![](https://vijaykarnataka.com/photo/84060390/photo-84060390.jpg)
ಹೊಸದಿಲ್ಲಿ: ಕೋವಿಡ್ 19 ಡೋಸ್‌ಗಳ ಕೊರತೆ ಕುರಿತಂತೆ ಮತ್ತೊಮ್ಮೆ ಕೇಂದ್ರ ಸರಕಾರವನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ವಿರುದ್ಧ ಆರೋಗ್ಯ ಸಚಿವ ಕಿಡಿಕಾರಿದ್ದಾರೆ. ಲಸಿಕೆ ವಿಚಾರವಾಗಿ ಕೇಂದ್ರ ಸರಕಾರವನ್ನು ನಿರಂತರವಾಗಿ ಟೀಕಿಸುತ್ತಿರುವ ರಾಹುಲ್ ಗಾಂಧಿ ಹಾಗೂ ವಿರೋಧಪಕ್ಷದ ಮುಖಂಡರಿಗೆ ಆರೋಗ್ಯ ಸಚಿವ ಹರ್ಷವರ್ಧನ್, ಗುರುವಾರ ದಾಖಲೆಗಳ ಸಹಿತ ವಿವರಣೆ ನೀಡಿದ್ದರು. ಆದರೂ ಶುಕ್ರವಾರ ರಾಹುಲ್ ಗಾಂಧಿ ಮತ್ತೊಮ್ಮೆ 'ಲಸಿಕೆ ಎಲ್ಲಿ?' ಎಂದು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡಿರುವ ಹರ್ಷವರ್ಧನ್, ರಾಹುಲ್ ಗಾಂಧಿ ಅವರ ಸಮಸ್ಯೆಯೇನು? ಅವರು ಓದುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಲಸಿಕೆ ಕುರಿತಾದ ಯಾವುದೇ ಚರ್ಚೆಗೆ ಮುಂದಾಗದ ರಾಹುಲ್ ಗಾಂಧಿ ಅವರ ಅಹಂಕಾರಕ್ಕೆ ಮದ್ದಿಲ್ಲ ಎಂದು ಟೀಕಿಸಿದ್ದಾರೆ.
'ನಿನ್ನೆಯಷ್ಟೇ, ಜುಲೈ ತಿಂಗಳಲ್ಲಿ ಲಭ್ಯವಿರುವ ಲಸಿಕೆಗಳ ಬಗ್ಗೆ ವಾಸ್ತವ ಅಂಶಗಳನ್ನು ನೀಡಿದ್ದೇನೆ. ರಾಹುಲ್ ಗಾಂಧಿಯ ಸಮಸ್ಯೆಯಾದರೂ ಏನು? ಅವರು ಓದುವುದಿಲ್ಲವೇ? ಅವರಿಗೆ ಅರ್ಥವಾಗುವುದಿಲ್ಲವೇ? ಅಹಂಕಾರ ಮತ್ತು ನಿರ್ಲಕ್ಷ್ಯಕ್ಕೆ ಯಾವುದೇ ಲಸಿಕೆ ಇಲ್ಲ!! ಕಾಂಗ್ರೆಸ್ ತನ್ನ ಒಟ್ಟಾರೆ ನಾಯಕತ್ವದ ಬಗ್ಗೆ ಆಲೋಚಿಸಲೇಬೇಕು!' ಎಂದು ಹರ್ಷವರ್ಧನ್ ವ್ಯಂಗ್ಯವಾಗಿ ಮಾಡಿದ್ದಾರೆ.
ಇದಕ್ಕೆ ಕೆಲವು ಗಂಟೆಗಳ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, 'ಜುಲೈ ತಿಂಗಳು ಬಂದಿತು. ಲಸಿಕೆ ಇನ್ನೂ ಆಗಮಿಸಿಲ್ಲ. ಲಸಿಕೆಗಳು ಎಲ್ಲಿವೆ' ಎಂದು ಪ್ರಶ್ನಿಸಿದ್ದರು.
''ರಾಜ್ಯಗಳು ಲಸಿಕೆ ವಿಚಾರದಲ್ಲಿ ನಾಚಿಕೆಗೇಡಿನ ರಾಜಕೀಯ ನಿಲ್ಲಿಸಿ ಉತ್ತಮ ಆಡಳಿತದತ್ತ ಗಮನ ನೀಡಬೇಕು. ರಾಜ್ಯಗಳಿಗೆ ಜುಲೈನಲ್ಲಿ 12 ಕೋಟಿ ಡೋಸ್ ಲಸಿಕೆ ನೀಡಲಾಗುವುದು. ಅಂದರೆ ನಿತ್ಯ 50-60 ಲಕ್ಷ ಡೋಸ್ ನೀಡಬಹುದು. ಇದಲ್ಲದೆ ಖಾಸಗಿ ಕೋಟಾದಲ್ಲಿಯೂ ಒಟ್ಟು ಉತ್ಪಾದನೆಯ ಶೇ.25ರಷ್ಟು ಲಸಿಕೆ ಲಭ್ಯವಿದೆ,'' ಎಂದು ಹರ್ಷವರ್ಧನ್ ಗುರುವಾರ ತಿಳಿಸಿದ್ದರು.