ಖೇಲ್‌ ರತ್ನ ಬಳಿಕ ಅಸ್ಸಾಂನ ನ್ಯಾಷನಲ್‌ ಪಾರ್ಕ್‌ ಹೆಸರು ಬದಲಾವಣೆ; ರಾಜೀವ್‌ ಗಾಂಧಿ ಹೆಸರು ತೆರವು

ಪ್ರಮುಖ ಸ್ಥಳ, ಪ್ರಶಸ್ತಿಗಳ ಹೆಸರು ಬದಲಾವಣೆ ಪರ್ವ ಮುಂದುವರಿದಿದ್ದು, ಅಸ್ಸಾಂನ ಒರಂಗ್‌ ರಾಷ್ಟ್ರೀಯ ಉದ್ಯಾನವನ ಹೆಸರನ್ನು ಬದಲಾಯಿಸಲಾಗಿದ್ದು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೆಸರನ್ನು ತೆರವುಗೊಳಿಸಲಾಗಿದೆ. ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಖೇಲ್‌ ರತ್ನ ಬಳಿಕ ಅಸ್ಸಾಂನ ನ್ಯಾಷನಲ್‌ ಪಾರ್ಕ್‌ ಹೆಸರು ಬದಲಾವಣೆ; ರಾಜೀವ್‌ ಗಾಂಧಿ ಹೆಸರು ತೆರವು
Linkup
ಗುವಾಹಟಿ: ಖೇಲ್‌ ರತ್ನ ಪ್ರಶಸ್ತಿಗೆ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಎಂದು ನಾಮಕರಣ ಮಾಡಲಾಗಿತ್ತು. ಅದಾದ ಕೆಲವೇ ದಿನಗಳ ಬಳಿಕ ಈಗ ಅಸ್ಸಾಂನ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಬದಲಾಯಿಸಿದ್ದು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹೆಸರನ್ನು ತೆರವುಗೊಳಿಸಲಾಗಿದೆ. ಬುಧವಾರ ನೇತೃತ್ವದ ಸರ್ಕಾರ ಈ ತೀರ್ಮಾನ ಮಾಡಿದೆ. ಒರಂಗ್‌ನಲ್ಲಿದ್ದ ರಾಜೀವ್‌ ಗಾಂಧಿ ಇನ್ಮುಂದೆ ಕೇವಲ ಒರಂಗ್‌ ರಾಷ್ಟ್ರೀಯ ಉದ್ಯಾನವನವಾಗಿರಲಿದೆ. ಅತಿ ಹೆಚ್ಚು ರಾಯಲ್‌ ಬಂಗಾಳ್‌ ಹುಲಿಗಳನ್ನು ಹೊಂದಿರುವ ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನ ಇದಾಗಿದ್ದು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹೆಸರನ್ನು ತೆರವುಗೊಳಿಸಲಾಗಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು. ಅನೇಕ ಸಂಸ್ಥೆಗಳು ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆಗೆ ಆಗ್ರಹಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದಿವಾಸಿ ಹಾಗೂ ಟೀ ಬುಡಕಟ್ಟು ಜನಾಂಗದ ಬೇಡಿಕೆಯಂತೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನವನ್ನು ಒರಂಗ್‌ ರಾಷ್ಟ್ರೀಯ ಉದ್ಯಾನವನ ಎಂದು ಬದಲಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅಸ್ಸಾಂ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಒರಂಗ್‌ ರಾಷ್ಟ್ರೀಯ ಉದ್ಯಾನವನ ಧಾರಂಗ್‌, ಉದಳ್‌ಗುರಿ ಮತ್ತು ಸೋನಿತ್‌ಪುರ್‌ ಜಿಲ್ಲೆಯ ಬ್ರಹ್ಮಪುತ್ರ ನದಿಯ ಉತ್ತರ ದಂಡೆ ಮೇಲೆ ಇದೆ. ಇಂಡಿಯನ್‌ ರೈನೋಸ್‌, ರಾಯಲ್‌ ಬೆಂಗಾಲ್‌ ಟೈಗರ್‌, ಪಿಗ್ಮಿ ಹಾಗ್‌, ಆನೆಗಳು ಮತ್ತು ಕಾಡೆಮ್ಮೆಗಳಿಗೆ ಹೆಸರುವಾಸಿಯಾಗಿದೆ. ಒಟ್ಟು 79.28 ಕಿಮೀ ಚದರ ಕಿಮೀ ವಿಸ್ತಿರ್ಣ ಹೊಂದಿರುವ ಒರಂಗ್‌ ರಾಷ್ಟ್ರೀಯ ಉದ್ಯಾನವನವನ್ನು 1999ರಲ್ಲಿ ಸ್ಥಾಪಿಸಲಾಯಿತು. ಅದಕ್ಕೂ ಮುನ್ನ 1985ರಲ್ಲಿ ವನ್ಯಜೀವಿ ಧಾಮ ಎಂದು ಘೋಷಿಸಲಾಗಿತ್ತು. 2001ರಲ್ಲಿ ಕಾಂಗ್ರೆಸ್‌ನ ತರುಣ್‌ ಗೊಗೊಯ್‌ ನೇತೃತ್ವದ ಅಸ್ಸಾಂ ಸರ್ಕಾರ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್‌ ಗಾಂಧಿ ಹೆಸರನ್ನು ನಾಮಕರಣ ಮಾಡಿತ್ತು. ಸದ್ಯ ಬಿಜೆಪಿಯ ಹಿಮಂತ್‌ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿಯಾಗಿದ್ದು, ಕೇಂದ್ರದ ನೀತಿಯನ್ನು ರಾಜ್ಯದಲ್ಲಿ ಅಳವಡಿಸಲು ಮುಂದಾಗಿರುವುದಕ್ಕೆ, ಕಾಂಗ್ರೆಸ್‌ನ ಸ್ಥಳೀಯ ನಾಯಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ತಂಡ ಹಾಕಿಯಲ್ಲಿ ಕಂಚಿನ ಪದಕ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಮೇಜರ್‌ ಧ್ಯಾನ್‌ಚಂದ್‌ ಹೆಸರನ್ನು ಮರುನಾಮಕರಣ ಮಾಡಿದ್ದರು. ಕೇಂದ್ರದ ಈ ನಡೆ ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ಈಗ ಅಂತಹದ್ದೇ ನಿರ್ಧಾರವನ್ನು ಅಸ್ಸಾಂನ ಬಿಜೆಪಿ ಸರ್ಕಾರ ತೆಗೆದುಕೊಂಡಿದೆ.