![](https://vijaykarnataka.com/photo/85860102/photo-85860102.jpg)
ನೋಯ್ಡಾ: ತನ್ನ ಪತ್ನಿ, ಇಬ್ಬರು ಮಕ್ಕಳು ಹೂತು ಹಾಕಿದ್ದಲ್ಲದೆ, ಸ್ನೇಹಿತನನ್ನು ಮಾಡಿ, ತನ್ನದೇ ಕೊಲೆಯಾದಂತೆ ನಾಟಕ ಹೆಣೆದಿದ್ದ 34 ವರ್ಷದ ವ್ಯಕ್ತಿಯನ್ನು ಸುಮಾರು ಮೂರು ವರ್ಷದ ಬಳಿಕ ಬುಧವಾರ ಬಂಧಿಸಲಾಗಿದೆ.
ಆರೋಪಿ ರಾಕೇಶ್, 2018ರ ಫೆಬ್ರವರಿಯಲ್ಲಿ ತನ್ನ ಕುಟುಂಬವನ್ನು ಹತ್ಯೆ ಮಾಡಿದ್ದ. ಪತ್ನಿ ರತ್ನೇಶ್ (ಆಗ 27 ವರ್ಷ), ಮಕ್ಕಳಾದ ಅವನಿ (3) ಮತ್ತು ಅರ್ಪಿತ್ (1) ಅವರನ್ನು ಕೊಲೆ ಮಾಡಿ ಬಿಸ್ರಾಖ್ನ ಚಿಪ್ನಾಯಾ ಪ್ರದೇಶದಲ್ಲಿರುವ ತನ್ನ ಮನೆಯ ಮಾಳಿಗೆಯಲ್ಲಿ ಹೂತುಹಾಕಿದ್ದ. ಅಷ್ಟೇ ಅಲ್ಲ, ತನ್ನ ಪತ್ನಿ ರಾಜೇಂದ್ರನನ್ನು ಕಸ್ಗಂಜ್ ಧೋಲ್ನಾ ಪ್ರದೇಶದಲ್ಲಿ ಕೊಲೆ ಮಾಡಿ ಎಸೆದಿದ್ದ. ಆ ಮೃತದೇಹದ ಬಳಿ ತನ್ನ ಐಡಿ ಕಾರ್ಡ್ ಹಾಕಿ, ಅದು ತನ್ನದೇ ದೇಹ ಎಂದು ನಂಬುವಂತೆ ಮಾಡಿದ್ದ.
ಉತ್ತರ ಪ್ರದೇಶದ ಕಾನ್ಸ್ಟೆಬಲ್ ಆಗಿದ್ದ ಮಹಿಳೆ ಜತೆಗಿನ ವಿವಾಹೇತರ ಸಂಬಂಧಕ್ಕಾಗಿಯೇ ರಾಕೇಶ್ ಈ ಎಲ್ಲ ಕೊಲೆಗಳನ್ನೂ ಮಾಡಿದ್ದ. ನಿವೃತ್ತ ಹೆಡ್ ಕಾನ್ಸ್ಟೆಬಲ್ ಆಗಿರುವ ರಾಕೇಶ್ ತಂದೆ ಕೂಡ ಇದಕ್ಕೆ ಸಹಾಯ ಮಾಡಿದ್ದರು. ಇಬ್ಬರೂ ಸೇರಿ ರಾಕೇಶ್ ಸಾವಿನ ನಾಟಕವಾಡಿದ್ದರು. ಹೀಗೆ ಮೂರು ವರ್ಷಕ್ಕೂ ಹೆಚ್ಚು ಸಮಯದಿಂದ ಕಸ್ಗಂಜ್ ಮತ್ತು ಜಿಬಿ ನಗರ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದರು.
ರಾಕೇಶ್ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಿಕೊಂಡು ಓಡಾಡುತ್ತಿದ್ದರೆ, ಆತನ ಪತ್ನಿಯ ಕುಟುಂಬದವರು ಕಾಣೆಯಾದ ಮಗಳು ಹಾಗೂ ಮೊಮ್ಮಕ್ಕಳಿಗಾಗಿ ನಗರದ ತುಂಬೆಲ್ಲ ಪೋಸ್ಟರ್ಗಳನ್ನು ಅಂಟಿಸಿದ್ದರು. ಬಿಸ್ರಾಖ್ ಪೊಲೀಸ್ ಠಾಣೆಗೆ ರಾಕೇಶ್ ವಿರುದ್ಧ ಅಪಹರಣದ ದೂರು ನೀಡಿದ್ದರು.
2018ರ ಏಪ್ರಿಲ್ನಲ್ಲಿ ಕಸ್ಗಂಜ್ನ ಧೋಲ್ನಾ ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾದಾಗ ರಾಕೇಶ್ ತಂದೆ ಬನ್ವರಿಲಾಲ್, ಅದು ತನ್ನ ಮಗನ ದೇಹ ಎಂದು ಹೇಳಿದ್ದರು. ಆದರೆ ಧೋಲ್ನಾ ನಿವಾಸಿಗಳು, ಅದು ರಾಕೇಶ್ ಸ್ನೇಹಿತ ರಾಜೇಂದ್ರ ಅವರ ದೇಹ ಎಂದು ಗುರುತಿಸಿದ್ದರು. ಅಂತ್ಯಸಂಸ್ಕಾರದ ವಿಚಾರದಲ್ಲಿ ಬನ್ವರಿಲಾಲ್ ಹಾಗೂ ರಾಜೇಂದ್ರನ ಕುಟುಂಬದವರ ನಡುವೆ ತಿಕ್ಕಾಟ ನಡೆದಿತ್ತು.
ಇದೇ ಸಮಯಕ್ಕೆ ರಾಕೇಶ್ ಪತ್ನಿ ಹಾಗೂ ಮಕ್ಕಳನ್ನು ಹುಡುಕುವ ತನಿಖೆಯೂ ಸಾಗಿತ್ತು. ರಾಕೇಶ್ ಸುಳ್ಳು ಹೆಸರು ಹೇಳಿಕೊಂಡು ನೆಲೆಸಿರುವ ಬಗ್ಗೆ ಸುಳಿವು ತಿಳಿದ ಪೊಲೀಸರು, ಬುಧವಾರ ಆತನನ್ನು ಬಂಧಿಸಿದ್ದರು. ಬನ್ವರಿಲಾಲ್ನನ್ನು ಕೂಡ ಬಂಧಿಸಿ, ಇಬ್ಬರನ್ನೂ ಚಿಪ್ನಾಯಾ ಪ್ರದೇಶಕ್ಕೆ ಕರೆತರಲಾಗಿತ್ತು. ಅವರಿಬ್ಬರೂ ನೀಡಿದ ಮಾಹಿತಿಯಂತೆ ನೆಲವನ್ನು ಅಗೆದಾಗ ಮೂರು ಅಸ್ತಿಪಂಜರಗಳು ಪತ್ತೆಯಾಗಿದ್ದವು. ಅವುಗಳ ಗುರುತು ಖಚಿತಪಡಿಸಿಕೊಳ್ಳಲು ಡಿಎನ್ಎ ಪರೀಕ್ಷೆಗಾಗಿ ರವಾನಿಸಲಾಗಿದೆ.
ಮೃತದೇಹಗಳನ್ನು ಹೂತುಹಾಕಿದ್ದ ಜಾಗದ ಮೇಲೆ ಗೋಡೆಯೊಂದನ್ನು ಕಟ್ಟಿದ್ದರು. ರಾಕೇಶ್ ಜತೆ ಸಂಬಂಧ ಇರಿಸಿಕೊಂಡಿದ್ದ ಮಹಿಳೆ ಕೂಡ ಅದೇ ಪ್ರದೇಶದವಳಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.