![](https://vijaykarnataka.com/photo/82147764/photo-82147764.jpg)
ಮುಂಬಯಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ ಷೇರು ಪೇಟೆಯನ್ನು ಕಂಗಾಲಾಗಿಸಿದ್ದು, ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೋಮವಾರ 883 ಅಂಕ ಪತನಕ್ಕೀಡಾಯಿತು.
ಕೆಲ ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್, ಕೆಲ ರಾಜ್ಯಗಳಲ್ಲಿ ಭಾಗಶಃ ಘೋಷಣೆಯಾಗಿರುವುದು ಹೂಡಿಕೆದಾರರನ್ನು ತಲ್ಲಣಗೊಳಿಸಿದ್ದು, ಸೆನ್ಸೆಕ್ಸ್ 47,949ಕ್ಕೆ ಕುಸಿಯಿತು.
ಇದೇ ರೀತಿ ನಿಫ್ಟಿ 258 ಅಂಕ ಕಳೆದುಕೊಂಡು 14,359ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಸೆನ್ಸೆಕ್ಸ್ ಪತನದ ಪರಿಣಾಮ ಹೂಡಿಕೆದಾರರು 3.53 ಲಕ್ಷ ಕೋಟಿ ರೂ. ನಷ್ಟಕ್ಕೀಡಾದರು. ಒಂದು ಹಂತದಲ್ಲಿ ಸೂಚ್ಯಂಕ 1,469 ಅಂಕ ಪತನಕ್ಕೀಡಾಯಿತು. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 201 ಲಕ್ಷ ಕೋಟಿ ರೂ.ನಷ್ಟಿತ್ತು.
ಪವರ್ ಗ್ರಿಡ್, ಒಎನ್‌ಜಿಸಿ, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಲ್‌ಆ್ಯಂಡ್‌ಟಿ, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರುಗಳ ದರ ಇಳಿಯಿತು.
"ಇತ್ತೀಚೆಗೆ ಚೇತರಿಸುತ್ತಿದ್ದ ಸೆನ್ಸೆಕ್ಸ್ ಕೋವಿಡ್-19 ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿರುವಂತೆ ಭಾರಿ ಪತನಕ್ಕೀಡಾಗಿದೆ. ಆರ್ಥಿಕತೆಯ ಬೆಳವಣಿಗೆ ಬಗ್ಗೆ ಹೂಡಿಕೆದಾರರಲ್ಲಿ ಕಳವಳ ಉಂಟಾಗುರುವುದು ಇದಕ್ಕೆ ಕಾರಣ. ದಿಲ್ಲಿ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮೊದಲಾದ ಕಡೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಭಾಗಶಃ ಲಾಕ್‌ಡೌನ್, ಕಠಿಣ ನಿರ್ಬಂಧ ಇತ್ಯಾದಿಗಳು ಜಾರಿಯಾಗಿರುವುದರಿಂದ ಆರ್ಥಿಕ ಚಟುವಟಿಕೆಗೆ ಸಮಸ್ಯೆಯಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿದೆ. ನೋಟು ಅಮಾನ್ಯತೆ, ಜಿಎಸ್‌ಟಿ ಮೊದಲಾದ ವಿದ್ಯಮಾನಗಳ ನಂತರ ಕುಸಿದಿದ್ದ ಸೆನ್ಸೆಕ್ಸ್ ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ನಂತರ ಭಾರಿ ಪತನಕ್ಕೀಡಾಗಿತ್ತು. ನಂತರ ಚೇತರಿಕೆಯ ಹಂತದಲ್ಲಿದ್ದ ಸೂಚ್ಯಂಕ ಇದೀಗ ಕೋವಿಡ್ ಎರಡನೇ ಅಲೆಯ ಅಬ್ಬರಕ್ಕೆ ಬೆಚ್ಚಿ ಬಿದ್ದಿದೆ'' ಎಂದು ತಜ್ಞರು ಹೇಳಿದ್ದಾರೆ.
ವಾಹನ ಮಾರಾಟ ಇಳಿಕೆಯ ಆತಂಕ
ಕೋವಿಡ್-19 ಎರಡನೇ ಅಲೆಯ ಅಬ್ಬರವು ವಾಹನಗಳ ಮಾರಾಟಕ್ಕೆ ಸವಾಲಾಗಿ ಪರಿಣಮಿಸಬಹುದು ಮಾರುತಿ ಸುಜುಕಿ, ಟೊಯೊಟಾ, ಹೋಂಡಾ ಕಾರ್ಸ್ ಆತಂಕ ವ್ಯಕ್ತಪಡಿಸಿವೆ.
'' ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಚ್ಯುತಿ ಉಂಟಾಗುವ ನಿರೀಕ್ಷೆ ಇದೆ'' ಎಂದು ಎಂಎಸ್‌ಐನ ಕಾರ್ಯಕಾರಿ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ. ಸ್ಥಳೀಯ ನಿರ್ಬಂಧಗಳೂ ಆರ್ಡರ್‌ಗಳ ಹರಿವು ಮತ್ತು ಉತ್ಪನ್ನಗಳ ಬಿಡುಗಡೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಭಾರಿ ಕುಸಿತ
ಏ. 5 - 708 ಅಂಕ
ಏ. 13 - 1,708 ಅಂಕ
ಏ. 19 - 883 ಅಂಕ