ಕಾಂಗ್ರೆಸ್‌ನಿಂದ ಎಎಪಿಗೆ ಜಿಗಲಿದ್ದಾರೆಯೇ ಬಂಡಾಯಗಾರ ಸಿಧು?: ಅನುಮಾನ ಮೂಡಿಸಿದ ಟ್ವೀಟ್

ಪಂಜಾಬ್ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು, ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆಯೇ? ಅವರು ಮಾಡಿರುವ ಟ್ವೀಟ್ ಈ ಅನುಮಾನ ಹುಟ್ಟುಹಾಕಿದೆ.

ಕಾಂಗ್ರೆಸ್‌ನಿಂದ ಎಎಪಿಗೆ ಜಿಗಲಿದ್ದಾರೆಯೇ ಬಂಡಾಯಗಾರ ಸಿಧು?: ಅನುಮಾನ ಮೂಡಿಸಿದ ಟ್ವೀಟ್
Linkup
ಹೊಸದಿಲ್ಲಿ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ಬಂಡಾಯವೆದ್ದಿರುವ ಮಾಜಿ ಕ್ರಿಕೆಟಿಗ, ಮುಖಂಡ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಯೇ? ಹೀಗೊಂದು ಅನುಮಾನವನ್ನು ಅವರು ಮಂಗಳವಾರ ಮಾಡಿರುವ ಟ್ವೀಟ್ ಹುಟ್ಟುಹಾಕಿದೆ. ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ರಾಜ್ಯದಲ್ಲಿ ರಾಜಕೀಯ ಪಲ್ಲಟಗಳು ನಡೆಯುವ ಬಗ್ಗೆ ಅವರು ಸುಳಿವು ನೀಡಿದ್ದಾರೆ. ತನ್ನ ಕೆಲಸಗಳನ್ನು ಸದಾ ಗುರುತಿಸುತ್ತಿದೆ. ರಾಜ್ಯಕ್ಕಾಗಿ ಯಾರು ಹೋರಾಟ ನಡೆಸುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿದೆ ಎನ್ನುವ ಮೂಲಕ ಅವರು ಅರವಿಂದ್ ಕೇಜ್ರಿವಾಲ್ ಪಾಳಯಕ್ಕೆ ಜಿಗಿಯಲಿದ್ದಾರೆ ಎಂಬ ಊಹಾಪೋಹಗಳ ಕಿಡಿಗೆ ತುಪ್ಪ ಸುರಿದಿದ್ದಾರೆ. 'ಪಂಜಾಬ್‌ಗಾಗಿ ನನ್ನ ದೂರದೃಷ್ಟಿ ಮತ್ತು ಕೆಲಸಗಳನ್ನು ನಮ್ಮ ವಿರೋಧಪಕ್ಷ ಎಎಪಿ ಯಾವಾಗಲೂ ಗುರುತಿಸುತ್ತಿದೆ. ಅದು 2017ರ ಹಿಂದಿನ ಗುರು ಗ್ರಂಥ ಸಾಹೇಬ್ ವಿವಾದ, ಮಾದಕವಸ್ತು, ರೈತರ ಸಮಸ್ಯೆಗಳು, ಭ್ರಷ್ಟಾಚಾರ ಮತ್ತು ವಿದ್ಯುತ್ ಬಿಕ್ಕಟ್ಟು ಇರಲಿ, ಪಂಜಾಬ್‌ನ ಜನತೆ ಎದುರಿಸಿದ ಸಮಸ್ಯೆಗಳ ಬಗ್ಗೆ ನಾನು ಎತ್ತಿದ ವಿಚಾರಗಳು ಅಥವಾ ಇಂದು ನಾನು ಪ್ರಸ್ತಾಪಿಸಿರುವ ಪಂಜಾಬ್ ಮಾದರಿ ಇರಬಹುದು- ಪಂಜಾಬ್‌ಗಾಗಿ ಯಾರು ನಿಜಕ್ಕೂ ಹೋರಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿದೆ ಎನ್ನುವುದು ಸ್ಪಷ್ಟ' ಎಂದು ಸಿಧು ಟ್ವೀಟ್ ಮಾಡಿದ್ದಾರೆ. 'ವಿರೋಧಪಕ್ಷವು ನನ್ನನ್ನು ಪ್ರಶ್ನಿಸುವ ಧೈರ್ಯ ಮಾಡಿದರೆ, ಅವರು ನನ್ನ ಜನಪರ ಕಾರ್ಯಸೂಚಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಅರ್ಥ ಅವರು ತಮ್ಮ ಹಣೆಬರಹದ ಬಗ್ಗೆ ವೈರಾಗ್ಯ ಹೊಂದಿದ್ದಾರೆ ಎಂದು' ಎಂಬುದಾಗಿ ಅವರು ಬರೆದುಕೊಂಡಿದ್ದಾರೆ. 2017ರಲ್ಲಿ ಬಿಜೆಪಿಯನ್ನು ತೊರೆದಿದ್ದಕ್ಕೆ ಮತ್ತು ಅಕಾಲಿ ದಳ ಹಾಗೂ ಬಾದಲ್ ಕುಟುಂಬದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಎಎಪಿ ಮುಖಂಡ ಸಂಜಯ್ ಸಿಂಗ್ ಅವರು ಸಿಧು ಅವರನ್ನು ಹೊಗಳುವ ಹಳೆಯ ವಿಡಿಯೋ ತುಣುಕಿಗೆ ಪ್ರತಿಕ್ರಿಯೆಯಾಗಿ ಸಿಧು ಟ್ವೀಟ್ ಮಾಡಿದ್ದಾರೆ. ಅಧಿಕಾರಕ್ಕಾಗಿ ಗುದ್ದಾಡುತ್ತಿರುವ ಸಿಧು ಅವರು, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜತೆ ಸುದೀರ್ಘ ಸಮಯದಿಂದ ಕಿತ್ತಾಡುತ್ತಿದ್ದಾರೆ. ಇತ್ತೀಚೆಗೆ ದಿಲ್ಲಿಗೆ ತೆರಳಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. 2017ರಲ್ಲಿ ಬಿಜೆಪಿ ತ್ಯಜಿಸಿ ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈಗ ಅವರು ಎಎಪಿ ಪರ ಮೃದು ಧೋರಣೆ ವ್ಯಕ್ತಪಡಿಸಿರುವುದು ಮತ್ತೊಂದು ಸುತ್ತಿನ ಪಕ್ಷಾಂತರಕ್ಕೆ ನೀಡಿರುವ ಸೂಚನೆ ಎಂದು ಹೇಳಲಾಗುತ್ತಿದೆ.