ಪ್ರತಿ ತಿಂಗಳು 18 ಕೋಟಿ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ..? ಜನಾಕ್ರೋಶಕ್ಕೆ ಕೇಂದ್ರದ ಉತ್ತರ..!
ಪ್ರತಿ ತಿಂಗಳು 18 ಕೋಟಿ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ..? ಜನಾಕ್ರೋಶಕ್ಕೆ ಕೇಂದ್ರದ ಉತ್ತರ..!
ಅಕ್ಟೋಬರ್ - ನವೆಂಬರ್ನಲ್ಲಿ ಹೆಚ್ಚುವರಿಯಾಗಿ ನಾಲ್ಕು ಲಸಿಕೆ ತಯಾರಿಕೆ ಕಂಪನಿಗಳು ದೇಶದ ಲಸಿಕಾ ಅಭಿಯಾನದ ಭಾಗವಾಗಲಿವೆ. ಬಯೊಲಾಜಿಕಲ್ ಇ, ನೊವಾರ್ಟಿಸ್, ಜೈಡಸ್ ಕ್ಯಾಡಿಲಾ ಜತೆಗೆ ಮತ್ತೊಂದು ದೇಶೀಯ ಕಂಪನಿಯ ಲಸಿಕೆಗಳು ಜನರಿಗೆ ಲಭ್ಯವಾಗಲಿದೆ.
: ದೇಶಾದ್ಯಂತ ನಿರೋಧಕ ಲಸಿಕೆಯ ಅಭಾವದ ಬಗ್ಗೆ ಜನ ಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗುತ್ತಿರುವುದರ ನಡುವೆಯೇ, ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.
'ಡಿಸೆಂಬರ್ ಅಂತ್ಯದೊಳಗೆ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಪ್ರತಿ ತಿಂಗಳು 12 ಕೋಟಿ ಡೋಸ್ ಕೋವಿಶೀಲ್ಡ್ ಅನ್ನು ಮತ್ತು ಹೈದರಾಬಾದ್ನ ಭಾರತ್ ಬಯೋಟೆಕ್ ಪ್ರತಿ ತಿಂಗಳು 5.8 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದಿಸಲಿವೆ. ಈ ಗುರಿ ತಲುಪಲು ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಯಾರಕ ಸಂಸ್ಥೆಗಳು ಭರವಸೆ ನೀಡಿವೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ಅವರು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದರು. ಸದ್ಯ ಪ್ರತಿ ತಿಂಗಳು 11 ಕೋಟಿ ಡೋಸ್ ಕೋವಿಶೀಲ್ಡ್, 2.5 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ.
ಅಕ್ಟೋಬರ್ನಲ್ಲಿ 4 ಲಸಿಕೆ: ಮುಂಬರುವ ಅಕ್ಟೋಬರ್ - ನವೆಂಬರ್ನಲ್ಲಿ ಹೆಚ್ಚುವರಿಯಾಗಿ ನಾಲ್ಕು ಲಸಿಕೆ ತಯಾರಿಕೆ ಕಂಪನಿಗಳು ದೇಶದ ಲಸಿಕಾ ಅಭಿಯಾನದ ಭಾಗವಾಗಲಿವೆ. ಬಯೊಲಾಜಿಕಲ್ ಇ, ನೊವಾರ್ಟಿಸ್, ಜೈಡಸ್ ಕ್ಯಾಡಿಲಾ ಜತೆಗೆ ಮತ್ತೊಂದು ದೇಶೀಯ ಕಂಪನಿಯ ಲಸಿಕೆಗಳು ಜನರಿಗೆ ಲಭ್ಯವಾಗಲಿದೆ. ಇದರಿಂದ ಲಸಿಕಾ ಅಭಿಯಾನದ ವೇಗ ಹೆಚ್ಚಲಿದೆ ಎಂದು ಮಂಡಾವೀಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಕಾಕ್ಟೇಲ್ ಲಸಿಕೆ ಇಲ್ಲ: ಕೊರೊನಾ ನಿರೋಧಕ ಲಸಿಕೆಗಳ ಮಿಶ್ರಣವನ್ನು ಸೋಂಕಿನ ತಡೆಗಾಗಿ ನೀಡುವ ಬಗ್ಗೆ ವರದಿಗಳು ಹೆಚ್ಚಾಗಿ ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಖಾತೆ ಸಹಾಯಕ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು, 'ಕಾಕ್ಟೇಲ್ ಅಥವಾ ಲಸಿಕೆಗಳ ಮಿಕ್ಸಿಂಗ್ ಡೋಸ್ ನೀಡುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಇಂಥ ವೈಜ್ಞಾನಿಕ ಅಧ್ಯಯನಗಳು ಇನ್ನೂ ಕೂಡ ಆರಂಭಿಕ ಹಂತಗಳಲ್ಲಿವೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಬಗ್ಗೆ ಶಿಫಾರಸು ಮಾಡಿಲ್ಲ' ಎಂದಿದ್ದಾರೆ.
ರೆಮ್ಡಿಸಿವಿರ್ ಉತ್ಪಾದನೆ: ವೈರಾಣು ನಿರೋಧಕ ಔಷಧ 'ರೆಮ್ಡಿಸಿವಿರ್' ಉತ್ಪಾದನೆಯನ್ನು ಕಳೆದ ಜೂನ್ನಲ್ಲಿ 1.22 ಕೋಟಿ ವಯಲ್ಗಳಿಗೆ ಏರಿಕೆ ಮಾಡಲಾಗಿದೆ. ಏಪ್ರಿಲ್ನಲ್ಲಿ ಸುಮಾರು 38 ಲಕ್ಷ ವಯಲ್ಗಳಷ್ಟು ಉತ್ಪಾದನೆ ಇತ್ತು. ಕೊರೊನದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ವೆಂಟಿಲೇಟರ್ ಸಹಾಯದಲ್ಲಿರುವ ಸೋಂಕಿತರ ಚಿಕಿತ್ಸೆಗೆ ಈ ಔಷಧವನ್ನು ವೈದ್ಯರ ನಿಗಾದಲ್ಲಿ ಮಾತ್ರ ಬಳಸಲಾಗುತ್ತಿದೆ ಎಂದು ಸರಕಾರವು ರಾಜ್ಯಸಭೆಗೆ ತಿಳಿಸಿದೆ.
'ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆಯೇ ಉಳಿದುಕೊಳ್ಳುತ್ತಿರುವ ಲಸಿಕೆಗಳ ಪ್ರಮಾಣವು ಶೇ.7 ರಿಂದ 9ರಷ್ಟಿದೆ. ಅವನ್ನು ಸರಕಾರವೇ ವಾಪಸ್ ಪಡೆದುಕೊಂಡು ತನ್ನ ಕೋಟದಲ್ಲಿ ಜನರಿಗೆ ತಲುಪಿಸುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಲಸಿಕೆಗಳ ಪ್ರಮಾಣ ಕಡಿತಗೊಳಿಸುವ ಅಗತ್ಯವಿಲ್ಲ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ಹೇಳಿದ್ದಾರೆ.