ಬೆಂಗಳೂರು: ವೃದ್ಧ ದಂಪತಿಯನ್ನು ಕೊಲೆಗೈದಿದ್ದು ಮಾಜಿ ಬಾಡಿಗೆದಾರ, ಹಂತಕ ಸಿಕ್ಕಿಬಿದ್ದಿದ್ದು ಹೇಗೆ?

ವರಮಹಾಲಕ್ಷ್ಮಿ ಹಬ್ಬದಂದು ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದಲ್ಲಿ ಹಾಡಹಗಲೇ ವೃದ್ಧ ದಂಪತಿ ಹತ್ಯೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ಆಂಧ್ರಪ್ರದೇಶದ ಹಿಂದೂಪುರದ ನಾಲ್ಗವರನ್ನು ಅರೆಸ್ಟ್‌ ಮಾಡಿದ್ದಾರೆ. ಪೊಲೀಸರಿಗೆ ಕಗ್ಗಂಟಾಗಿದ್ದ ಈ ಪ್ರಕರಣ ಹೇಗೆ ಬೇಧಿಸಿದ್ರು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಬೆಂಗಳೂರು: ವೃದ್ಧ ದಂಪತಿಯನ್ನು ಕೊಲೆಗೈದಿದ್ದು ಮಾಜಿ ಬಾಡಿಗೆದಾರ, ಹಂತಕ ಸಿಕ್ಕಿಬಿದ್ದಿದ್ದು ಹೇಗೆ?
Linkup
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದು ಕುಮಾರಸ್ವಾಮಿ ಲೇಔಟ್‌ನ ಕಾಶಿನಗರದಲ್ಲಿ ಹಾಡಹಗಲೇ ವೃದ್ಧ ದಂಪತಿ ಹತ್ಯೆ ಮಾಡಿದ್ದ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಹಿಂದೂಪುರದ ನಿವಾಸಿಗಳಾದ ನಾರಾಯಣಸ್ವಾಮಿ (42), ಶೇಖ್‌ ಆಸಿಫ್‌ (46), ರಾಮು ಅಲಿಯಾಸ್‌ ರಾಮಸ್ವಾಮಿ (38), ಗಂಗಾಧರ್‌ (36) ಬಂಧಿತರು. ಆರೋಪಿಗಳಿಂದ 193 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಶಾಂತರಾಜು (65), ಪ್ರೇಮಲತಾ (61) ದಂಪತಿಯನ್ನು ಕೊಲೆಗೈದಿದ್ದರು. ಆರೋಪಿ ನಾರಾಯಣಸ್ವಾಮಿ 10 ವರ್ಷಗಳ ಹಿಂದೆ ನಗರದ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಶಾಂತರಾಜು ಅವರ ಮೊದಲ ಮಹಡಿಯ ಮನೆಯನ್ನು ಬಾಡಿಗೆಗೆ ಪಡೆದು ಕುಟುಂಬಸ್ಥರೊಂದಿಗೆ ನೆಲೆಸಿದ್ದ. ಕೆಲ ವರ್ಷಗಳ ನಂತರ ಹಿಂದೂಪುರಕ್ಕೆ ತೆರಳಿ ಅಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ಪರಿಚಿತರಿಂದ ಪಡೆದಿದ್ದ ದೊಡ್ಡ ಮೊತ್ತದ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದ. ವೃದ್ಧ ದಂಪತಿ ಬಳಿ ಹಣ ಇರುವುದು ನಾರಾಯಣಸ್ವಾಮಿಗೆ ಗೊತ್ತಿತ್ತು. ಹೀಗಾಗಿ, ಸ್ನೇಹಿತ ಆಸಿಫ್‌ ಜತೆ ಆ.12ರಂದು ದಂಪತಿ ಮನೆಗೆ ಬಂದು 50 ಸಾವಿರ ರೂ. ಸಿಗಬಹುದೇ ಎಂದು ಕೇಳಿದ್ದ. ಹಣ ನೀಡಲು ಒಪ್ಪದ ದಂಪತಿ, ಶಾಂತರಾಜುವಿಗೆ ಹೃದಯ ಸಂಬಂಧ ಕಾಯಿಲೆಯಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಮಗೂ ಹಣದ ಅಗತ್ಯವಿದೆ ಎಂದಿದ್ದರು. ವರಮಹಾಲಕ್ಷ್ಮಿ ಹಬ್ಬದಂದು ಸೀರೆ ತೆಗೆದುಕೊಂಡು ಬರುವುದಾಗಿ ಹೇಳಿ ನಾರಾಯಣಸ್ವಾಮಿ ಹಿಂದೂಪುರಕ್ಕೆ ವಾಪಸ್ಸಾಗಿದ್ದ. ದಂಪತಿ ಬಳಿ ಹೆಚ್ಚಿನ ಹಣ, ಚಿನ್ನಾಭರಣ ಇರಬಹುದು ಎಂದು ಭಾವಿಸಿದ್ದ ಆತ, ಇತರ ಮೂವರು ಆರೋಪಿಗಳ ಜತೆಗೂಡಿ ದಂಪತಿ ಹತ್ಯೆಗೆ ಸಂಚು ರೂಪಿಸಿದ್ದ. ಬಸ್‌ನಲ್ಲೇ ಬಂದು ಕೃತ್ಯ ಎಸಗಿದರು: ಆ.20ರಂದು ಹಿಂದೂಪುರದಿಂದ ಬಸ್‌ನಲ್ಲಿ ಮೆಜೆಸ್ಟಿಕ್‌ಗೆ ಬಂದ ನಾಲ್ವರು ಆರೋಪಿಗಳು, ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್‌ನಲ್ಲಿ ಕೆಎಸ್‌ಲೇಔಟ್‌ಗೆ ಬಂದು ಬೆಳಗ್ಗೆ 11 ಗಂಟೆಗೆ ದಂಪತಿ ಮನೆಗೆ ಬಂದಿದ್ದರು. ಅಲ್ಲಿ ಟೀ ಕುಡಿದು ಪ್ರೇಮಲತಾ ಜತೆ ಕೆಲ ಹೊತ್ತು ಕಷ್ಟ ಸುಖ ಮಾತನಾಡಿದ್ದರು. ಆರೋಪಿಗಳ ಪೈಕಿ ರಾಮು ಶೌಚಗೃಹಕ್ಕೆ ಹೋಗಬೇಕು ಎಂದಿದ್ದ. ಪ್ರೇಮಲತಾ ಮನೆಯೊಳಗಿದ್ದ ಶೌಚಗೃಹ ಆತನಿಗೆ ತೋರಿಸುತ್ತಿದ್ದಂತೆ, ಏಕಾಏಕಿ ಕ್ಲಚ್‌ ವೈರ್‌ನಿಂದ ಅವರ ಕತ್ತನ್ನು ಬಿಗಿದು ಕೊಲೆಗೆ ಯತ್ನಿಸಿದ್ದ. ಇತರ ಆರೋಪಿಗಳೂ ಆತನಿಗೆ ಸಹಕರಿಸಿದ್ದರು. ನಂತರ ಬೆಡ್‌ರೂಂನಲ್ಲಿ ನಿದ್ದೆಗೆ ಜಾರಿದ್ದ ಶಾಂತರಾಜು ಕೋಣೆಗೆ ಆಗಮಿಸಿದ ಆರೋಪಿಗಳು ತಲೆದಿಂಬಿನಿಂದ ಉಸಿರುಗಟ್ಟಿಸಿ ಚೂರಿ ಹಾಗೂ ಸ್ಕ್ರೂ ಡ್ರೈವರ್‌ನಿಂದ ಕತ್ತಿಗೆ ಇರಿದು ಕೊಲೆ ಮಾಡಿದ್ದರು. ಬಳಿಕ ದಂಪತಿ ದೇಹದಲ್ಲಿದ್ದ ಚಿನ್ನದ ಸರ, ಉಂಗುರ ತೆಗೆದುಕೊಂಡು ಕಬೋರ್ಡ್‌ನ ಲಾಕರ್‌ ಒಡೆದು ಒಟ್ಟು 193 ಗ್ರಾಂ ಚಿನ್ನಾಭರಣ ದೋಚಿದ್ದರು. ಕೆಎಸ್‌ಲೇಔಟ್‌ ಬಸ್‌ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ಬಂದು, ಅಲ್ಲಿಂದ ಹಿಂದೂಪುರಕ್ಕೆ ಮರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಸ್‌ ನಿಲ್ದಾಣದಲ್ಲೇ ಸ್ಕ್ರೂ ಡ್ರೈವರ್‌ ಖರೀದಿ:ಆರೋಪಿಗಳು ಬಿಎಂಟಿಸಿ ಬಸ್‌ನಲ್ಲಿ ಬಂದು ಕುಮಾರಸ್ವಾಮಿ ಲೇಔಟ್‌ ಬಸ್‌ ನಿಲ್ದಾಣದಲ್ಲಿ ಇಳಿದು ಅಲ್ಲೇ ಇದ್ದ ಅಂಗಡಿಯೊಂದರಲ್ಲಿ ಸ್ಕ್ರೂ ಡ್ರೈವರ್‌ ಖರೀದಿಸಿದ್ದರು. ಜತೆಗೆ, ಗ್ಯಾರೇಜ್‌ ಬಳಿ ಬಿದ್ದಿದ್ದ ಸ್ಕೂಟರ್‌ ಕ್ಲಚ್‌ ವೈರ್‌ ಅನ್ನು ತಂದಿದ್ದರು. ಇವುಗಳಲ್ಲೇ ದಂಪತಿ ಹತ್ಯೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.