಸಾಲಗಳನ್ನು ಪಡೆದುಕೊಂಡು ಸಾಲ ನಿರ್ವಹಣಾ ಕಂಪನಿ ಮೂಲಕ ಇದರ ನಿರ್ವಹಣೆ ಮಾಡಲಿದೆ. ಈ ಸಾಲ ನಿರ್ವಹಣಾ ಕಂಪನಿಯ ಪೂರ್ಣ ಮಾಲಿಕತ್ವ ಎನ್‌ಎಆರ್‌ಸಿಎಲ್‌ ಬಳಿ ಇರಲಿದ್ದು, ಇದನ್ನು ಖಾಸಗಿ ವಲಯದ ವೃತ್ತಿಪರರು ನಿರ್ವಹಣೆ ಮಾಡಲಿದ್ದಾರೆ. 12 ಸಾರ್ವಜನಿಕ ರಂಗದ ಬ್ಯಾಂಕುಗಳು ಮತ್ತು ನಾಲ್ಕು ಖಾಸಗಿ ಬ್ಯಾಂಕುಗಳು ಸೇರಿ ಒಟ್ಟು 16 ಬ್ಯಾಂಕುಗಳು ಇದರಲ್ಲಿ ಪಾತ್ರ ವಹಿಸಲಿವೆ. ಕೆನರಾ ಬ್ಯಾಂಕ್‌ ಅತೀ ದೊಡ್ಡ ಪ್ರಾಯೋಜಕನಾಗಲಿದ್ದು, ಶೇ. 12ರಷ್ಟು ಷೇರುಗಳನ್ನು ಹೊಂದಿರಲಿದೆ. ಈಗಾಗಲೇ ಬ್ಯಾಡ್‌ ಬ್ಯಾಂಕ್‌ ಎಆರ್‌ಸಿ ಪರವಾನಗಿಗಾಗಿ ಆರ್‌ಬಿಐಗೆ ಅರ್ಜಿ ಸಲ್ಲಿಸಿದೆ. ಎನ್‌ಎಆರ್‌ಸಿಎಲ್‌ಗೆ ಆರ್‌ಬಿಐನಿಂದ ಪರವಾನಗಿ ಸಿಗುತ್ತಿದ್ದಂತೆ, ಬ್ಯಾಂಕುಗಳು ಈಗಾಗಲೇ ಅಂತಿಮಗೊಳಿಸಿರುವ 22 ಖಾತೆಗಳನ್ನು ಖರೀದಿಸಲಿದೆ.ಈ ಖಾತೆಗಗಳ ಮೊತ್ತ 82,000 ಕೋಟಿ ರೂ.ಗೂ ಹೆಚ್ಚಿದೆ. ಈ ಪಟ್ಟಿಯಲ್ಲಿ ವಿಡಿಯೋಕಾನ್‌ ಆಯಿಲ್‌ ವೆಂಚರ್ಸ್‌ ಲಿ., ಆಮ್ಟೆಕ್‌ ಆಟೋ ಲಿ., ಕ್ಯಾಸ್ಟೆಕ್ಸ್‌ ಟೆಕ್ನಾಲಜೀಸ್‌ ಲಿ., ಜಯ್‌ಪೀ ಇನ್ಫ್ರಾಟೆಕ್‌ ಲಿ. ಮತ್ತು ರಿಲಯನ್ಸ್‌ ನೇವಲ್‌ & ಎಂಜಿನಿಯರಿಂಗ್‌ನಂಥ ಪ್ರಮುಖ ಕಂಪನಿಗಳ ಆಸ್ತಿಗಳು ಸೇರಿವೆ.