ಬೆಂಗಳೂರು: ಮಿರರ್‌, ಇಂಡಿಕೇಟರ್‌ ಇಲ್ಲದೆ ವಾಹನ ಓಡಿಸಿದ್ರೆ 500 ರೂ. ದಂಡದ ಬಿಸಿ!

ಸೈಡ್‌ ಮಿರರ್‌ ಹಾಗೂ ಇಂಡಿಕೇಟರ್‌ ಬಳಸದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಬಿ.ಆರ್‌.ರವಿಕಾಂತೇಗೌಡ ಅವರು ಏಪ್ರಿಲ್‌ನಲ್ಲಿ ಆದೇಶಿಸಿದ್ದರು. ಆ ಬಳಿಕ ಸಂಚಾರ ಪೊಲೀಸರು, ವಾಹನ ಸವಾರರಿಗೆ ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ಇದೀಗ ಈ ನಿಯಮ ಸರಿಯಾಗಿ ಚಾಲ್ತಿಯಲ್ಲಿದೆ.

ಬೆಂಗಳೂರು: ಮಿರರ್‌, ಇಂಡಿಕೇಟರ್‌ ಇಲ್ಲದೆ ವಾಹನ ಓಡಿಸಿದ್ರೆ 500 ರೂ. ದಂಡದ ಬಿಸಿ!
Linkup
ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಓಡಿಸಬೇಕಾದರೆ, ಸೈಡ್‌ ಮಿರರ್‌ ಹಾಗೂ ಇಂಡಿಕೇಟರ್‌ ಹೊಂದಿರುವುದು ಕಡ್ಡಾಯ. ಇಲ್ಲವಾದಲ್ಲಿ 500 ರೂ. ತೆರಬೇಕಾಗುತ್ತದೆ ಹುಷಾರ್‌...! ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು ಹಾಗೂ ಟ್ರಾಫಿಕ್‌ ಪೊಲೀಸರು ಸೈಡ್‌ ಮಿರರ್‌, ಇಂಡಿಕೇಟರ್‌ಗಳನ್ನು ಉಪಯೋಗಿಸದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸುತ್ತಿದ್ದಾರೆ. ಕೇಂದ್ರ ಮೋಟಾರು ವಾಹನ ಕಾಯಿದೆಯಲ್ಲಿ ಸೈಡ್‌ ಮಿರರ್‌ ಹೊಂದಿಲ್ಲದ ವಾಹನಗಳಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸಂಚಾರ ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ. ಸೈಡ್‌ ಮಿರರ್‌ ಹಾಗೂ ಇಂಡಿಕೇಟರ್‌ ಬಳಸದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಬಿ.ಆರ್‌.ರವಿಕಾಂತೇಗೌಡ ಅವರು ಏಪ್ರಿಲ್‌ನಲ್ಲಿ ಆದೇಶಿಸಿದ್ದರು. ಆ ಬಳಿಕ ಸಂಚಾರ ಪೊಲೀಸರು, ವಾಹನ ಸವಾರರಿಗೆ ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ವಾಹನ ಸವಾರರು ಸೈಡ್‌ ಮಿರರ್‌ ಹಾಗೂ ಇಂಡಿಕೇಟರ್‌ ಉಪಯೋಗಿಸದ ಕಾರಣ, ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಂಬದಿಯಲ್ಲಿ ಬರುವ ವಾಹನಗಳನ್ನು ಮಿರರ್‌ನಲ್ಲಿ ಗಮನಿಸದೆಯೇ, ಇಂಡಿಕೇಟರ್‌ ಸಹ ಹಾಕದೆ ಏಕಾಏಕಿ ಎಡ ಇಲ್ಲವೇ ಬಲಕ್ಕೆ ಸಂಚರಿಸುತ್ತಾರೆ. ಇದರಿಂದ ಹಿಂದೆ ಬರುವವರಿಗೆ ಗೊಂದಲವಾಗಿ ಅಪಘಾತಗಳಾಗುತ್ತಿವೆ. ''ರಸ್ತೆ ಅಪಘಾತಗಳಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ; ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಸೈಡ್‌ ಮಿರರ್‌ಗಳನ್ನು ಅಳವಡಿಸದ ದ್ವಿಚಕ್ರ ವಾಹನ ಸವಾರರು ಇಂಡಿಕೇಟರ್‌ ಲೈಟ್‌ಗಳನ್ನೂ ಬಳಸದೆ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದರಿಂದ ಅನಾಹುತಗಳು ಸಂಭವಿಸುತ್ತಿವೆ. ವಾಹನ ಓಡಿಸುವಾಗ ಬಲ ಅಥವಾ ಎಡ ತಿರುವು ಪಡೆಯಲು ಹಿಂದೆ ತಿರುಗಿದಾಗ, ಇಲ್ಲವೇ ಹಿಂಬದಿಯಿಂದ ಬರುವ ವಾಹನಗಳನ್ನು ಗಮನಿಸದೆಯೇ ತಿರುವು ಪಡೆಯುವ ಸಂದರ್ಭದಲ್ಲಿಅಪಘಾತಗಳಾಗುತ್ತಿವೆ. ವಾಹನ ಸವಾರರಿಗೆ ಮಿರರ್‌ಗಳು ಮೂರನೇ ಕಣ್ಣಿದ್ದಂತೆ. ಹೀಗಾಗಿ, ಎಲ್ಲರೂ ಕಡ್ಡಾಯವಾಗಿ ಮಿರರ್‌ಗಳನ್ನು ಅಳವಡಿಸಿಕೊಳ್ಳಬೇಕು'' ಎಂದು ಸಾರಿಗೆ ಇಲಾಖೆಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಧನ್ವಂತರಿ ಎಸ್‌.ಒಡೆಯರ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ''ದೋಷಪೂರಿತ ನಂಬರ್‌ಪ್ಲೇಟ್‌ಗಳನ್ನು ಅಳವಡಿಸಿರುವ ವಾಹನಗಳಿಗೂ ದಂಡ ವಿಧಿಸಲಾಗುತ್ತಿದೆ. ಸೈಡ್‌ ಮಿರರ್‌ ಹಾಗೂ ಇಂಡಿಕೇಟರ್‌ ಬಳಸದಿರುವುದರಿಂದಾಗುತ್ತಿರುವ ಅನಾಹುತಗಳ ಕುರಿತು ತಿಳಿಸಿಕೊಡಲಾಗುತ್ತಿದೆ. ಚಾಲನಾ ಪರವಾನಗಿ ಪಡೆಯಲು ಬಂದವರಿಗೂ ಜಾಗೃತಿ ಮೂಡಿಸುತ್ತಿದ್ದೇವೆ'' ಎಂದು ಅವರು ಹೇಳಿದರು.