2 ವರ್ಷದ ಮಗುವಿನ ತೂಕ 45 ಕೆಜಿ..! ಬೆರಿಯಾಟ್ರಿಕ್‌ ಸರ್ಜರಿ ಮಾಡಿದ ದಿಲ್ಲಿ ವೈದ್ಯರು

​​ಸಾಮಾನ್ಯವಾಗಿ 27 ತಿಂಗಳ ಮಗು 15 ಕೆ.ಜಿ ತೂಕ ಇರಬೇಕು. ಬಾಲಕಿಯ ಎಂಟು ವರ್ಷದ ಸಹೋದರ ಸಹಜ ಬೆಳವಣಿಗೆ ದಾಖಲಿಸಿದ್ದಾನೆ. ಆದ್ರೆ, ಬಾಲಕಿ ತೂಕ ಹೆಚ್ಚಾದ ಕಾರಣ ಹೆತ್ತವರಿಗೆ ಆಕೆಯನ್ನು ಎತ್ತಿಕೊಳ್ಳುವುದು 'ಭಾರ'ವಾಗಿ ಗಾಲಿ ಕುರ್ಚಿ ಮೇಲೆಯೇ ಕೂರಿಸುತ್ತಿದ್ದರು..!

2 ವರ್ಷದ ಮಗುವಿನ ತೂಕ 45 ಕೆಜಿ..! ಬೆರಿಯಾಟ್ರಿಕ್‌ ಸರ್ಜರಿ ಮಾಡಿದ ದಿಲ್ಲಿ ವೈದ್ಯರು
Linkup
: ಬರೋಬ್ಬರಿ 45 ಕೆ. ಜಿ. ತೂಕ ಹೊಂದಿದ್ದ ಎರಡು ವರ್ಷದ ಪುಟಾಣಿಗೆ ಹೊಸ ದಿಲ್ಲಿಯ ಖಾಸಗಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಬೆರಿಯಾಟ್ರಿಕ್‌ ಸರ್ಜರಿ ನೆರವೇರಿಸಿದ್ದಾರೆ. ದೇಹದ ತೂಕ ಇಳಿಸುವ ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾದ ದೇಶದ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆಗೆ ಈ ಬಾಲಕಿ ಪಾತ್ರಳಾಗಿದ್ದಾಳೆ. ಖ್ಯಾತಿ ಎಂಬ ಪೋರಿ ಜನಿಸಿದಾಗ 2.5 ಕೆ.ಜಿ ತೂಕ ಹೊಂದಿದ್ದಳು. ಅದು ಸಹಜ ತೂಕವಾಗಿತ್ತು. ಕೆಲ ದಿನಗಳಲ್ಲಿಯೇ ಆಕೆಯ ತೂಕ ಒಂದೇ ಸಮನೆ ಏರತೊಡಗಿತು. ಕೇವಲ ಆರು ತಿಂಗಳಲ್ಲಿ ಅದು 14 ಕೆ.ಜಿ ತಲುಪಿತು. 27 ತಿಂಗಳಾಗವಷ್ಟರಲ್ಲಿ ಬರೋಬ್ಬರಿ 45 ಕೆ.ಜಿ ದಾಟಿತ್ತು. ಸಾಮಾನ್ಯವಾಗಿ ಈ ವಯಸ್ಸಿಗೆ 15 ಕೆ.ಜಿ ತೂಕ ಇರಬೇಕು. ಈಕೆಯ ಎಂಟು ವರ್ಷದ ಸಹೋದರ ಸಹಜ ಬೆಳವಣಿಗೆ ದಾಖಲಿಸಿದ್ದಾನೆ. ಹೆತ್ತವರಿಗೆ ಆಕೆಯನ್ನು ಎತ್ತಿಕೊಳ್ಳುವುದು 'ಭಾರ'ವಾದ್ದರಿಂದ ಗಾಲಿ ಕುರ್ಚಿ ಮೇಲೆಯೇ ಕೂರಿಸುತ್ತಿದ್ದರು. ತನ್ನ ತೂಕದಿಂದಾಗಿ ಪುಟಾಣಿಗೆ ನಡೆದಾಡುವುದಿರಲಿ, ಸರಾಗವಾಗಿ ನಿದ್ರೆ ಮಾಡುವುದೂ ಕಷ್ಟವಾಗಿತ್ತು. ಹೊಸ ದಿಲ್ಲಿಯ ಪ್ರತಾಪ್‌ಗಂಜ್‌ ಪ್ರದೇಶದಲ್ಲಿರುವ ಮ್ಯಾಕ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಸಾಕಷ್ಟು ಸಮಾಲೋಚನೆ ನಡೆಸಿದ ಬಳಿಕ ಈಕೆಗೆ ಬೆರಿಯಾಟ್ರಿಕ್‌ ಸರ್ಜರಿ ನಡೆಸುವ ತೀರ್ಮಾನ ಕೈಗೊಂಡರು. 'ಮಕ್ಕಳಿಗೆ ಅದರಲ್ಲಿಯೂ ಶಿಶುಗಳಿಗೆ ಬೆರಿಯಾಟ್ರಿಕ್‌ ಸರ್ಜರಿ ನಡೆಸುವುದು ವಿರಳಾತಿವಿರಳ. ಈಕೆಯ ಜೀವ ಉಳಿಸುವ ಸಲುವಾಗಿ ಬೆರಿಯಾಟ್ರಿಕ್‌ ಹೊರತುಪಡಿಸಿ ನಮ್ಮ ಬಳಿ ಬೇರೆ ಮಾರ್ಗವೇ ಇರಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾಳೆ' ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮನ್‌ಪ್ರೀತ್‌ ಸೇಥಿ ತಿಳಿಸಿದ್ದಾರೆ. 'ಪೂರ್ಣ ಚೇತರಿಸಿಕೊಂಡ ಬಳಿಕ ಆಕೆಯ ಕಾಲುಗಳಿಗೆ ಶಕ್ತಿ ಬರುವ ಚಿಕಿತ್ಸೆ ನೀಡಿ ನಡೆದಾಡುವುದನ್ನು ಕಲಿಸಲಾಗುತ್ತದೆ. ಮುಂದಿನ ವರ್ಷದ ಒಳಗೆ ಆಕೆ ಸಹಜ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಾಳೆ' ಎಂದು ಡಾ.ಸೇಥಿ ವಿವರಿಸಿದ್ದಾರೆ. ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯ ಸುತ್ತಮುತ್ತಲಿನ ಹೆಚ್ಚುವರಿ ಕೊಬ್ಬು ತೆಗೆಯಲಾಗುತ್ತದೆ. ಜತೆಗೆ ಉದರ ಚೀಲವನ್ನು ಕಿರಿದು ಮಾಡಲಾಗುತ್ತದೆ. ಇದರಿಂದ ಅವರಿಗೆ ಹಸಿವಾಗುವುದು ಕಡಿಮೆಯಾಗುತ್ತದೆ. ಖ್ಯಾತಿ ಇನ್ನೂ ಚಿಕ್ಕವಳಾಗಿರುವುದರಿಂದ ಅವಳ ಆಹಾರದಲ್ಲಿ ಪೌಷ್ಟಿಕತೆಯ ಕೊರತೆ ಆಗದಂತೆಯೂ ನಿಗಾವಹಿಸಬೇಕಾಗುತ್ತದೆ. 'ಮಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ವೈದ್ಯರ ಸಹಕಾರದಿಂದ ಅರ್ಧ ಯಶಸ್ಸು ಗಳಿಸಿದ್ದೇವೆ. ಇನ್ನು ಒಂದು ವರ್ಷದ ಕಾಲ ಅವಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕಾಗಿದೆ. ಅದರಲ್ಲಿಯೂ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ' ಎಂದು ಪುಟಾಣಿಯ ಪಾಲಕರು ತಿಳಿಸಿದ್ದಾರೆ.