ಗರ್ಭಿಣಿಯರು, ಬಾಣಂತಿಯರಿಗೆ ಕೊರೊನಾ ಮಾರಕ.. ಈಗ ಸಿಕ್ಕಿದೆ 2ನೇ ಅಲೆ ಸಾವಿನ ಲೆಕ್ಕ..!

ಕೊರೊನಾ ಎರಡನೇ ಅಲೆಯು ಗರ್ಭಿಣಿಯರನ್ನು ಸಹ ಬಲಿ ಪಡೆಯುತ್ತಿದೆ. ಕೋವಿಡ್‌ ಪೀಡಿತ ಬಾಣಂತಿಯರ 17 ಸಾವುಗಳ ಪೈಕಿ 16 ಸಾವು ಸರಕಾರಿ ಎಚ್‌ಎಸ್‌ಐಎಸ್‌ ಗೋಶಾ ಆಸ್ಪತ್ರೆಯಲ್ಲಿ ಘಟಿಸಿದೆ ಎಂಬ ಮಾಹಿತಿ ಸಿಕ್ಕಿದೆ.

ಗರ್ಭಿಣಿಯರು, ಬಾಣಂತಿಯರಿಗೆ ಕೊರೊನಾ ಮಾರಕ.. ಈಗ ಸಿಕ್ಕಿದೆ 2ನೇ ಅಲೆ ಸಾವಿನ ಲೆಕ್ಕ..!
Linkup
: ಕೋವಿಡ್‌ ಎರಡನೇ ಅಲೆಯಿಂದಾಗಿ ಬೆಂಗಳೂರು ನಗರದಲ್ಲಿ 17 ಮಂದಿ ಬಾಣಂತಿಯರು ಮಗುವಿಗೆ ಜನ್ಮ ನೀಡಿದ ನಂತರ ಮೃತಪಟ್ಟಿದ್ದಾರೆ. ಜತೆಗೆ 10 ಮಂದಿ ಗರ್ಭಿಣಿಯರು ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದಾರೆ. 'ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದ 32 ವರ್ಷದ ಕೊರೊನಾ ಸೋಂಕಿತ ಮಹಿಳೆ ಮಗುವಿಗೆ ಜನ್ಮ ನೀಡಿದ ನಾಲ್ಕು ದಿನಗಳ ನಂತರ ಸೋಂಕಿನಿಂದ ಮೃತಪಟ್ಟರು. ಗರ್ಭ ಧರಿಸಿ 32 ವಾರಗಳ ನಂತರ ಸಿಜೇರಿಯನ್‌ ಮಾಡಿ ಮಗು ಹೊರತೆಗೆದಿದ್ದು, ಮಗು ಆರೋಗ್ಯವಾಗಿದೆ. ಮಗುವಿಗೆ ಕೋವಿಡ್‌ ಪರೀಕ್ಷೆ ಮಾಡಿದ್ದು, ನೆಗೆಟಿವ್‌ ಬಂದಿದೆ. ತಾಯಿಯಿಂದ ಸೋಂಕು ಮಗುವಿಗೆ ತಗಲುವುದು ತುಂಬ ಅಪರೂಪ. ಮಗುವಿನ ತಂದೆಗೆ ಸಹ ಕೋವಿಡ್‌ ಪಾಸಿಟಿವ್‌ ಇದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ವೈದ್ಯರು ಮತ್ತು ನರ್ಸ್‌ಗಳ ತಂಡ ಮಗುವಿನ ಆರೈಕೆ ಮಾಡುತ್ತಿದೆ' ಎಂದು ಬನ್ನೇರುಘಟ್ಟ ರಸ್ತೆ ಅಪೊಲೊ ಆಸ್ಪತ್ರೆಯ ಡಾ. ಪ್ರಶಾಂತ್‌ ಅರಸ್‌ ತಿಳಿಸಿದರು. ಕೊರೊನಾ ಎರಡನೇ ಅಲೆಯು ಗರ್ಭಿಣಿಯರನ್ನು ಸಹ ಬಲಿ ಪಡೆಯುತ್ತಿದೆ. ಕೋವಿಡ್‌ ಪೀಡಿತ ಬಾಣಂತಿಯರ 17 ಸಾವುಗಳ ಪೈಕಿ 16 ಸಾವು ಸರಕಾರಿ ಎಚ್‌ಎಸ್‌ಐಎಸ್‌ ಗೋಶಾ ಆಸ್ಪತ್ರೆಯಲ್ಲಿ ಘಟಿಸಿದೆ. ಕಳೆದ ಎರಡು ತಿಂಗಳಲ್ಲಿ ಗೋಶಾ ಆಸ್ಪತ್ರೆಗೆ ಒಟ್ಟು 545 ಮಹಿಳೆಯರು ದಾಖಲಾಗಿದ್ದು, 288 ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. 'ಕೋವಿಡ್‌ ಎರಡನೇ ಅಲೆಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ 26 ಮಹಿಳೆಯರು ಮೃತಪಟ್ಟಿದ್ದಾರೆ. ಈ ಪೈಕಿ ಸಿಜೆರಿಯನ್‌ನಿಂದ ಮಗುವಿಗೆ ಜನ್ಮ ನೀಡಿದ 16 ಮಹಿಳೆಯರು ಹಾಗೂ 10 ಮಂದಿ ಗರ್ಭಿಣಿಯರು ಸೋಂಕಿನಿಂದ ನಿಧನರಾಗಿದ್ದಾರೆ. ಗರ್ಭ ಧರಿಸಿದ 20 ವಾರಗಳ ಒಳಗೆ ಈ 10 ಮಂದಿ ಸಾವಿಗೀಡಾಗಿದ್ದಾರೆ. ಎಲ್ಲಾ 26 ಮಹಿಳೆಯರು ಕೋವಿಡ್‌ ನ್ಯೂಮೋನಿಯಾ ಮತ್ತು ತೀವ್ರ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದಾರೆ' ಎಂದು ಎಚ್‌ಎಸ್‌ಐಎಸ್‌ ಗೋಶಾ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕರಾದ ಡಾ. ತುಳಸಿ ದೇವಿ ತಿಳಿಸಿದರು. 'ನಗರದಲ್ಲಿ ಕೋವಿಡ್‌ ಹೆರಿಗೆ ಆಸ್ಪತ್ರೆ ಇರುವುದು ಇದು ಒಂದೇ. ಬೇರೆ ಬೇರೆ ಆಸ್ಪತ್ರೆಗಳಿಂದ ಕೋವಿಡ್‌ ಸೋಂಕಿತ ಗರ್ಭಿಣಿಯರು ಇಲ್ಲಿ ದಾಖಲಾಗುತ್ತಿದ್ದಾರೆ. ಬೆಂಗಳೂರು ನಗರ ಮಾತ್ರವಲ್ಲದೇ ಕುಣಿಗಲ್‌, ಹೊಸಕೋಟೆ, ಗೌರಿಬಿದನೂರು ಸೇರಿದಂತೆ ಇತರೆ ಕಡೆಯಿಂದ ಗರ್ಭಿಣಿಯರು ನಮ್ಮ ಆಸ್ಪತ್ರಗೆ ಬಂದು ದಾಖಲಾಗುತ್ತಿದ್ದಾರೆ. ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಬಂದು ದಾಖಲಾಗುವುದು, ಕೊನೇ ಕ್ಷಣದಲ್ಲಿ ಬೇರೆ ಆಸ್ಪತ್ರೆಯಿಂದ ಇಲ್ಲಿಗೆ ಬರುವುದು ಮತ್ತು ಆರಂಭಿಕ ಹಂತದಲ್ಲಿ ಕೊರೊನಾ ರೋಗಲಕ್ಷಣಗಳ ಬಗ್ಗೆ ರೋಗಿಗಳು ನಿರ್ಲಕ್ಷ್ಯ ವಹಿಸುವುದು ಕೂಡ ಸಾವಿಗೆ ಕಾರಣವಾಗಿದೆ' ಎಂದು ಡಾ. ತುಳಸಿ ದೇವಿ ಹೇಳಿದರು. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ: 'ಕೋವಿಡ್‌ ವೈರಸ್‌ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತಿದೆ. ಕೊರೊನಾ ಪಾಸಿಟಿವ್‌ ಇರುವ ಸಾಮಾನ್ಯ ಮಹಿಳೆಯರಿಗೆ ಹೋಲಿಸಿದರೆ ಸೋಂಕು ತಗುಲಿದ ಗರ್ಭಿಣಿಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚು. ಇದರಿಂದ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಕುತ್ತಾಗುವ ಸಂಭವ ಇದೆ. ಕೊರೊನಾ ಸೋಂಕಿತ ಗರ್ಭಿಣಿಯರ ಬಗ್ಗೆ ಮನೆಯವರು ಹೆಚ್ಚಿನ ಕಾಳಜಿ ವಹಿಸಬೇಕು. ಅಲ್ಲದೇ ಪ್ರತಿಯೊಬ್ಬ ಗರ್ಭಿಣಿಗೆ ಶೀಘ್ರವಾಗಿ ಕೋವಿಡ್‌ ಲಸಿಕೆ ನೀಡುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಬೇಕು' ಎಂದು ಹಿರಿಯ ಸ್ತ್ರೀರೋಗ ತಜ್ಞರು ಒತ್ತಾಯಿಸಿದರು.