: ಅಭಿಮಾನಿಗಳ ಪಾಲಿನ ಅಪ್ಪು, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಪುನೀತ್ ರಾಜ್ ಕುಮಾರ್ ಅವರ ನಿಧನ ನಿಜಕ್ಕೂ ಕನ್ನಡಿಗರ ಪಾಲಿಗೆ ಒಂದು ಕರಾಳ ದಿನ. ಬಹುಮುಖ ಪ್ರತಿಭೆಯ ಮೂಲಕ, ಬಾಲ ನಟನಾಗಿ, ನಟನಾಗಿ, ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದ ಕನ್ನಡದ ದೊಡ್ಮನೆಯ ಕೊಂಡಿಯೊಂದು ಇನ್ನಿಲ್ಲವಾಗಿದೆ ಎಂದು ಹೇಳಲು ಮನಸ್ಸು ಒಪ್ಪುತ್ತಿಲ್ಲ ಎಂದು ಮುರುಗೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ಬೆಟ್ಟದ ಹೂವು, ಭಾಗ್ಯವಂತ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ಅವರು, ನೋಡ ನೋಡುತ್ತಲೇ ಬಹು ಬೇಗನೆ ಎತ್ತರಕ್ಕೆ ಬೆಳೆದವರು. ಸಿನಿಮಾದ ಮೂಲಕ ಅಪ್ಪು, ಪವರ್ ಸ್ಟಾರ್, ಕನ್ನಡದ ರಾಜರತ್ನ ಎಂಬುದು ಅವರಿಗೆ ಮತ್ತು ಅವರ ನಟನೆಗೆ ಸಿಕ್ಕ ಗೌರವ ಎಂದು ನಿರಾಣಿ ಸ್ಮರಿಸಿದ್ದಾರೆ.
ಪ್ರೇಮದ ಕಾಣಿಕೆ, ಭಾಗ್ಯವಂತ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ, ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು, ಮಿಲನ, ಬಿಂದಾಸ್, ವಂಶಿ, ರಾಜ್ ದ ಶೋ ಮ್ಯಾನ್, ಪೃಥ್ವಿ, ರಾಮ್, ಜಾಕಿ, ಹುಡುಗರು, ಪರಮಾತ್ಮ, ಅಣ್ಣ ಬಾಂಡ್, ಯಾರೇ ಕೂಗಾಡಲಿ, ನಿನ್ನಿಂದಲೇ, ಮೈತ್ರಿ, ಪವರ್ ಸ್ಟಾರ್, ಧೀರ ರಣಧೀರ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿ ಪುತ, ನಟಸಾರ್ವಭೌಮ, ಯುವರತ್ನ ಹೀಗೆ ಅನೇಕ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಅಪ್ಪು ಮನೆ ಮಾತಾಗಿದ್ದರು ಎಂದು ನಿರಾಣಿ ಹೊಗಳಿದ್ದಾರೆ.
ಚಿಕ್ಕಂದಿನಿಂದಲೇ ತಂದೆಯೊಂದಿಗೆ ಪರದೆಯ ಮೇಲೆ ಮಿಂಚುವ ಮೂಲಕ ಕನ್ನಡಿಗರಿಗೆ ಅಚ್ಚುಮೆಚ್ಚು ಎನಿಸಿಕೊಂಡರು. ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಅವರ ಪ್ರೀತಿಯ ತಮ್ಮನಾಗಿ ಪುನೀತ್ ರಾಜ್ ಕುಮಾರ್ ಗುರುತಿಸಿಕೊಂಡಿದ್ದರು. 1985ರಲ್ಲಿ ಬೆಟ್ಟದ ಹೂವು ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸುವ ಪ್ರವೃತ್ತಿ ಹೊಂದಿದ್ದರು. ಅಚ್ಚರಿ ವಿಚಾರವೆಂದರೆ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲ ನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು ಎಂದು ನಿರಾಣಿ ಹೇಳಿದ್ದಾರೆ.
ಸಿನಿಮಾ ಮಾತ್ರದಲ್ಲದೆ, ಟಿವಿ ಶೋನಲ್ಲೂ ಅಪ್ಪು ಕಾಣಿಸಿಕೊಂಡಿದ್ದರು. ಕನ್ನಡ ಕೋಟ್ಯಾಧಿಪತಿ ನಿರೂಪಣೆಯನ್ನು ಮಾಡಿದ್ದರು. ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಆವೃತ್ತಿಯಲ್ಲಿ ಮಿಂಚಿದ್ದರು. ಅಷ್ಟೇ ಏಕೆ ಹಲವಾರು ಜಾಹೀರಾತು ಹಾಗೂ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದರು. ಸಿನಿಮಾಗಳಿಗೆ ಧ್ವನಿ ಮಾತ್ರವಲ್ಲದೆ ಹಲವಾರು ಹಾಡುಗಳನ್ನು ಹಾಡಿದ್ದರು.
ತಾನೊಬ್ಬ ಪ್ರಸಿದ್ಧ ನಟನಾಗಿದ್ದರೂ ತಂದೆಯಂತೆ ಎಲ್ಲರಲ್ಲೂ ಆತ್ಮೀಯವಾಗಿ ಬೆರೆಯುವ ಸರಳತೆ, ಎಲ್ಲರಿಗೂ ಇಷ್ಟವಾಗುತ್ತಿತ್ತು. ಇಷ್ಟು ಬೇಗ ನಟ ಪುನೀತ್ ರಾಜ್‍ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ ಎಂದು ಹೇಳಲು ಆಗುತ್ತಿಲ್ಲ.! ಮತ್ತೆ ಹುಟ್ಟು ಬನ್ನಿ! ಎಂದು ಸಚಿವ ಮುರುಗೇಶ್ ನಿರಾಣಿ ತಮ್ಮ ಕಂಬನಿ ಮಿಡಿದಿದ್ದಾರೆ.