12 ಅತಿ ದಟ್ಟಣೆ ಕಾರಿಡಾರ್‌ಗಳಿಗೆ ಹೊಸ ಸ್ಪರ್ಶ; ಕೆಆರ್‌ಡಿಸಿಎಲ್‌ಗೆ ಹೊಣೆ, 1120.48 ಕೋಟಿ ರೂ. ವೆಚ್ಚ!

ರಾಷ್ಟ್ರೀಯ ಹೆದ್ದಾರಿಗಳ ಮಾದರಿಯಲ್ಲಿ ರಸ್ತೆಗಳು ಸುಸಜ್ಜಿತವಾಗಿರುವಂತೆ 24 ಗಂಟೆಯೂ ನಿಗಾ ಇಡಲಾಗುತ್ತದೆ. ಅಷ್ಟೇ ಅಲ್ಲ; ವಾಹನಗಳು ರಸ್ತೆಯಲ್ಲೇ ಕೆಟ್ಟು ನಿಂತರೆ ಟೋಯಿಂಗ್‌ ಮಾಡಿ, ಟ್ರಾಫಿಕ್‌ಜಾಮ್‌ ಆಗದಂತೆ ಎಚ್ಚರ ವಹಿಸಲಾಗುತ್ತದೆ. ನಿತ್ಯವೂ ಈ ರಸ್ತೆಗಳನ್ನು ಶುಚಿಗೊಳಿಸಿ, ಕಸ ಇಲ್ಲದಂತೆ ಮಾಡಲಾಗುತ್ತದೆ. ಒಟ್ಟು 18 ಬಗೆಯ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ ನಿರ್ವಹಣೆ ಮಾಡಲಿದೆ.

12 ಅತಿ ದಟ್ಟಣೆ ಕಾರಿಡಾರ್‌ಗಳಿಗೆ ಹೊಸ ಸ್ಪರ್ಶ; ಕೆಆರ್‌ಡಿಸಿಎಲ್‌ಗೆ ಹೊಣೆ, 1120.48 ಕೋಟಿ ರೂ. ವೆಚ್ಚ!
Linkup
ಬೆಂಗಳೂರು: ನಗರದ 12 ಅತಿ ದಟ್ಟಣೆ ಕಾರಿಡಾರ್‌ಗಳಿಗೆ ಹೊಸ ರೂಪ ನೀಡುವ ಜವಾಬ್ದಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ () ವಹಿಸಲಾಗಿದೆ. ಈ ರಸ್ತೆಗಳ ಉನ್ನತೀಕರಣ ಮತ್ತು ನಿರ್ವಹಣೆ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಅಂತಿಮಗೊಂಡರೆ, ವಾಹನ ಸವಾರರಿಗೆ ಟ್ರಾಫಿಕ್‌ ಕಿರಿಕಿರಿಯಿಂದ ಕೊಂಚಮಟ್ಟಿಗೆ ಮುಕ್ತಿ ಸಿಗಲಿದೆ. ರಾಜ್ಯ ಸರಕಾರವು 12 ಹೈಡೆನ್ಸಿಟಿ ಕಾರಿಡಾರ್‌ಗಳ ನಿರ್ವಹಣೆ ಹೊಣೆಯನ್ನು ಬಿಬಿಎಂಪಿ ಬದಲಿಗೆ ಕೆಆರ್‌ಡಿಸಿಎಲ್‌ ಹೆಗಲಿಗೆ ಹಾಕಿದೆ. ಈ ರಸ್ತೆಗಳ ಅಭಿವೃದ್ಧಿ ಮತ್ತು ದೈನಂದಿನ ನಿರ್ವಹಣೆಗೆ 1120.48 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಯ ಟೆಂಡರ್‌ ನ್ಯೂನತೆಗಳ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದರಿಂದ ಹಾಗೂ ಅಕ್ರಮದ ಆರೋಪಗಳ ಹಿನ್ನೆಲೆಯಲ್ಲಿ ಮರು ಟೆಂಡರ್‌ ಕರೆಯಲು ನಗರಾಭಿವೃದ್ಧಿ ಇಲಾಖೆಯು ಆದೇಶಿಸಿದೆ. ನಿಗಮವು 12 ಅತಿ ಹೆಚ್ಚು ದಟ್ಟಣೆಯ ಕಾರಿಡಾರ್‌ಗಳಲ್ಲಿ 68 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಿದರೂ, 191 ಕಿ.ಮೀ ಉದ್ದದ ಮಾರ್ಗದಲ್ಲಿ ನಾನಾ ಕಾಮಗಾರಿಗಳನ್ನು ನಿರ್ವಹಿಸಲಿದೆ. ಇಷ್ಟೂ ಉದ್ದಕ್ಕೂ ಹೊಸದಾಗಿ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಿದೆ. ವಿಭಜಕಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸಿ, ಸುಂದರೀಕರಣಗೊಳಿಸುತ್ತದೆ. ಪಾದಚಾರಿಗಳು ಬೇಕಾಬಿಟ್ಟಿ ರಸ್ತೆ ದಾಟುವುದಕ್ಕೆ ಕಡಿವಾಣ ಹಾಕಲು ಎತ್ತರದ ವಿಭಜಕಗಳನ್ನು ಅಳವಡಿಸಲಾಗುತ್ತದೆ. ರಸ್ತೆ ಪಕ್ಕದ ಮಳೆ ನೀರು ಚರಂಡಿಗಳ ಅಭಿವೃದ್ಧಿ, ಹೂಳು ತೆರವು, ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಸುಗಮ ಸಂಚಾರಕ್ಕೆ ಅನುವು, ರಸ್ತೆ ಗುಂಡಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಮಾದರಿಯಲ್ಲಿ ರಸ್ತೆಗಳು ಸುಸಜ್ಜಿತವಾಗಿರುವಂತೆ 24 ಗಂಟೆಯೂ ನಿಗಾ ಇಡಲಾಗುತ್ತದೆ. ಅಷ್ಟೇ ಅಲ್ಲ; ವಾಹನಗಳು ರಸ್ತೆಯಲ್ಲೇ ಕೆಟ್ಟು ನಿಂತರೆ ಟೋಯಿಂಗ್‌ ಮಾಡಿ, ಟ್ರಾಫಿಕ್‌ಜಾಮ್‌ ಆಗದಂತೆ ಎಚ್ಚರ ವಹಿಸಲಾಗುತ್ತದೆ. ನಿತ್ಯವೂ ಈ ರಸ್ತೆಗಳನ್ನು ಶುಚಿಗೊಳಿಸಿ, ಕಸ ಇಲ್ಲದಂತೆ ಮಾಡಲಾಗುತ್ತದೆ. ಒಟ್ಟು 18 ಬಗೆಯ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ ನಿರ್ವಹಣೆ ಮಾಡಲಿದೆ. ಮರು ಟೆಂಡರ್‌ ಆಹ್ವಾನಿಸಲು ಆದೇಶ 191 ಕಿ.ಮೀ ಉದ್ದದ 12 ಕಾರಿಡಾರ್‌ಗಳ ಪ್ರಾರಂಭಿಕ ಹಂತದ ಉನ್ನತೀಕರಣಕ್ಕೆ 335.17 ಕೋಟಿ ರೂ. ಹಾಗೂ ದೈನಂದಿನ ನಿರ್ವಹಣೆಗೆ ಮೊದಲ 142.12 ಕೋಟಿ, ಉಳಿದ ನಾಲ್ಕು ವರ್ಷಗಳಿಗೆ 643.19 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಿ ಕೆಆರ್‌ಡಿಸಿಎಲ್‌ ಟೆಂಡರ್‌ ಆಹ್ವಾನಿಸಿತ್ತು. ಒಟ್ಟು 1120.48 ಕೋಟಿ ವೆಚ್ಚದ ಯೋಜನೆಗೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗಿತ್ತು. ಇದರಲ್ಲಿ ಹಲವು ನ್ಯೂನತೆಗಳು ಹಾಗೂ ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟೆಂಡರ್‌ ರದ್ದುಪಡಿಸಿ, ಹೊಸದಾಗಿ ಮರು ಟೆಂಡರ್‌ ಕರೆಯಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯು ಕೆಆರ್‌ಡಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಡಿ. 12ರಂದು ಆದೇಶಿಸಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಸ್ಪಷ್ಟನೆ ಕೇಳಿದ್ದಾರೆ. ಕೆಆರ್‌ಡಿಸಿಎಲ್‌ಗೆ ವಹಿಸಿರುವ 191 ಕಿ.ಮೀ ಉದ್ದದ ರಸ್ತೆಗಳ ಪೈಕಿ 98 ಕಿ.ಮೀ ಬಿಬಿಎಂಪಿ ಅಧೀನದಲ್ಲಿದೆ. ಇದರಲ್ಲಿ 51 ಕಿ.ಮೀ ಉದ್ದದ ರಸ್ತೆಗಳಿಗೆ ವೈಟ್‌ಟಾಪಿಂಗ್‌ ಮಾಡಲಾಗಿದೆ. ಇನ್ನು ಅಭಿವೃದ್ಧಿಪಡಿಸಲು ಬಾಕಿ ಇರುವುದು 67 ಕಿ.ಮೀ ಮಾತ್ರ. ಆದರೂ, 191 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ಟೆಂಡರ್‌ ಕರೆದು ಗುತ್ತಿಗೆ ನೀಡಿದ್ದು ಏಕೆ ಎಂದು ಪ್ರಶ್ನಿಸಲಾಗಿದೆ. ರಸ್ತೆಗಳ ಅಭಿವೃದ್ಧಿಗೆ 335 ಕೋಟಿ ರೂ. ವೆಚ್ಚ ಮಾಡಿ, ಅವುಗಳ ನಿರ್ವಹಣೆಗೆ ಐದು ವರ್ಷಗಳಲ್ಲಿ 785 ಕೋಟಿ ರೂ. ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ರಸ್ತೆ ಅಭಿವೃದ್ಧಿಪಡಿಸಿದರೂ ಅವುಗಳಿಗೆ ಎರಡು ವರ್ಷಗಳ ದೋಷಭಾದ್ಯತಾ ಅವಧಿ ಇರುತ್ತದೆ. ಈ ಅವಧಿಯಲ್ಲಿ ಏನೇ ದೋಷ ಕಾಣಿಸಿಕೊಂಡರೂ ಗುತ್ತಿಗೆದಾರನೇ ಸರಿಪಡಿಸಬೇಕು. ಹಾಗಿದ್ದರೂ, ಮೊದಲೆರಡು ವರ್ಷಗಳಲ್ಲಿ ರಸ್ತೆಗಳ ನಿರ್ವಹಣೆಗೆ 291.35 ಕೋಟಿ ರೂ. ಏಕೆ ಖರ್ಚು ಮಾಡಲು ಹೊರಟಿದ್ದೀರಿ ಎಂಬುದಕ್ಕೆ ಸಮರ್ಥನೆ ನೀಡುವಂತೆ ಸೂಚಿಸಲಾಗಿದೆ. 2017-18ನೇ ಸಾಲಿನಲ್ಲಿ ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಕಾಮಗಾರಿಗಳು ನಾನಾ ಹಂತಗಳಲ್ಲಿ ಪ್ರಗತಿಯಲ್ಲಿವೆ. 191 ಕಿ.ಮೀ ಪೈಕಿ 124 ಕಿ.ಮೀ ಉದ್ದದ ರಸ್ತೆಗಳು ಅಭಿವೃದ್ಧಿಯಾಗಿವೆ. 53.42 ಕಿ.ಮೀ ಉದ್ದದ ರಸ್ತೆಗಳಿಗೆ ವೈಟ್‌ಟಾಪಿಂಗ್‌ ಮಾಡಲಾಗಿದ್ದು, ಇವುಗಳ ನಿರ್ವಹಣೆಗೆ ತೀರಾ ಕಡಿಮೆ ವೆಚ್ಚವಾಗುತ್ತದೆ. ಆದರೂ, ಕಾರಿಡಾರ್‌ಗಳ ನಿರ್ವಹಣೆಗೆ ಕೋಟ್ಯಂತರ ರೂ. ಏಕೆ ಬೇಕು. ಹೆಬ್ಬಾಳ-ಕೆ.ಆರ್‌.ಪುರ-ಸಿಲ್ಕ್ಬೋರ್ಡ್‌ ಹೊರವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಾಣವಾಗುತ್ತಿದ್ದು, ಈ ಹಂತದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸಾಧುವೇ? ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಕಪ್ಪು ಪಟ್ಟಿ ಸೇರಿದ್ದ ಗುತ್ತಿಗೆದಾರನಿಗೆ ಟೆಂಡರ್‌ ಪ್ಯಾಕೇಜ್‌-3ರ ಗುತ್ತಿಗೆದಾರ ಉದಯ್‌ ಶಿವಕುಮಾರ್‌ ಅವರನ್ನು ಲೋಕೋಪಯೋಗಿ ಇಲಾಖೆಯು 2019ರ ಮೇ 27ರಂದು ಕಪ್ಪು ಪಟ್ಟಿಗೆ ಸೇರಿಸಿತ್ತು. ಟೆಂಡರ್‌ನಲ್ಲಿ ತಾಂತ್ರಿಕ ಅರ್ಹತೆ ಪಡೆಯಲು ಐದು ವರ್ಷಗಳಲ್ಲಿ 80 ಕೋಟಿ ರೂ. ಮೊತ್ತದ ಯಾವುದಾದರೂ ಕಾಮಗಾರಿ ನಿರ್ವಹಿಸಿರಬೇಕು. ಆದರೆ, ಈ ಗುತ್ತಿಗೆದಾರ 60 ಕೋಟಿಗಿಂತ ಹೆಚ್ಚು ಮೊತ್ತದ ಸರಕಾರಿ ಕಾಮಗಾರಿ ರ್ನಿಹಿಸಿಲ್ಲ. ಆರಂಭದಲ್ಲಿ ಇದೇ ಗುತ್ತಿಗೆದಾರನಿಗೆ ತಾಂತ್ರಿಕ ಅರ್ಹತೆ ಇಲ್ಲವೆಂದು ಅನರ್ಹಗೊಳಿಸಲಾಗಿತ್ತು. ನಂತರ ಅವರು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಕೆಆರ್‌ಡಿಸಿಎಲ್‌ಗೆ ತಾಕೀತು ಮಾಡಲಾಗಿದೆ. ಟೆಂಡರ್‌ ರದ್ದು ಆದೇಶ ಸ್ವಾಗತಿಸಿರುವ ರಾಮಲಿಂಗಾರೆಡ್ಡಿ 12 ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯ 4 ಪ್ಯಾಕೇಜ್‌ಗಳ ಟೆಂಡರ್‌ ರದ್ದುಗೊಳಿಸಿ, ಹೊಸದಾಗಿ ಮರು ಟೆಂಡರ್‌ ಆಹ್ವಾನಿಸಲು ಆದೇಶಿಸಿರುವ ಸರಕಾರದ ಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸ್ವಾಗತಿಸಿದ್ದಾರೆ. ಈ ಯೋಜನೆಯ ವಿರುದ್ಧದ ದೂರುಗಳನ್ವಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಈ ಎಲ್ಲ ವಿಷಯಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲು ಮತ್ತು ಕೆಟಿಪಿಪಿ ಕಾಯಿದೆಗೆ ಅನುಗುಣವಾಗಿ ಮರುಟೆಂಡರ್‌ ಆಹ್ವಾನಿಸಲು ಆದೇಶಿಸಿರುವುದು ತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅತಿದಟ್ಟಣೆ ಕಾರಿಡಾರ್‌ಗಳ ವಿವರ ಕಾರಿಡಾರ್‌ನ ಹೆಸರು-ಉದ್ದ (ಕಿ.ಮೀ ಗಳಲ್ಲಿ)
  • ಬಳ್ಳಾರಿ ರಸ್ತೆಯ ಚಾಲುಕ್ಯ ವೃತ್ತದಿಂದ ಹೆಬ್ಬಾಳ- 7.45
  • ಹಳೆ ಮದ್ರಾಸ್‌ ರಸ್ತೆಯ ಟ್ರಿನಿಟಿ ವೃತ್ತದಿಂದ ವೈಟ್‌ಫೀಲ್ಡ್‌- 18.5
  • ಎಸಿಎಸ್‌ ಸೆಂಟರ್‌ನಿಂದ ಕಾಡುಗೋಡಿ- 17.15
  • ಸರ್ಜಾಪುರ ರಸ್ತೆ -8.75
  • ಹೊಸೂರು ರಸ್ತೆಯ ವೆಲ್ಲಾರ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್- 6.45
  • ಬನ್ನೇರುಘಟ್ಟ ರಸ್ತೆ- 16.50
  • ಕನಕಪುರ ರಸ್ತೆ 14.150
  • ಮೈಸೂರು ರಸ್ತೆ- 15.40
  • ಮಾಗಡಿ ರಸ್ತೆ- 12
  • ತುಮಕೂರು ರಸ್ತೆ- 7.90
  • ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ- 8.40
  • ಹೊರವರ್ತುಲ ರಸ್ತೆಯ ತುಮಕೂರು ರಸ್ತೆಯಿಂದ ಮೈಸೂರು ರಸ್ತೆ -10.90
  • ಹೊತವರ್ತುಲ ರಸ್ತೆಯ ತುಮಕೂರು ರಸ್ತೆಯಿಂದ ಕೆ.ಆರ್‌.ಪುರ- 18.60
  • ಹೊರವರ್ತುಲ ರಸ್ತೆಯ ಕೆ.ಆರ್‌.ಪುರದಿಂದ ಸಿಲ್ಕ್ ಬೋರ್ಡ್- 16.50
  • ಹೊರವರ್ತುಲ ರಸ್ತೆಯ ಸಿಲ್ಕ್ ಬೋರ್ಡ್‌ನಿಂದ ಮೈಸೂರು ರಸ್ತೆ- 12