ಬರೆದಿಡಿ, ಕೃಷಿ ಕಾಯ್ದೆ ರದ್ದಾಗಲಿವೆ: ರಾಹುಲ್ ಗಾಂಧಿಯ ಹಳೆಯ ವಿಡಿಯೋ ವೈರಲ್
ಬರೆದಿಡಿ, ಕೃಷಿ ಕಾಯ್ದೆ ರದ್ದಾಗಲಿವೆ: ರಾಹುಲ್ ಗಾಂಧಿಯ ಹಳೆಯ ವಿಡಿಯೋ ವೈರಲ್
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಈ ಕಾಯ್ದೆಗಳನ್ನು ವಾಪಸ್ ಪಡೆಯುವಂತಾಗಲಿದೆ. ಇದನ್ನು ಬರೆದಿಟ್ಟುಕೊಳ್ಳಿ ಎಂದು ಆಗ ರಾಹುಲ್ ಹೇಳಿದ್ದರು.
ಹೊಸದಿಲ್ಲಿ: ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗಳಿಗೆ ಕೊನೆಗೂ ಮಣಿದು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಘೋಷಿಸಿದೆ. ಈ ನಿರ್ಧಾರದ ಬಳಿಕ ರೈತ ಸಂಘಟನೆಗಳು ಮಾತ್ರವಲ್ಲದೆ, ವಿರೋಧ ಪಕ್ಷಗಳು ಕೂಡ ಸಂಭ್ರಮಾಚರಣೆಯಲ್ಲಿ ತೊಡಗಿವೆ. ರೈತ ಸಂಘಟನೆಗಳಲ್ಲದೆ ಪ್ರಮುಖ ವಿರೋಧಪಕ್ಷ ಕೂಡ ಈ ಗೆಲುವು ತನ್ನದೂ ಆಗಿದೆ ಎಂದು ಹೇಳಿಕೊಂಡಿದೆ.
ಕಾಂಗ್ರೆಸ್ ನಾಯಕ ಅವರು ತಮ್ಮ ಹಳೆಯ ಹೇಳಿಕೆಯ ವಿಡಿಯೋ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಸರ್ಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಆಗಲಿದೆ' ಎಂದು ಈ ವರ್ಷದ ಜನವರಿ 14ರಂದು ರಾಹುಲ್ ಗಾಂಧಿ ಹೇಳಿದ್ದರು. ಈ ವಿಡಿಯೋ ಹೇಳಿಕೆಯನ್ನು ಒಳಗೊಂಡ ಟ್ವೀಟ್ ಅನ್ನು ರಾಹುಲ್ ಗಾಂಧಿ ಶುಕ್ರವಾರ ಮತ್ತೆ ಹಂಚಿಕೊಂಡಿದ್ದಾರೆ.
'ನಮ್ಮ ರೈತರು ಏನು ಮಾಡುತ್ತಿದ್ದಾರೋ ಅದರ ಬಗ್ಗೆ ನನಗೆ ಬಹಳ ಬಹಳ ಹೆಮ್ಮೆ ಇದೆ ಮತ್ತು ರೈತರನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವರೊಂದಿಗೆ ನಿಲ್ಲುವುದನ್ನು ಮುಂದುವರಿಸಲಿದ್ದೇನೆ. ಪಂಜಾಬ್‌ನಲ್ಲಿ ಯಾತ್ರೆಯ ವೇಳೆ ಅವರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೆ. ಅದನ್ನು ಮುಂದುವರಿಸಲಿದ್ದೇನೆ. ನನ್ನ ಮಾತು ಬರೆದಿಟ್ಟುಕೊಳ್ಳಿ. ಈ ಕಾನೂನುಗಳನ್ನು ಸರ್ಕಾರವು ಹಿಂದಕ್ಕೆ ಪಡೆದುಕೊಳ್ಳುವಂತಹ ಒತ್ತಡಕ್ಕೆ ಸಿಲಕುತ್ತದೆ. ನಾನು ಹೇಳಿದ್ದನ್ನು ನೆನಪಿಟ್ಟುಕೊಳ್ಳಿ' ಎಂದು ಜನವರಿ 14ರಂದು ಮದುರೆ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಘೋಷಣೆಯು ಅನ್ಯಾಯದ ವಿರುದ್ಧದ ದಿಗ್ವಿಜಯ. ಅಹಂಕಾರವು ರೈತರ ಶಾಂತಿಯುತ ಸತ್ಯಾಗ್ರಹದ ಎದುರು ತಲೆಬಾಗಿದೆ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.