ಬೆಲೆ ಏರಿಕೆ ವಿರುದ್ಧ ಕೈ ನಾಯಕರಿಂದ ಪ್ರತಿಭಟನೆ: ಟಾಂಗಾ ಗಾಡಿ ಮೂಲಕ ವಿಧಾನಸೌಧ ಚಲೋ

ಬೆಲೆ ಏರಿಕೆ ವಿರುದ್ಧ ವಿಧಾನಮಂಡಲ ಕಲಾಪದ ಮೊದಲ ದಿನ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕರು, ಕೊನೆಯ ದಿನವಾದ ಶುಕ್ರವಾರ ಟಾಂಗಾದಲ್ಲಿ ವಿಧಾನಸೌಧಕ್ಕೆ ಆಗಮಿಸಿ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.

ಬೆಲೆ ಏರಿಕೆ ವಿರುದ್ಧ ಕೈ ನಾಯಕರಿಂದ ಪ್ರತಿಭಟನೆ: ಟಾಂಗಾ ಗಾಡಿ ಮೂಲಕ ವಿಧಾನಸೌಧ ಚಲೋ
Linkup
ಬೆಂಗಳೂರು: ವಿಧಾನಮಂಡಲ ಅಧಿವೇಶನದ ಮೊದಲ ದಿನ ಎತ್ತಿಗಾಡಿಯಲ್ಲಿ ವಿಧಾನಸೌಧಕ್ಕೆ ಬರುವ ಮೂಲಕ ವಿರುದ್ಧ ಪ್ರತಿಭಟನೆ ನಡೆಸಿದ್ದ ನಾಯಕರು, ಕೊನೆಯ ದಿನವಾದ ಶುಕ್ರವಾರವೂ ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಾಥಾ ನಡೆಸುವ ಮೂಲಕ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಕಾಂಗ್ರೆಸ್ ಮುಖಂಡರು ಟಾಂಗಾ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದರು. ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಜೆ ಜಾರ್ಜ್, ರಾಮಲಿಂಗಾರೆಡ್ಡಿ ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಿದ್ದರು. ‌ ಕೆಲವು ದಿನಗಳ ಹಿಂದಷ್ಟೇ ಎತ್ತಿನಗಾಡಿ ಮೆರವಣಿಗೆ, ಸೈಕಲ್ ಜಾಥಾಗಳನ್ನು ನಡೆಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.‌ ಇದೀಗ ಕುದುರೆ ಗಾಡಿ ಮೂಲಕ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಖಂಡನೆ ವ್ಯಕ್ತಪಡಿಸಿದರು. ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಆಗ್ತಿದೆ. ಅಗತ್ಯ ವಸ್ತುಗಳ ಬೆಲೆ ಕೂಡ ದುಪ್ಪಟ್ಟು ಆಗ್ತಿದೆ. ಇದರಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಆಗ್ತಿದ್ರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈ ಕಟ್ಟಿ ಕುಳಿತಿವೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕೂಡಲೇ ತೈಲ ಬೆಲೆ ಇಳಿಕೆ ಮಾಡಬೇಕು, ಅಗತ್ಯ ವಸ್ತುಗಳ ಬೆಲೆ ಕೂಡಲೇ ಇಳಿಕೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಬದುಕಿಗೆ ಬೆಂಕಿ ಬಿದ್ದಿದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೊದಲ ದಿನ‌ ಎತ್ತಿನ ಬಂಡಿಯಲ್ಲಿ ಪ್ರತಿಭಟನೆ, ಇಂದು ಟಾಂಗಾ ಗಾಡಿಗಳ ಮೂಲಕ ಪ್ರತಿಭಟನೆ. ಮೋದಿ ಪ್ರಧಾನಿಯಾದ ಮೇಲೆ ಎಲ್ಲರ ಬದುಕಿಗೆ ಬೆಂಕಿ ಬಿದ್ದಿದೆ. ಬೆಲೆ ಏರಿಕೆಯಿಂದ ಬಡವರ ಬದುಕು ದುಸ್ತರವಾಗಿದೆ.‌ ಬದುಕು ನಡೆಸಲು ಆಗುತ್ತಿಲ್ಲ. ಕೆಲಸವಿಲ್ಲ, ಕೆಲಸವಿದ್ದರೂ ಅವರಿಗೆ ಸಂಬಳ ಹೆಚ್ಚಾಗಿಲ್ಲ. ಡೀಸೆಲ್ ಒಂದು ರೀತಿಯಲ್ಲಿ ರಕ್ತ ಇದ್ದಂತೆ. ಜನರ ಜೀವನದಲ್ಲಿ ಡೀಸೆಲ್ ರಕ್ತದಂತೆ ಪಾತ್ರವಹಿಸುತ್ತದೆ. ಆದರೆ ಡೀಸೆಲ್ ಮೇಲೆ 31.84 ರೂ ತೆರಿಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಮೇಲೆ 32 ರೂ ತೆರಿಗೆ ಹಾಕಿದ್ದಾರೆ. ಇದರಿಂದ ಜನರು ಜೀವನ ನಡೆಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು. ಹೀಗಾಗಿ ಜನರು 4.17 ಲಕ್ಷ ಕೋಟಿ ಬೆಲೆಯ ಚಿನ್ನಾಭರಣ ಅಡ ಇಟ್ಟಿದ್ದಾರೆ. ‌ಸುಮಾರು 1500 ಟನ್ ಗೂ ಅಧಿಕ ಚಿನ್ನ ಒತ್ತೆ ಇಟ್ಟಿದ್ದಾರೆ. ಮಣಪ್ಪುರಂ ಹಾಗೂ ಮುತ್ತೂಟ್ ಫೈನಾನ್ಸ್‌ಗಳಲ್ಲಿ ಅಡ ಇಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು. ಮೋದಿ ಕಾರ್ಪೊರೇಟ್ ಜನರ ಪರ ಇದ್ದಾರೆ. ಕಾಂಗ್ರೆಸ್ ಜನರ ಪರ, ಬಡವರ ಪರವಾಗಿದೆ. ಬಿಜೆಪಿ ಸರ್ಕಾರ ಆದಷ್ಟು ಬೇಗ ತೊಲಗಬೇಕು. ಎಷ್ಟು ಬೇಗ ತೊಲಗುತ್ತೆ ಅಷ್ಟು ಒಳ್ಳೆಯದು ಎಂದ ಅವರು, ಇಂತಹ ಕೆಟ್ಟ ಸರ್ಕಾರ ನಾನು ನೋಡಿಯೇ ಇಲ್ಲ. ಕ್ರೂರ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ರೈತರ ಪ್ರತಿಭಟನೆ ಪ್ರಾಯೋಜಿತ ಅಂತಾರೆ. ಬಸವರಾಜ ಬೊಮ್ಮಾಯಿ ಹೋರಾಟ ಮಾಡಿ ಬಂದಿಲ್ಲ. ಪಾಪ ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಸರ್ಕಾರ ತಂದ್ರು. ಯಡಿಯೂರಪ್ಪನ್ನು ಕೆಳಗಿಳಿಸಿ ಬಂದು ಕೂತಿದ್ದಾರೆ. ಇವರಿಗೆ ಹೋರಾಟವೇ ಗೊತ್ತಿಲ್ಲ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇವರೆಲ್ಲ ಭಂಡರು, ಲಜ್ಜೆಗೆಟ್ಟವರು. ಸಚಿವರು, ಶಾಸಕರು ಉಡಾಫೆಯಾಗಿ ಮಾತನಾಡುತ್ತಾರೆ. ಅವರಿಗೆ ಜನರ ಬಗ್ಗೆ ಕಳಕಳಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನರ ಪಿಕ್ ಪಾಕೆಟ್ ಮಾಡುತ್ತಿದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಇಡೀ ದೇಶದ ಜನ ಇಂದು ನರಳುತ್ತಿದ್ದಾರೆ. ಎಲ್ಲ‌ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಸರ್ಕಾರ ಜನರ ಪಿಕ್ ಪ್ಯಾಕೆಟ್ ಮಾಡುತ್ತಿದೆ ಎಂದು ಆರೋಪಿಸಿದರು. ಜನರ ನೋವು ಭಾವನೆ ಅರ್ಥವಾಗುತ್ತಿಲ್ಲ, ಹೀಗಾಗಿ ನಾವು ಕಣ್ಣು ತೆರೆಸಲು ಹೋರಾಟ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷ ಹೋರಾಟವಲ್ಲ, ಬದಲಾಗಿ ಜನರ ಪರ ನಾವು ಹೋರಾಟ ಮಾಡುತ್ತಿದ್ದೇವೆ. ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.‌ ಜನರೇ ಈ ಸರ್ಕಾರವನ್ನು ಕಿತ್ತೆಸೆಯುತ್ತಾರೆ ಎಂದರು. ಬಗ್ಗೆ ಅಶೋಕ್ ಕಿಡಿಕಾಂಗ್ರೆಸ್ ಟಾಂಗಾ ಪ್ರತಿಭಟನೆಗೆ ಸಚಿವ ಆರ್.‌ಅಶೋಕ್ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸೋತು ಮುಲೆಗುಂಪಾಗಿದೆ. ಕಾಂಗ್ರೆಸ್‌ನವರು ದಿನಕ್ಕೊಂದು ಗಿಮಿಕ್ ಮಾಡ್ತಿದ್ದಾರೆ. ಅವರು ಬದುಕಿ ಉಳಿದಿದ್ದೇವೆ ಅಂತ ತೋರಿಸೋಕೆ ಹೊರಟಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ ಅದನ್ನು ಮರೆಮಾಚಲು ಈ ರೀತಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.