ಬೆಂಗಳೂರು: ಬ್ರಹ್ಮಾಂಡ ಬಗೆದಷ್ಟು ಹೆಚ್ಚುತ್ತಿದ್ದು, ಎರಡನೇ ದಿನವೂ ಶೋಧ ಕಾರ್ಯ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸುಮಾರು ನೂರಾರು ಕೋಟಿ ರೂ. ಅಕ್ರಮವೆಸಗಿರುವ ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ. ಮತ್ತೊಂದೆಡೆ ಬಿಡಿಎ ಕಚೇರಿಯನ್ನು ಮಂಗಳವಾರದವರೆಗೂ ತಮ್ಮ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಬೀಗ ಹಾಕಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಿಡಿಎ ಅಭಿವೃದ್ಧಿಪಡಿಸಿರುವ ಅರ್ಕಾವತಿ, ಕೆಂಪೇಗೌಡ, ವಿಶ್ವೇಶ್ವರಯ್ಯ, ಕೆಂಗೇರಿ, ಉಳ್ಳಾಲ, ಸ್ಯಾಟಲೈಟ್ ವ್ಯಾಪ್ತಿಯಲ್ಲಿರುವ ಬಡಾವಣೆಗಳ ನಿವೇಶನಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಅನರ್ಹ ವ್ಯಕ್ತಿಗಳಿಗೆ ನೋಂದಣಿ ಮಾಡಿದ್ದಾರೆ. ಮಧ್ಯವರ್ತಿಗಳ ಜತೆ ಸೇರಿಕೊಂಡು ಹಲವರಿಗೆ ಸಾವಿರಾರು ಚದರ ಅಡಿ ಜಾಗ ಮಂಜೂರು ಮಾಡಿರುವುದು ಶೋಧದ ವೇಳೆ ಬೆಳಕಿಗೆ ಬಂದಿದೆ.
ಬಿಡಿಎ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಸುಮಾರು ರೂ.75 ಕೋಟಿ ರೂ.ಮೌಲ್ಯದ 6 ನಿವೇಶನಗಳನ್ನು ಸುಳ್ಳು ಮಾಹಿತಿ ನೀಡಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ್ದಾರೆ. ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಶಾಮೀಲಾಗಿ ಬೆಲೆಬಾಳುವ ಈ ನಿವೇಶನಗಳನ್ನು ಅನರ್ಹ ವ್ಯಕ್ತಿಯೊಬ್ಬರಿಗೆ ಸಿಗುವಂತೆ ಮಾಡಲಾಗಿರುವ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.
ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು ಖಾಸಗಿ ವ್ಯಕ್ತಿ ಮತ್ತು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಕೆಂಗೇರಿ ಹೋಬಳಿ ಉಳ್ಳಾಲ ಗ್ರಾಮದಲ್ಲಿ ನಿರ್ದಿಷ್ಟ ವ್ಯಕ್ತಿಯಿಂದ ಯಾವುದೇ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳದೆ ಇದ್ದರೂ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಬದಲಿ ನಿವೇಶನವಾಗಿ 1800 ಚ.ಅ ಅಳತೆಯ ಸುಮಾರು ರೂ.1.5 ಕೋಟಿ ರೂ. ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಾಡಲಾಗಿದೆ. ಅಲ್ಲದೇ, ಬಿಡಿಎ ಅಧಿಕಾರಿಗಳು ಖಾಸಗಿ ವ್ಯಕ್ತಿಗಳು ಮತ್ತು ಮಧ್ಯರ್ತಿಗಳ ಜತೆ ಸೇರಿಕೊಂಡು ಕೆಂಗೇರಿ ಸ್ಯಾಟಲೈಟ್ ಟೌನ್ ಬಳಿಯೂ ನಕಲಿ ದಾಖಲೆಗಳನ್ನು ಸೃಷ್ಟಿಸಿ 1000 ಚ.ಅ ಅಳತೆಯ ಸುಮಾರು ರೂ.80 ಲಕ್ಷ ರೂ. ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎನ್ನಲಾಗಿದೆ.
ನಗರ ಚಂದ್ರಾಲೇಔಟ್‌ನಲ್ಲಿಯೂ ನಕಲಿ ದಾಖಲೆಗಳನ್ನು ಹಾಜರುಪಡಿಸಿ ಐದು ಕೋಟಿ ರೂ. ಮೌಲ್ಯದ 2400 ಚ.ಅ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ನಿವೇಶನ ಫಲಾನುಭವಿಗಳ ಮೂಲ ದಾಖಲಾತಿಗಳನ್ನೇ ತಿದ್ದುಪಡಿಗೊಳಿಸಿದ್ದಲ್ಲದೆ, 30 ಲಕ್ಷ ರೂ. ಮೌಲ್ಯದ ನಿವೇಶನವನ್ನು ಅಕ್ರಮವಾಗಿ ಅನರ್ಹ ವ್ಯಕ್ತಿಗೆ ಮಂಜೂರು ಮಾಡಿದ್ದಾರೆ.
ಮತ್ತೊಂದೆಡೆ ಕೆಲವೊಂದು ಪ್ರಕರಣಗಳಲ್ಲಿ ಒಂದೇ ನಿವೇಶನವನ್ನು ಒಂದಕಿಂತ ಹೆಚ್ಚಿನ ವ್ಯಕ್ತಿಗಳಿಗೆ ನೋಂದಣಿ ಮಾಡಿಕೊಟ್ಟು ಫಲಾನುಭವಿಗಳು ಅನಗತ್ಯವಾಗಿ ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿದ್ದಾರೆ. ಬಿಡಿಎ ವಿಶ್ವೇಶ್ವರಯ್ಯ ಬಡಾವಣೆಯಲ್ಲೂ ಮೂಲ ಫಲಾನುಭವಿಗೆ ಮಂಜೂರಾದ 52 ಲಕ್ಷ ರೂ. ಮೌಲ್ಯದ ನಿವೇಶನವನ್ನು ಅನರ್ಹ ವ್ಯಕ್ತಿಗೆ ನೀಡಲಾಗಿದೆ. ಅರ್ಕಾವತಿ ಬಡಾವಣೆಯಲ್ಲಿ ಫಲಾನುಭವಿಯೊಬ್ಬರಿಗೆ ನಿವೇಶನ ಮಂಜೂರಾಗಿದ್ದರೂ, ಯಾವುದೇ ಕಾರಣ ಇಲ್ಲದೆ ದುರುದ್ದೇಶದಿಂದ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನವನ್ನು ಮಂಜೂರು ಮಾಡಲಾಗಿದೆ.
ಬಿಡಿಎ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ಭೀಮನಕುಪ್ಪೆ ಗ್ರಾಮ, ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಡಾ.ಕೆ.ಶಿವರಾಮ ಕಾರಂತ ಬಡಾವಣೆ ಹಾಗೂ ಇತರೆಡೆಯೂ ಬಿಡಿಎ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಅಕ್ರಮವೆಸಗಿದ್ದಾರೆ. ಸಂಬಂಧಪಟ್ಟ ದಾಖಲೆಗಳು ಮತ್ತು ನೊಂದಣಿ ಸಹಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೇ ಅಲ್ಲದೇ ಸರಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಮಾಲಿಕತ್ವ ಹೊಂದಿರುವಂತೆ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿರುವ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿಗಳು, ಖಾಸಗಿ ವ್ಯಕ್ತಿಗಳೊಂದಿಗೆ ಕೂಡಿಕೊಂಡು ಕೊಟ್ಯಂತರ ರೂ. ಮೌಲ್ಯದ ಪರಿಹಾರ ಧನವನ್ನು ತಮ್ಮವರಿಗೆ ನೀಡಿದ್ದಾರೆ.
ಬಿಡಿಎ ಅಂಜನಾಪುರ ಬಡಾವಣೆಯಲ್ಲಿ ಫಲಾನುಭವಿಗಳಿಗೆ ಸೇರಿದ ನಿವೇಶನವೊಂದು ಒತ್ತುವರಿಯಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾದ ಬಿಡಿಎ ಅಧಿಕಾರಿಗಳು, ಬೇರೆ ಬಡಾವಣೆಯಲ್ಲಿ ನಿವೇಶನವನ್ನು ನೀಡಿ ಸದರಿ ನಿವೇಶನವನ್ನು ಇತರೆ ಮೂರನೇ ವ್ಯಕ್ತಿಗೆ ಮಂಜೂರು ಮಾಡಿ ಅಕ್ರಮ ಎಸಗಿದ್ದಾರೆ.
ಅರ್ಕಾವತಿ ಬಡಾವಣೆ ಮತ್ತು ಇನ್ನು ಕೆಲವು ಬಡಾವಣೆಗಳಲ್ಲಿ, ಕೆಲವು ಅರ್ಜಿದಾರರು ನಿವೇಶನ ಮಂಜೂರಾತಿ ಪಡೆದು ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡಿದ್ದರೂ ಅವರಿಗೆ ಲೀಸ್ ಕಂ ಸೇಲ್ ಡೀಡ್(ಎಲ್‌ಸಿಎಸ್‌ಡಿ)ಗಳನ್ನು ಮಾಡಿ, ನಿಗದಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಂಡಿಧಿದ್ದರೂ, ಅಬ್ಸ್‌ಲ್ಯೂಟ್ ಸೇಲ್ ಡೀಡ್(ಎಎಸ್‌ಡಿ)ಗಳನ್ನು ಮಾಡಿಕೊಡದೆ ಉದ್ದೇಶಪೂರಕವಾಗಿ ವಿಳಂಬ ಮಾಡಿದ್ದಾರೆ. ಅದೇ ರೀತಿ ನಿಗದಿತ ಅವಧಿಯೊಳಗೆ ಬಿಡಿಎ ನಿಗದಿ ಪಡಿಸಿರುವ ಹಣವನ್ನು ಸಂದಾಯ ಮಾಡಿದ ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ಅನವ್ಯಶಕ ವಿಳಂಬ ನೀತಿ ಅನುಸರಿಸಲಾಗಿದೆ. ಈ ಎಲ್ಲ ಪ್ರಕರಣಗಳ ಮೂಲ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.
ಎರಡು ದಿನಗಳ ದಾಳಿಯಲ್ಲಿ ಬಿಡಿಎ ಕಚೇರಿಯಲ್ಲಿ ನಡೆಯುತ್ತಿದ್ದ ಭಾರೀ ಅಕ್ರಮ ಬಯಲಾಗಿದ್ದು, ಅಧಿಕಾರಿ, ಸಿಬ್ಬಂದಿ ಮತ್ತು ಮಧ್ಯವರ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವಂಚಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಮಂಗಳವಾರ ಮತ್ತೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಎಸಿಬಿ ತಿಳಿಸಿದೆ.
ಅನಾಮಧೇಯ ಮಹಿಳೆ ಹೆಸರಿನಲ್ಲಿ ಎಂಟು ನಿವೇಶನ!
ಎಸಿಬಿ ದಾಳಿ ವೇಳೆ ಮಹಿಳೆಯೊಬ್ಬರ ಹೆಸರಿನಲ್ಲಿಎಂಟು ನಿವೇಶನ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಈ ವಿಚಾರ ಆ ಮಹಿಳೆಗೆ ಗೊತ್ತಿಲ್ಲ. ಬಿಡಿಎ ಅಧಿಕಾರಿಗಳು ಮಧ್ಯವರ್ತಿಗಳ ಜತೆ ಸೇರಿಕೊಂಡು ಅಕ್ರಮವಾಗಿ ನಿವೇಶನ ಮಂಜೂರು ಮಾಡಿಕೊಳ್ಳಲು ಮಹಿಳೆಯೊಬ್ಬರ ಹೆಸರಿನಲ್ಲಿ ನಗರದ ವಿವಿಧೆಡೆ ಎಂಟು ನಿವೇಧಿಶನ ಮಂಜೂರು ಮಾಡಿದ್ದಾರೆ. ಈ ದಾಖಲೆ ದೊರೆತ ಕೂಡಲೇ ಎಸಿಬಿ ಅಧಿಕಾರಿಗಳು, ಆ ಮಹಿಳೆಯನ್ನು ಸಂಪರ್ಕಿಸಿದಾಗ ಆ ರೀತಿಯ ಯಾವುದೇ ನಿವೇಶನ ಖರೀದಿಸಿಲ್ಲ ಎಂದು ಹೇಳಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.