![](https://vijaykarnataka.com/photo/84644750/photo-84644750.jpg)
ಕೆಲ ತಿಂಗಳ ಹಿಂದೆ 'RRR'ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿತ್ತು. ಅದರಲ್ಲಿ ಕೊಮರಾಮ್ ಭೀಮ್ ಪಾತ್ರ ಮಾಡುತ್ತಿರುವ ನಟ ಮುಸ್ಲಿಂ ವ್ಯಕ್ತಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಬಗ್ಗೆ ಆಗ ಸಾಕಷ್ಟು ತಕರಾರುಗಳು ಶುರುವಾಗಿದ್ದವು. ಕೊಮರಮ್ ಭೀಮ್ ಅವರ ಮೊಮ್ಮಗ ಸೇರಿದಂತೆ ಆದಿಲಾಬಾದ್ ಬುಡಕಟ್ಟು ಜನಾಂಗದವರು ಆ ಲುಕ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆ ಲುಕ್ ಸಿನಿಮಾದಲ್ಲಿ ಯಾಕೆ ಬಂತು ಅನ್ನೋದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಮಾಹಿತಿ ನೀಡಿದ ಸ್ಕ್ರಿಪ್ಟ್ ರೈಟರ್'RRR'ಸಿನಿಮಾಗೆ ಸ್ಕ್ರಿಪ್ಟ್ ಬರೆದಿರುವ ಕೆ.ವಿ. ವಿಜಯೇಂದ್ರ ಪ್ರಸಾದ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 'ಕಥೆಯಲ್ಲಿ ಭೀಮ್ ನಿಜಾಮರ ಎದುರಾಳಿಯಾಗಿರುತ್ತಾನೆ. ಆತನನ್ನು ನಿಜಾಮರ ಕಡೆಯ ಪೊಲೀಸರು ಹುಡುಕುತ್ತಿರುತ್ತಾರೆ. ಅವರಿಂದ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಭೀಮ್‌ಗೆ ಇರುತ್ತದೆ. ಆಗ ಆತನಿಗೆ ಇರುವ ದಾರಿ ಯಾವುದು? ಅವರಂತೆಯೇ ನಟಿಸುವುದು. ಅದಕ್ಕಾಗಿಯೇ ಎನ್‌ಟಿಆರ್ ಮುಸ್ಲಿಂ ವ್ಯಕ್ತಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.
ಅದೇ ರೀತಿ ರಾಮ್ ಚರಣ್ ನಿಭಾಯಿಸಿರುವ ಅಲ್ಲೂರಿ ಸೀತಾರಾಮ ರಾಜು ಪಾತ್ರವೇಕೆ ಪೊಲೀಸ್ ಗೆಟಪ್‌ನಲ್ಲಿದೆ ಇದೆ ಎಂಬ ಪ್ರಶ್ನೆಯೂ ವಿಜಯೇಂದ್ರ ಪ್ರಸಾದ್‌ಗೆ ಎದುರಾಗಿದೆ. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, 'ಅದಕ್ಕೂ ಒಂದು ಕಾರಣವಿದೆ. ಅದನ್ನೂ ನೀವು ತೆರೆಮೇಲೆ ನೋಡಿಯೇ ತಿಳಿಯಬೇಕು' ಎಂದಿದ್ದಾರೆ.
ರಾಜಮೌಳಿಗೆ ವಿರೋಧ ಉಂಟಾಗಿತ್ತು!ಅಂದು ಈ ಪೋಸ್ಟರ್ ರಿಲೀಸ್ ಆದಾಗ ದೊಡ್ಡಮಟ್ಟದಲ್ಲಿ ವಿರೋಧ ಉಂಟಾಗಿತ್ತು. 'ಆದಿವಾಸಿ ವ್ಯಕ್ತಿಯೋರ್ವನಿಗೆ ಮುಸ್ಲಿಂ ವೇಷ ತೊಡಿಸಿದ್ದೀರಿ, ನಿಮಗೆ ಧೈರ್ಯವಿದ್ದರೆ ಸಿನಿಮಾದಲ್ಲಿ ಮುಸ್ಲಿಂ ನವಾಬನಿಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಳ್ಳಲು ಹೇಳಿ. ಈಗಲೇ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇದು ಸಿನಿಮಾದಲ್ಲಿ ಕಂಡರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ' ಎಂದು ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ಎಚ್ಚರಿಸಿದ್ದರು.
ಹಾಗೆಯೇ, ಕೊಮರಮ್ ಭೀಮ್ ಅವರ ಮೊಮ್ಮಗ ಸೋನೆ ರಾವ್, 'ನಮ್ಮ ನಾಯಕ ಕೊಮರಮ್ ಭೀಮ್ ಬಗ್ಗೆ ಅಧ್ಯಯನ ಮಾಡಲು ನಿರ್ದೇಶಕರು ನಮ್ಮನ್ನು ಸಂಪರ್ಕಿಸಿದ್ದರೆ, ನಾವು ಸೂಕ್ತ ಮಾಹಿತಿ ನೀಡುತ್ತಿದ್ದೆವು. ಭೀಮ್ ಅವರು ಬುಡಕಟ್ಟು ಜನರ ನೆಲ-ಜಲಕ್ಕಾಗಿ ಹೋರಾಡಿದ್ದರು. ಅವರನ್ನು ಈಗ ಅಲ್ಪಸಂಖ್ಯಾತರ ವ್ಯಕ್ತಿಯ ರೀತಿಯಲ್ಲಿ ಬಿಂಬಿಸಿರುವುದರಿಂದ ಇತಿಹಾಸವನ್ನು ತಿರುಚಿದಂತಾಗಿದೆ. ಈ ಲುಕ್‌ನ್ನು ಹಿಂಪಡೆಯಬೇಕು' ಎಂದು ಹೇಳಿದ್ದರು.