ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ: ಪ್ರೇಕ್ಷಕರನ್ನು ಸ್ವಾಗತಿಸಲು ಚಿತ್ರಮಂದಿರಗಳು ರೆಡಿ

ಅಕ್ಟೋಬರ್‌ನಿಂದ ಸಿನಿಮಾ ಮಂದಿರ, ರಂಗಮಂದಿರಗಳಲ್ಲಿ ಶೇ. 100ರಷ್ಟು ಸೀಟು ಭರ್ತಿ ಮಾಡಿಕೊಳ್ಳಬಹುದು ಎಂಬ ಆದೇಶ ಹೊರಬಿದ್ದ ಕ್ಷಣದಿಂದ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಸಹ ದಿನಾಂಕ ಘೋಷಿಸಿ ಕಾಯುತ್ತಿವೆ.

ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ: ಪ್ರೇಕ್ಷಕರನ್ನು ಸ್ವಾಗತಿಸಲು ಚಿತ್ರಮಂದಿರಗಳು ರೆಡಿ
Linkup
(ಹರೀಶ್ ಬಸವರಾಜ್) ಅಕ್ಟೋಬರ್‌ನಿಂದ ಸಿನಿಮಾ ಮಂದಿರ, ರಂಗಮಂದಿರಗಳಲ್ಲಿ ಶೇ. 100ರಷ್ಟು ಸೀಟು ಭರ್ತಿ ಮಾಡಿಕೊಳ್ಳಬಹುದು ಎಂಬ ಆದೇಶ ಹೊರಬಿದ್ದ ಕ್ಷಣದಿಂದ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಸಹ ದಿನಾಂಕ ಘೋಷಿಸಿ ಕಾಯುತ್ತಿವೆ. ರಾಜ್ಯದಲ್ಲಿ600ಕ್ಕೂ ಹೆಚ್ಚಿನ ಸಿಂಗಲ್‌ ಸ್ಕ್ರೀನಿಂಗ್‌ ಚಿತ್ರಮಂದಿರಗಳಿದ್ದು, ಅವುಗಳಲ್ಲಿ ಶೇ.50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ ನಂತರ ರಾಜ್ಯದಲ್ಲಿ40 ರಿಂದ 50 ಚಿತ್ರಮಂದಿರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈಗ ಅಕ್ಟೋಬರ್‌ನಿಂದ ಎಲ್ಲರೂ ತೆರೆಯಲು ನಿರ್ಧಾರ ಮಾಡಿದ್ದಾರೆ. ಸಿನಿಮಾಗಳು ಹೆಚ್ಚೆಚ್ಚು ಬೇಕು: ಪ್ರದರ್ಶಕರ ಸಂಘದ ಅಧ್ಯಕ್ಷ ಮತ್ತು ವೀರೇಶ್‌ ಚಿತ್ರಮಂದಿರದ ಮಾಲೀಕರೂ ಆಗಿರುವ ಕೆ.ವಿ. ಚಂದ್ರಶೇಖರ್‌ ಮಾತನಾಡಿ, ‘‘ಅಕ್ಟೋಬರ್‌ 1 ರಿಂದ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಅಂದು ಯಾವುದೇ ಸಿನಿಮಾ ಕೂಡ ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ನಮ್ಮ ಚಿತ್ರಮಂದಿರಗಳಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಅವುಗಳನ್ನು ಶೇ.100ರಷ್ಟು ಸೀಟು ಭರ್ತಿ ಮಾಡಿ ಪ್ರದರ್ಶನ ಆರಂಭಿಸುತ್ತೇವೆ. ಉಳಿದಂತೆ ಅಕ್ಟೋಬರ್‌ 14ಕ್ಕೆ ಎರಡು ದೊಡ್ಡ ನಟರ ಸಿನಿಮಾಗಳು ಅನೌನ್ಸ್‌ ಆಗಿವೆ. ಎರಡು ಸಿನಿಮಾಗಳು ಬಿಡುಗಡೆಯಾದರೂ ಅವುಗಳಿಗೆ ಬೇಕಾಗುವಷ್ಟು ಚಿತ್ರಮಂದಿರಗಳು ಇವೆ. ಇನ್ನೂ ಹೆಚ್ಚಿನ ಸಿನಿಮಾಗಳು ಈ ಹಂತದಲ್ಲಿ ಬಿಡುಗಡೆಯಾಗಬೇಕು’’ ಎಂದು ಹೇಳಿದರು. ದೊಡ್ಡ ಸಿನಿಮಾಗಳಿಗೆ ಕಾಯುತ್ತಿದ್ದೇವೆ: ಚಿತ್ರದುರ್ಗದ ಯೂನಿಯನ್‌ ಚಿತ್ರಮಂದಿರದ ಮಾಲೀಕರಾದ ಕುಮಾರ್‌ ಮಾತನಾಡಿ, ‘‘ನಾವು ಈಗಾಗಲೇ ಚಿತ್ರಮಂದಿರವನ್ನು ತೆರೆದಿದ್ದೇವೆ. ಶೇ.50ರಲ್ಲೇ ದಿನಕ್ಕೆ ಮೂರು ಅಥವಾ ಎರಡು ಶೋ, ಕೆಲವೊಮ್ಮೆ ಒಂದೇ ಶೋ ನಡೆಸಿದ್ದೇವೆ. ಈಗ ಅಕ್ಟೋಬರ್‌ 14ರಂದು ದೊಡ್ಡ ಸಿನಿಮಾಗಳು ಬರುತ್ತಿವೆ. ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ತಾಲೂಕು ಕೇಂದ್ರ ಮತ್ತು ಜಿಲ್ಲಾಕೇಂದ್ರಗಳಲ್ಲಿ ಕಲೆಕ್ಷನ್‌ಗೆ ಹೊಡೆತ ಬೀಳಬಹುದು. ನಿರ್ಮಾಪಕರು ಮಾತನಾಡಿಕೊಳ್ಳಬೇಕು. ಇದರ ಜತೆಗೆ ಸರ್ಕಾರ ಕೂಡ ನಮಗೆ ಸಹಕಾರ ನೀಡುತ್ತಿಲ್ಲ. ಬಸ್ಸು, ವಿಮಾನಗಳಿಗೆ ಇರದ ನಿಯಮಗಳು ಚಿತ್ರಮಂದಿರದವರಿಗೆ ಮಾತ್ರ ನೀಡಿದ್ದಾರೆ. ದೊಡ್ಡ ದೊಡ್ಡ ಹೀರೋಗಳ ಚಿತ್ರಗಳು ಬಂದರೆ ಮಾತ್ರ ನಮ್ಮಂತಹ ಚಿತ್ರಮಂದಿರಗಳು ಉಳಿಯಲು ಸಾಧ್ಯ. ಈಗಂತೂ ನಾವು ಸಿದ್ಧರಿದ್ದೇವೆ’’ ಎಂದು ಹೇಳಿದರು. ರಂಗಮಂದಿರಗಳ ಕಥೆ: ರಂಗಮಂದಿರಗಳಲ್ಲಿ ಕೆಲವು ಪ್ರದರ್ಶನ ಆರಂಭಿಸಿದ್ದರೆ, ಇನ್ನು ಕೆಲವು ಮುಚ್ಚಿವೆ. ಕೆಲವೆಡೆ ವೀಕೆಂಡ್‌ ಶೋಗಳನ್ನು ಮಾತ್ರ ಮಾಡುತ್ತಿದ್ದಾರೆ. ಬೆಂಗಳೂರಿನ ರಂಗಶಂಕರದಲ್ಲಿ ವಾರಾಂತ್ಯದಲ್ಲಿ ಮ್ಯಾಟ್ನಿ ಶೋ ಮಾತ್ರ ಇಷ್ಟು ದಿನ ನಡೆಯುತ್ತಿತ್ತು. ‘‘ಪ್ರಭಾತ್‌ನ ಕೋರಮಂಗಲ, ಬಸವೇಶ್ವರನಗರ, ಜಕ್ಕೂರಿನ ರಂಗಮಂದಿರಗಳನ್ನು ಶೇ.50 ಸೀಟುಭರ್ತಿಯಲ್ಲಿ ಖಾಸಗಿ ಪ್ರದರ್ಶನಗಳಿಗೆ ನೀಡುತ್ತಿದ್ದೆವು. ಅ.1ರಿಂದ ಸಾರ್ವಜನಿಕ ಪ್ರದರ್ಶನಗಳಿಗೆ ತೆರೆಯಲು ಯೋಚಿಸಿದ್ದೇವೆ’’ ಎಂದು ಪ್ರಭಾತ್‌ನ ವರ್ಷಿಣಿ ವಿಜಯ್‌ ತಿಳಿಸಿದ್ದಾರೆ. ‘‘ಕೋವಿಡ್ ರೂಲ್ಸ್ ಪಾಲಿಸಲೇಬೇಕಾಗಿದ್ದರಿಂದ ವಾರಾಂತ್ಯದಲ್ಲಿ ಮ್ಯಾಟ್ನಿ ಶೋ ಮಾತ್ರ ಮಾಡುತ್ತಿದ್ದೆವು. ಅಕ್ಟೋಬರ್ 2ರಿಂದ ಎಲ್ಲಾ ಶೋ ಆರಂಭಿಸುತ್ತಿದ್ದೇವೆ’’ ಎಂದು ‘ರಂಗಶಂಕರ’ದ ಅರುಂಧತಿ ನಾಗ್ ತಿಳಿಸಿದ್ದಾರೆ.