IAF Helicopter Crash: ಬಿಪಿನ್ ರಾವತ್ ಸಾವಿನ ಬಗ್ಗೆ ಸಂಸತ್‌ನಲ್ಲಿ ರಾಜನಾಥ್ ಸಿಂಗ್ ಹೇಳಿಕೆ

ಬುಧವಾರ ಮಧ್ಯಾಹ್ನ ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಇತರರ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದಾರೆ.

IAF Helicopter Crash: ಬಿಪಿನ್ ರಾವತ್ ಸಾವಿನ ಬಗ್ಗೆ ಸಂಸತ್‌ನಲ್ಲಿ ರಾಜನಾಥ್ ಸಿಂಗ್ ಹೇಳಿಕೆ
Linkup
ಹೊಸದಿಲ್ಲಿ: ತಮಿಳುನಾಡಿನಲ್ಲಿ ಬುಧವಾರ ಹೆಲಿಕಾಪ್ಟರ್ ವಿಮಾನ ಅಪಘಾತದಲ್ಲಿ ಜನರಲ್ , ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರೆ 11 ಮಂದಿ ಮೃತಪಟ್ಟ ಘಟನೆ ಕುರಿತು ರಕ್ಷಣಾ ಸಚಿವ ಅವರು ಗುರುವಾರ ಸಂಸತ್‌ನಲ್ಲಿ ಹೇಳಿಕೆ ನೀಡಿದರು. ದುರಂತದಲ್ಲಿ ಹುತಾತ್ಮರಾದ ಎಲ್ಲರ ಕುಟುಂಬಗಳಿಗೆ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದರು. ಸಂಸತ್ ಕೂಡ ಮೌನಾಚರಣೆ ಮೂಲಕ ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸಿತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ಬುಧವಾರದ ದುರ್ಘಟನೆ ಕುರಿತು ಹೇಳಿಕೆ ನೀಡಿದರು. ದುಃಖಕರ ಮತ್ತು ಭಾರವಾದ ಹೃದಯದೊಂದಿಗೆ, ಡಿಸೆಂಬರ್ 8ರ ಮಧ್ಯಾಹ್ನ ನಡೆದ, ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಅಪಘಾತದ ದುರದೃಷ್ಟಕರ ಸುದ್ದಿಯನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು. ಬಿಪಿನ್ ರಾವತ್ ಅವರು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ವಿದ್ಯಾರ್ಥಿ ಅಧಿಕಾರಿಗಳ ಜತೆ ಸಂವಾದ ನಡೆಸಲು ಭೇಟಿ ನಿಗದಿಯಾಗಿತ್ತು. ಬುಧವಾರ ಬೆಳಿಗ್ಗೆ 11.48ರ ವೇಳೆಗೆ ಸುಲೂರ್ ವಾಯುನೆಲೆಯಿಂದ ಹೊರಟ Mi17 V5 ಹೆಲಿಕಾಪ್ಟರ್ ಹೊರಟಿತ್ತು. ಇದು ಮಧ್ಯಾಹ್ನ 12:15ರ ಸುಮಾರಿಗೆ ವೆಲ್ಲಿಂಗ್ಟನ್ ತಲುಪಬೇಕಿತ್ತು. 12:08ರ ವೇಳೆಗೆ ಸುಲೂರ್ ವಾಯುನೆಲೆಯಲ್ಲಿನ ಏರ್ ಟ್ರಾಫಿಕ್ ನಿಯಂತ್ರಣ ಸಂಪರ್ಕ ಕಡಿದುಕೊಂಡಿತ್ತು. ಇದೇ ವೇಳೆ ಕೆಲವು ಸ್ಥಳೀಯರು ಕೂನೂರು ಸಮೀಪದ ಕಾಡಿನಲ್ಲಿ ಬೆಂಕಿ ಉರಿಯುವುದನ್ನು ಕಂಡಿದ್ದರು. ಅವರು ಸ್ಥಳಕ್ಕೆ ಧಾವಿಸಿದಾಗ ಸೇನಾ ಹೆಲಿಕಾಪ್ಟರ್ ಅವಶೇಷವು ಬೆಂಕಿಯಲ್ಲಿ ದಹಿಸುವುದನ್ನು ಕಂಡರು. ಸ್ಥಳೀಯ ಆಡಳಿತದ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿ, ಬದುಕುಳಿದವರನ್ನು ರಕ್ಷಿಸಲು ಪ್ರಯತ್ನಿಸಿದವು ಎಂದು ತಿಳಿಸಿದರು. ಅವಶೇಷಗಳಿಂದ ಹೊರತೆಗೆದ ಎಲ್ಲರನ್ನೂ ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಗೆ ಸಾಗಿಸಲಾಯಿತು. ಇತ್ತೀಚಿನ ವರದಿಯು, ಹೆಲಿಕಾಪ್ಟರ್‌ನಲ್ಲಿದ್ದ 14 ಜನರ ಪೈಕಿ 13 ಮಂದಿ ಗಾಯಗಳಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿದೆ. ಮೃತರಲ್ಲಿ ಸಿಡಿಎಸ್ ಅವರ ಪತ್ನಿ ಮಧುಲಿಕಾ ರಾವತ್, ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್, ಸ್ಟಾಫ್ ಆಫೀಸರ್ ಲೆ. ಕರ್ನಲ್ ಹರ್ಜಿಂದರ್ ಸಿಂಗ್ ಮತ್ತು ವಾಯುಪಡೆ ಹೆಲಿಕಾಪ್ಟರ್ ಸಿಬ್ಬಂದಿ ಸೇರಿದಂತೆ ಇತರೆ ಒಂಬತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಸೇರಿದ್ದಾರೆ. ಅವರ ಹೆಸರು ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಆಫೀಸರ್ ರಾಣಾ ಪ್ರತಾಪ್ ದಾಸ್ ಮತ್ತು ಅರಕ್ಕಲ್ ಪ್ರದೀಪ್, ಹವಲ್ದಾರ್ ಸತ್ಪಾಲ್ ರೈ, ಗುರುಸೇವಕ್ ಸಿಂಗ್, ನಾಯ್ಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯ್ಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯ್ಕ್ ಬಿ ಸಾಯಿ ತೇಜಾ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ಜೀವ ರಕ್ಷಕದ ನೆರವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಜೀವ ಉಳಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ಘಟನೆಯ ಬಗ್ಗೆ ಮೂರು ಸೇವೆಗಳ ತನಿಖೆಗೆ ಭಾರತೀಯ ವಾಯುಪಡೆ ಆದೇಶ ನೀಡಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.