ಐಎಂಎ ಹಗರಣ,ಮಾಜಿ ಸಚಿವ ರೋಷನ್‌ ಬೇಗ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ಮಾಜಿ ಸಚಿವರ ರೋಷನ್‌ ಬೇಗ್‌, ಚುನಾವಣಾ ವೆಚ್ಚಗಳಿಗಾಗಿ ಐಎಂಎನಿಂದ ಹಣ ಸ್ವೀಕರಿಸಿದ್ದಲ್ಲದೆ, ತಮ್ಮ ದಾನೀಶ್‌ ಪಬ್ಲಿಕೇಷನ್‌ನ ದೈನಂದಿನ ಖರ್ಚು, ವೆಚ್ಚ ಹಾಗೂ ನೌಕರರ ವೇತನಗಳಿಗೆ ಈ ಹಣವನ್ನು ಬಳಸಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.

ಐಎಂಎ ಹಗರಣ,ಮಾಜಿ ಸಚಿವ ರೋಷನ್‌ ಬೇಗ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌
Linkup
ಬೆಂಗಳೂರು: ಸುಮಾರು 4 ಸಾವಿರ ಕೋಟಿ ರೂ. ಮೊತ್ತದ ಐಎಂಎ ವಂಚನೆ ಹಗರಣದಲ್ಲಿ ಮಾಜಿ ಸಚಿವ ಸೇರಿದಂತೆ ಇನ್ನಿತರರ ವಿರುದ್ಧ ಕೇಂದ್ರ ತನಿಖಾ ದಳ () ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಆರೋಪಿ ರೋಷನ್‌ ಬೇಗ್‌, ಚುನಾವಣಾ ವೆಚ್ಚಗಳಿಗಾಗಿ ಐಎಂಎನಿಂದ ಫಂಡ್‌ ಸ್ವೀಕರಿಸಿದ್ದಾರೆ. ಅಲ್ಲದೆ, ತಮ್ಮ ದಾನೀಶ್‌ ಪಬ್ಲಿಕೇಷನ್‌ನ ದೈನಂದಿನ ಖರ್ಚು, ವೆಚ್ಚ ಹಾಗೂ ನೌಕರರ ವೇತನಗಳಿಗೆ ಬಳಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಜನಪ್ರಿಯತೆಗಾಗಿ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಫಂಡ್‌ ಬಳಸಿಕೊಂಡಿದ್ದಾರೆ. ಐಎಂಎನಿಂದ ಪಡೆದ ಹಣ ಅಮಾಯಕ ಜನರಿಂದ ಅಕ್ರಮವಾಗಿ ಡೆಪಾಸಿಟ್‌ ರೂಪದಲ್ಲಿ ಪಡೆದಿದ್ದಾಗಿದೆ. ಈ ಹಣವನ್ನು ಸ್ಥಿರಾಸ್ತಿ ಮತ್ತು ಚರಾಸ್ತಿ ಖರೀದಿಗೆ, ಲಂಚ ನೀಡಲು ಮತ್ತಿತರ ಕಾನೂನುಬಾಹಿರ ಕೆಲಸಗಳಿಗೆ ಬಳಸಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಸಿಬಿಐ ತಿಳಿಸಿದೆ. ಪ್ರಕರಣದಲ್ಲಿ ರೋಷನ್‌ ಬೇಗ್‌ 29ನೇ ಆರೋಪಿಯಾಗಿದ್ದಾರೆ. ರೋಷನ್‌ ಬೇಗ್‌ ಜತೆಗೆ, ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌, ನಿರ್ದೇಶಕರಾದ ನಿಜಾಮುದ್ದೀನ್‌, ನವೀದ್‌ ಅಹಮದ್‌, ವಾಸೀಂ, ಇಶ್ತಿಯಾಕ್‌ ಅಹಮದ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಈಗಾಗಲೇ ಹಲವು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ್ದು, ತನಿಖೆ ಮುಂದುವರೆದಿದೆ.