ಜೈಲಿನಲ್ಲಿರುವ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಿ: ಸುಪ್ರೀಂಕೋರ್ಟ್ ಆದೇಶ

ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೈಲುಗಳಲ್ಲಿನ ಕೈದಿಗಳ ನಿಬಿಡತೆಯನ್ನು ತಗ್ಗಿಸಲು ಸುಪ್ರೀಂಕೋರ್ಟ್ ಆದೇಶಿಸಿದೆ. ಕಳೆದ ಬಾರಿ ಪೆರೋಲ್ ಮತ್ತು ಜಾಮೀನು ಪಡೆದಿದ್ದವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ.

ಜೈಲಿನಲ್ಲಿರುವ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಿ: ಸುಪ್ರೀಂಕೋರ್ಟ್ ಆದೇಶ
Linkup
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಬಿಕ್ಕಟ್ಟಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹಗಳಲ್ಲಿನ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಶನಿವಾರ ಆದೇಶಿಸಿದೆ. ಸಾಂಕ್ರಾಮಿಕದ ಕಾರಣ, ಜಾಮೀನು ಪಡೆದ ಅಥವಾ ಕಳೆದ ವರ್ಷ ಪೆರೋಲ್ ದೊರೆತಿದ್ದ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ, ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. 'ಸಾಂಕ್ರಾಮಿಕದ ಬಿಕ್ಕಟ್ಟು ಮುಗಿಯುವವರೆಗೂ ನಮ್ಮ ಹಿಂದಿನ ಆದೇಶಗಳಂತೆ ಪೆರೋಲ್ ಪಡೆದಿದ್ದ ಕೈದಿಗಳಿಗೆ ಮತ್ತೆ 90 ದಿನಗಳ ಅವಧಿಯವರೆಗೆ ಪೆರೋಲ್ ನೀಡಬೇಕು ಎಂದು ನಾವು ಆದೇಶಿಸುತ್ತೇವೆ' ಎಂದು ನ್ಯಾಯಪೀಠ ಹೇಳಿದೆ. ಆರೋಪಿಗಳನ್ನು ಬಂಧಿಸಿ ಕರೆತರುವಾಗ ಅವರ ಕೈ ಮುಟ್ಟಿದರೆ ಪೊಲೀಸ್ ಸಿಬ್ಬಂದಿಗೆ ಹರಡುವ ಭಾರಿ ಅಪಾಯವಿರುವುದರಿಂದ, ಈ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೈದಿಗಳಿಗೆ ಕೈಕೋಳ ತೊಡಿಸುವುದರಿಂದ ವಿನಾಯಿತಿ ನೀಡಬೇಕೆಂದು ಅಟಾರ್ನಿ ಜನರಲ್ ಮನವಿಯ ವೇಳೆ ಕೋರ್ಟ್ ಈ ಸಂಗತಿಯನ್ನು ಪರಿಗಣಿಸಿದೆ. 'ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಜೈಲಿನಲ್ಲಿರುವುದನ್ನು ನಾವು ಗಮನಿಸಬಹುದು. ಭಾರತದ ಕೆಲವು ಕಾರಾಗೃಹಗಳು ತುಂಬಿತುಳುಕುತ್ತಿದ್ದು, ಅವುಗಳ ಸಾಮರ್ಥ್ಯಕ್ಕಿಂತಲೂ ಅಧಿಕ ಕೈದಿಗಳನ್ನು ಹೊಂದಿವೆ. ಇದು ಕಾರಾಗೃಹದಲ್ಲಿನ ಕೈದಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಆರೋಗ್ಯ ಮತ್ತು ಜೀವಿಸುವ ಹಕ್ಕಿನ ವಿಚಾರದಲ್ಲಿ ಆತಂಕ ಮೂಡಿಸುತ್ತಿವೆ. ಹೀಗಾಗಿ ಜೈಲುಗಳಲ್ಲಿನ ನಿಬಿಡತೆಯನ್ನು ತಗ್ಗಿಸುವ ಅಗತ್ಯವಿದೆ' ಎಂದು ಕೋರ್ಟ್ ಹೇಳಿದೆ. 'ಈ ಸಂಬಂಧ ನಾವು ದೆಹಲಿಯ ಉದಾಹರಣೆಯನ್ನು ನೀಡುತ್ತೇವೆ. ಅಲ್ಲಿನ ಜೈಲುಗಳಲ್ಲಿನ ಕೈದಿಗಳ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುತ್ತಿದೆ. ಈ ರೀತಿಯ ಕ್ರಮಗಳನ್ನು ಇತರೆ ರಾಜ್ಯಗಳೂ ಅಳವಡಿಸಿಕೊಳ್ಳಬೇಕಿದೆ' ಎಂದು ಕೋರ್ಟ್ ತಿಳಿಸಿದೆ.