![](https://vijaykarnataka.com/photo/87845683/photo-87845683.jpg)
'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ನಿಧನದ ನಂತರ ಸಾವಿರಾರು ಜನರು ತಮ್ಮ ನೇತ್ರವನ್ನು ದಾನ ಮಾಡುತ್ತಿದ್ದಾರೆ. ಈಗ ಕಾಕತಾಳೀಯ ಎನ್ನುವ ಹಾಗೆ ಕನ್ನಡದಲ್ಲಿ ನೇತ್ರದಾನದ ಮಹತ್ವ ಸಾರುವ '' ಎಂಬ ಸಿನಿಮಾ ಸಿದ್ಧವಾಗಿದ್ದು, ಇದು ಈಗಾಗಲೇ 2019ನೇ ಸಾಲಿನ ಅತ್ಯುತ್ತಮ ಪ್ರಾದೇಶಿಕ ಭಾಷೆಯ ಚಿತ್ರವೆಂಬ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದೆ. ಈ ಚಿತ್ರಕ್ಕೂ ಪುನೀತ್‌ಗೂ ಇರುವ ನಂಟಿನ ಬಗ್ಗೆ ನಿರ್ದೇಶಕ ಮನೋಜ್ ಕುಮಾರ್ ಹೇಳಿಕೊಂಡಿದ್ದಾರೆ.
'ಅಕ್ಷಿ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬರುವ ಮೊದಲೇ ನಾವು ಪುನೀತ್‌ರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಹೇಳಿದ್ದೆವು. ಬಹಳ ಖುಷಿ ಪಟ್ಟಿದ್ದ ಅವರು ಸಿನಿಮಾ ನೋಡಲು ಬಯಸಿದ್ದರು. ಇದರ ಟೀಸರ್ ಅನ್ನೂ ಪಿಆರ್‌ಕೆ ಸ್ಟುಡಿಯೋ ಮೂಲಕ ರಿಲೀಸ್ ಮಾಡಿದ್ದರು. ಅದರ ಹಾಡುಗಳನ್ನು ಬಹಳ ಇಷ್ಟಪಟ್ಟಿದ್ದರು. ನಂತರ ಸಿನಿಮಾವನ್ನೂ ನೋಡಿದ್ದರು. ಅವರನ್ನು ಕಳೆದು ಕೊಳ್ಳುವ 10 ದಿನಗಳ ಮೊದಲು ಭೇಟಿಯಾಗಿದ್ದೆವು. ಆಗ ಅವರು, 'ಸಿನಿಮಾ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳಿ. ನಂತರ ಮಾತನಾಡುತ್ತೇನೆ..' ಎಂದು ಭರವಸೆ ನೀಡಿದ್ದರು. ಆದರೆ ಅಷ್ಟರಲ್ಲಿಅವರನ್ನು ಕಳೆದುಕೊಂಡೆವು' ಎಂದಿದ್ದಾರೆ ಮನೋಜ್.
ಈ ಚಿತ್ರದಲ್ಲಿ12 ವರ್ಷದ ಹುಡುಗ ಹಳ್ಳಿಯಲ್ಲಿ ನೇತ್ರದಾನದ ಮಹತ್ವವನ್ನು ಹೇಗೆ ಸಾರುತ್ತಾನೆ ಮತ್ತು ತನ್ನ ತಂಗಿಗಾಗಿ ಹೇಗೆ ಹೋರಾಟ ಮಾಡುತ್ತಾನೆ ಎಂಬ ಕಥೆಯಿದೆ. 'ತುಂಬಾ ಜನರು ಕಣ್ಣು ದಾನ ಮಾಡುತ್ತಾರೆ. ಆದರೆ, ಅವರು ಸತ್ತಾಗ ಅವರ ಕಣ್ಣನ್ನು ಪಡೆಯಲು ವೈದ್ಯರಿಗೆ ಮಾಹಿತಿ ನೀಡುವುದೇ ಅಪರೂಪ. ಈ ಕೆಲಸ ಬಹಳ ಮುಖ್ಯ. ಇದು ಮನೆಯವರ ಜವಾಬ್ದಾರಿ. ಈ ಬಗ್ಗೆ ಹುಡುಗನೊಬ್ಬ ಹೇಗೆ ಜಾಗೃತಿ ಮೂಡಿಸುತ್ತಾನೆ ಎಂಬುದು ಈ ಸಿನಿಮಾದಲ್ಲಿದೆ' ಎಂದಿದ್ದಾರೆ ಅವರು.
ಈ ಚಿತ್ರದ ವಿಶೇಷ ಹಾಡೊಂದರ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮನೋಜ್, 'ಕಣ್ಣೊಂದು ಹೇಳಿತು... ಬದುಕಲು ಬಿಡಿ ನನ್ನನ್ನು.. ಸುಟ್ಟು ಬೂದಿ ಮಾಡದಿರಿ.. ಮಣ್ಣಿನಲ್ಲಿ ಹಾಕದಿರಿ..' ಎಂಬ ಹಾಡನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಡೆಡಿಕೇಟ್ ಮಾಡಲಿದ್ದೇವೆ. ಇದನ್ನು ಮಾನಸ ಹೊಳ್ಳ ಮತ್ತು ತಂಡ ಹಾಡಿದ್ದಾರೆ. ಇನ್ನೊಂದು ಹಾಡನ್ನು ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ..' ಎಂದಿದ್ದಾರೆ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಮನೋಜ್ ಅವರ ಮೊದಲ ಚಿತ್ರವಿದು. ಇದರಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಇಳಾ ವಿಟ್ಲ, ಮಾಸ್ಟರ್ ಮಿಥುನ್, ಬಾಲನಟಿ ಸೌಮ್ಯಾ ನಟಿಸಿದ್ದಾರೆ.
ಇನ್ನು, ಈಚೆಗಷ್ಟೇ ನಮ್ಮನ್ನೆಲ್ಲ ಅಗಲಿದ ನಟ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಅವರ ಕಣ್ಣುಗಳಿಂದ 10 ಜನರಿಗೆ ದೃಷ್ಟಿ ಸಿಗುವಂತೆ ಮಾಡಿರುವುದು ವಿಶೇಷ. ಅಲ್ಲದೆ, ರಾಜ್ಯಾದ್ಯಂತ ಸಾವಿರಾರು ನೇತ್ರದಾನ ಮಾಡಲು ನೋಂದಣಿ ಮಾಡಿಸಿರುವುದು ವಿಶೇಷ.