ಉಗ್ರರಿಂದ ಬಚಾವ್‌ ಮಾಡಿದ ಪ್ರಧಾನಿ ಮೋದಿಗೆ ಧನ್ಯವಾದ ಎಂದ ಅಫ್ಘಾನಿಸ್ತಾನ ಸಂಸದರು..!

'ಆಫ್ಘನ್‌ನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ನನಗೆ ಅಳು ಬರುತ್ತಿದೆ. ನಾವು 20 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಎಲ್ಲವೂ ಕ್ಷಣಾರ್ಧದಲ್ಲಿ ನಾಶವಾಗಿದೆ' - ಅಫ್ಘಾನಿಸ್ತಾನ ಸಂಸದರ ಅಳಲು

ಉಗ್ರರಿಂದ ಬಚಾವ್‌ ಮಾಡಿದ ಪ್ರಧಾನಿ ಮೋದಿಗೆ ಧನ್ಯವಾದ ಎಂದ ಅಫ್ಘಾನಿಸ್ತಾನ ಸಂಸದರು..!
Linkup
: ಅಫ್ಘಾನಿಸ್ತಾನದ ಇಬ್ಬರು ಸಂಸದರು ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. 'ನನ್ನ ಜೀವ ಉಳಿಸಿ, ಭಾರತಕ್ಕೆ ಕರೆ ತಂದಿದ್ದಕ್ಕೆ ನರೇಂದ್ರ ಮೋದಿ ಅವರಿಗೆ ಧನ್ಯವಾದ' ಎಂದು ಆಫ್ಘನ್‌ ಸಂಸದೆ ಅನಾರ್ಕಲಿ ಕೌರ್‌ ಹೊನಾರ್ಯಾರ್‌ ಅವರು ಭಾವುಕರಾಗಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಅತ್ತ, ನರೇಂದ್ರ ಸಿಂಗ್‌ ಖಾಲ್ಸಾ ಅವರು ಸಹ ಭಾರತ ನೀಡಿದ ನೆರವನ್ನು ಸ್ಮರಿಸಿದ್ದಾರೆ. ವಿಮಾನದಿಂದ ಇಳಿಯುತ್ತಲೇ ಭಾವುಕರಾದ ಖಾಲ್ಸಾ ಅವರು, ತಾಲಿಬಾನಿಗಳ ಕ್ರೌರ್ಯ, ಹಿಂಸಾಚಾರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 'ಆಫ್ಘನ್‌ನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ನನಗೆ ಅಳು ಬರುತ್ತಿದೆ. ನಾವು 20 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಎಲ್ಲವೂ ಕ್ಷಣಾರ್ಧದಲ್ಲಿ ನಾಶವಾಗಿದೆ' ಎಂದರು. 'ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಸಂಸ್ಥೆಗಳು ಮಾತ್ರ ಸುರಕ್ಷಿತವಾಗಿವೆ. ಉಳಿದ ಎಲ್ಲ ಕಡೆಗೂ ತಾಲಿಬಾನಿಗಳು ದಾಳಿ ಮಾಡಿದ್ದಾರೆ, ಮಾಡುತ್ತಿದ್ದಾರೆ. ಜನರು, ಮಹಿಳೆಯರ ಜತೆಗೆ ಸಂಸದರ ಮನೆಗಳಿಗೂ ಉಗ್ರರು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಡೀ ದೇಶ ಅರಾಜಕತೆಯಲ್ಲಿ ಮುಳುಗಿದೆ' ಎಂದು ವಿವರಿಸಿದ್ಧಾರೆ. ಭಾರತದ ಸಹೋದರರು ನಮ್ಮನ್ನು ರಕ್ಷಿಸಿದರು: 'ಸಂಕಷ್ಟದಲ್ಲಿದ್ದ ನಮ್ಮನ್ನು ಭಾರತದ ಸಹೋದರ-ಸಹೋದರಿಯರೇ ರಕ್ಷಿಸಿದರು. ಅವರಿಗೆ ಹಾಗೂ ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ' ಎಂದು ಆಫ್ಘನ್‌ ನಿರಾಶ್ರಿತೆಯೊಬ್ಬರು ಹೇಳಿದ್ದಾರೆ. 'ಅಫ್ಘಾನಿಸ್ತಾನದಲ್ಲಿ ನಮ್ಮ ಮನೆ ಸುಡಲಾಗಿದೆ. ಉಗ್ರರು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಜನ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಹಾಗಾಗಿ ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳ ಜತೆ ಭಾರತಕ್ಕೆ ಬಂದಿದ್ದೇನೆ' ಎಂದು ಹೇಳಿದ್ದಾರೆ. ಆಫ್ಘನ್‌ನಲ್ಲಿದ್ದಾರೆ ಇನ್ನೂ ಸಾವಿರ ಭಾರತೀಯರು..!: ಭಾರತವು ಆಗಸ್ಟ್‌ 16ರಿಂದ ಸತತವಾಗಿ ಅಫ್ಘಾನಸ್ತಾನದಿಂದ ಭಾರತೀಯ ರಾಯಭಾರಿಗಳು, ರಾಯಭಾರ ಕಚೇರಿ ಸಿಬ್ಬಂದಿ ಹಾಗೂ ನಾಗರಿಕರು ಸೇರಿ ಇದುವರೆಗೆ ನೂರಾರು ಜನರನ್ನು ಭಾರತಕ್ಕೆ ಕರೆತಂದಿದ್ದರೂ ಇನ್ನೂ ಸಾವಿರಕ್ಕೂ ಅಧಿಕ ಭಾರತೀಯರು ಉಗ್ರ ಪೀಡಿತ ರಾಷ್ಟ್ರದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಭಾರತೀಯ ವಾಯು ಪಡೆಯ ವಿಮಾನ, ವಿಸ್ತಾರ ಸೇರಿ ಹಲವು ವಿಮಾನಗಳು ತೆರವಿನ ಕಾರ್ಯದಲ್ಲಿ ತೊಡಗಿದ್ದು, ಶೀಘ್ರವೇ ಎಲ್ಲರನ್ನು ಕರೆತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.