: ಕೋವಿಡ್‌ನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‌ಡೌನ್ ಸಡಿಲಿಕೆಯಿಂದಾಗಿ ನಗರದಲ್ಲಿ ಸೋಮವಾರದಿಂದಲೇ ವ್ಯಾಪಾರ-ವಹಿವಾಟು ಹಾಗೂ ಇನ್ನಿತರೆ ಚಟುವಟಿಕೆಗಳು ಬಿರುಸುಗೊಂಡಿವೆ. ಲಕ್ಷಾಂತರ ವಾಹನಗಳು ರಸ್ತೆಗಿಳಿದಿದ್ದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಒಂದೂವರೆ ತಿಂಗಳ ಬಳಿಕ ಸಿಲಿಕಾನ್ ಸಿಟಿಯು ಸಹಜ ಸ್ಥಿತಿಗೆ ಮರಳಿರುವ ವಾತಾವರಣ ಎಲ್ಲೆಡೆ ಕಂಡು ಬರ್ತಿದೆ. ಮೇಲ್ಸೇತುವೆ ಹಾಗೂ ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು, ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಮೆಟ್ರೊ ರೈಲು ಸಂಚಾರಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳು, ಆಟೋ, ಟ್ಯಾಕ್ಸಿ, ಕಾರುಗಳು ಅಧಿಕ ಸಂಖ್ಯೆಯಲ್ಲಿ ರಸ್ತೆಗೆ ಬಂದಿವೆ. ಹೀಗಾಗಿ, ಹಲವೆಡೆ ವಾಹನ ದಟ್ಟಣೆ ಉಂಟಾಗಿದೆ.
ಹೊರ ರಾಜ್ಯ, ಜಿಲ್ಲೆಗಳಿಂದಲೂ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಾಂಗುಡಿ ಇಟ್ಟಿದ್ದಾರೆ. ಸರಕಾರ ಜನತಾ ಕರ್ಫ್ಯೂ ಜಾರಿಗೊಳಿಸುತ್ತಿದ್ದಂತೆಯೇ ಲಕ್ಷಾಂತರ ಮಂದಿ ನಗರ ತೊರೆದು ತಮ್ಮ ತವರೂರು ಸೇರಿದ್ದರು. ಇದೀಗ ಅವರೆಲ್ಲರೂ ಸಾಮಾನು-ಸರಂಜಾಮುಗಳ ಸಮೇತ ವಾಪಸಾಗಿದ್ದಾರೆ. ಪರಿಣಾಮ, ಟೋಲ್‌ಗಳಲ್ಲಿ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಐಟಿ-ಬಿಟಿ ಕಾರಿಡಾರ್ ಆಗಿರುವ ಮಾರತ್‌ಹಳ್ಳಿ, ಸರ್ಜಾಪುರ ರಸ್ತೆಯಲ್ಲೂ ವಿಪರೀತ ಸಂಚಾರ ದಟ್ಟಣೆ ಇದೆ.
ಓಡಾಟ ಚುರುಕು: ಕೊರೊನಾ ಸೋಂಕು ತಡೆಗೆ ಹೇರಿದ್ದ ಲಾಕ್‌ಡೌನ್ ತೆರವು ಘೋಷಣೆಯಾಗುವುದನ್ನೇ ಕಾಯುತ್ತಿದ್ದ ಜನರು ನಿರ್ಬಂಧ ಸಡಿಲಿಕೆಯು ಅಧಿಕೃತವಾಗಿ ಜಾರಿಗೆ ಬರುತ್ತಿದ್ದಂತೆಯೇ ಪೈಪೋಟಿಗೆ ಬಿದ್ದವರಂತೆ ಓಡಾಟ ಶುರು ಮಾಡಿದ್ದಾರೆ. ಮಾಲ್‌ಗಳು, ಚಿತ್ರಮಂದಿರಗಳು, ಜಿಮ್‌ಗಳು, ಒಡವೆ, ಬಟ್ಟೆ, ಎಲೆಕ್ಟ್ರಾನಿಕ್ಸ್ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆದಿದ್ದವು. ಉತ್ಪಾದನಾ ಘಟಕಗಳು, ಕಾರ್ಖಾನೆಗಳು ಕೂಡ ಆರಂಭವಾಗಿದ್ದರಿಂದ ಜನಸಂಚಾರ ಹೆಚ್ಚಿತ್ತು.
ಜೆ.ಸಿ.ರಸ್ತೆ, ಕೆ.ಜಿ.ರಸ್ತೆ, ರಿಚ್ಮಂಡ್ ವೃತ್ತ, ಕೆ.ಆರ್.ವೃತ್ತ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ವಿಧಾನಸೌಧ, ಕ್ವೀನ್ಸ್ ರಸ್ತೆ, ಶಿವಾಜಿನಗರ, ಎಂ.ಜಿ.ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ವಾಹನ ದಟ್ಟಣೆ ಜಾಸ್ತಿ ಇತ್ತು. ಮೇಲ್ಸೇತುವೆಗಳಲ್ಲೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ರಸ್ತೆಗಳಲ್ಲೂ ಬ್ಯಾರಿಕೇಡ್‌ಗಳನ್ನು ತೆಗೆದು, ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ತೆರೆಯದ ಅಂಗಡಿಗಳು: ಸರಕಾರ ನಿಗದಿಪಡಿಸಿದ್ದ ಅವಧಿಯಂತೆ ಮಧ್ಯಾಹ್ನ 2 ಗಂಟೆ ವೇಳೆಗೆ ದಿನಸಿ ಸೇರಿದಂತೆ ಇನ್ನಿತರೆ ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿದವು. ಅವಧಿ ಮೀರಿದರೂ ವಹಿವಾಟು ನಡೆಸುತ್ತಿದ್ದ ಮಳಿಗೆಗಳನ್ನು ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಮುಚ್ಚಿಸಿದರು. ನಗರದ ಪ್ರಮುಖ ವಾಣಿಜ್ಯ ತಾಣವಾಗಿದ್ದ ಚಿಕ್ಕಪೇಟೆ, ಅವೆನ್ಯೂ ರಸ್ತೆ, ಎಸ್.ಪಿ.ರಸ್ತೆ, ಬಳೇಪೇಟೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿನ ಬಹುತೇಕ ಅಂಗಡಿಗಳು ತೆರೆದಿರಲಿಲ್ಲ.
ಪೊಲೀಸರು ಮುಂಜಾನೆಯಿಂದ ಸಂಜೆ 7ರವರೆಗೆ ಯಾವುದೇ ವಾಹನಗಳ ತಪಾಸಣೆ ನಡೆಸಲಿಲ್ಲ. ಕರ್ಫ್ಯೂ ಅವಧಿ ಜಾರಿಯಾಗುತ್ತಿದ್ದಂತೆಯೇ ರಸ್ತೆಗಿಳಿದ ಪೊಲೀಸರು ವಾಹನಗಳ ತಪಾಸಣಾ ಕಾರ್ಯಾಚರಣೆ ಆರಂಭಿಸಿದರು. ಹಲವೆಡೆ ತೆರವುಗೊಳಿಸಿದ್ದ ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆಗಳನ್ನು ಬಂದ್ ಮಾಡಿದರು.
ಆಟೊ ಚಾಲಕರಿಂದ ಸುಲಿಗೆ: ಹೊರರಾಜ್ಯ, ಜಿಲ್ಲೆಗಳಿಂದ ಕಾರ್ಯಾಚರಣೆಗೊಂಡ ರೈಲುಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲು ಸೇವೆ ಆರಂಭಕ್ಕೆ ಅನುಮತಿ ನೀಡದಿರುವುದನ್ನೇ ಬಂಡವಾಳವಾಗಿಸಿಕೊಂಡಿದ್ದ ಆಟೊ ಚಾಲಕರು ಪ್ರಯಾಣಿಕರಿಂದ ದುಬಾರಿ ದರ ವಸೂಲಿ ಮಾಡಿದರು. ಮೆಜೆಸ್ಟಿಕ್‌ನಿಂದ ಚಾಮರಾಜಪೇಟೆಗೆ ಕನಿಷ್ಠ ದರ ಆಗುತ್ತದೆ. ಆದರೆ, 100 ರೂ.ಗಳಿಗೆ ಬೇಡಿಕೆ ಇಡುತ್ತಿದ್ದರು. ಅಲ್ಲದೆ, ಮೀಟರ್ ಮೇಲೆ 50-100 ರೂ.ಗಳಿಗೆ ಡಿಮ್ಯಾಂಡ್ ಮಾಡುತ್ತಿದ್ದರು. ಸಾರಿಗೆ ಸೌಲಭ್ಯ ಲಭ್ಯವಿಲ್ಲದಿರುವುದರಿಂದ ಜನರು ವಿಧಿಯಿಲ್ಲದೆ ಹೆಚ್ಚಿನ ದರ ತೆತ್ತು ಪ್ರಯಾಣ ಮಾಡಬೇಕಾಯಿತು.
ಹೋಟೆಲ್‌ಗಳ ಮುಂದೆ ಜನವೋ ಜನ: ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗಷ್ಟೇ ಅವಕಾಶವಿದ್ದು, ಟೀ, ಕಾಫಿ ಮಾರಾಟಕ್ಕೆ ಅನುಮತಿ ಇಲ್ಲ. ಆದಾಗ್ಯೂ, ಹಲವೆಡೆ ಟೀ, ಕಾಫಿ ಮಾರಾಟ ಮಾಡಲಾಗುತ್ತಿತ್ತು. ಸುಮಾರು ಒಂದು ತಿಂಗಳಿನಿಂದ ಮನೆಯಲ್ಲೇ ಬಂಧಿಯಾಗಿದ್ದ ಸಾರ್ವಜನಿಕರು ನಿಯಮಗಳನ್ನು ಲೆಕ್ಕಿಸದೆ ಸ್ನೇಹಿತರೊಂದಿಗೆ ಕಾಫಿ, ಟೀ ಹೀರುತ್ತಾ ಹರಟೆ ಹೊಡೆಯುತ್ತಿದ್ದ ದೃಶ್ಯಗಳು ಕಂಡು ಬಂದವು. ವಾಯುವಿಹಾರಕ್ಕಾಗಿ ಉದ್ಯಾನ ವನಗಳಿಗೆ ಅಧಿಕ ಸಂಖ್ಯೆಯ ನಾಗರಿಕರು ಲಗ್ಗೆ ಇಟ್ಟಿದ್ದರು.
ಮತ್ತೆ ಕೋವಿಡ್ ಆತಂಕ: ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿಲ್ಲ. ರೈಲು ನಿಲ್ದಾಣದಲ್ಲಿ ಕೋವಿಡ್ ಪರೀಕ್ಷಾ ತಂಡಗಳು ಬೀಡು ಬಿಟ್ಟಿದ್ದರೂ ಹೆಚ್ಚಿನ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿಲ್ಲ. ಅಲ್ಲದೆ, ನಗರದ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲೂ ಪರೀಕ್ಷಾ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ಮತ್ತೆ ನಗರದ ಜನತೆಗೆ ಸೋಂಕಿನ ಆತಂಕ ಎದುರಾಗಿದೆ.