ಮೋಗಾ: ತಮ್ಮ ಸಹೋದರಿ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಖ್ಯಾತ ನಟ ಭಾನುವಾರ ತಿಳಿಸಿದ್ದಾರೆ. ಆದರೆ ಅವರು ಸ್ಪರ್ಧಿಸುವ ಪಕ್ಷದ ಬಗ್ಗೆ ರಹಸ್ಯ ಕಾಯ್ದುಕೊಂಡಿದ್ದಾರೆ.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಮಂದಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿರುವ ಸೋನು ಸೂದ್, ತಮ್ಮ ಸಹೋದರಿಯ ಚುನಾವಣಾ ಸ್ಪರ್ಧೆಯ ಬಗ್ಗೆ ಪಂಜಾಬ್‌ನ ಮೋಗಾದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
'ಮಾಳವಿಕಾ ಸಿದ್ಧಳಾಗಿದ್ದಾಳೆ. ಜನರ ಸೇವೆಗೆ ಆಕೆಯ ಬದ್ಧತೆ ಸಾಟಿಯಿಲ್ಲದ್ದು. ಆಕೆ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾಳೆ ಎಂಬ ಬಗ್ಗೆ ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು' ಎಂದು ಸೋನು ತಿಳಿಸಿದ್ದಾರೆ.
ಸೋನು ಅವರ ಸಹೋದರಿ ಮಾಳವಿಕಾ ಕೂಡ ಇತ್ತೀಚೆಗೆ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದರು. ಎಎಪಿ ಹಾಗೂ ಶಿರೋಮಣಿ ಅಕಾಲಿದಳದ ಮುಖ್ಯಸ್ಥರ ಭೇಟಿಗೂ ಆಕೆ ಮುಕ್ತವಾಗಿದ್ದಾಳೆ ಎಂದು ತಿಳಿಸಿದ್ದಾರೆ. ಮಾಳವಿಕಾ ಅವರು ಮೋಗಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ನೀವೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಸೋನು, 'ಮೊದಲು ಮಾಳವಿಕಾರನ್ನು ಬೆಂಬಲಿಸುವುದು ಮುಖ್ಯವಾಗಿದೆ. ಮೋಗಾದಲ್ಲಿನ ನಮ್ಮ ಬೇರುಗಳೊಂದಿಗೆ ಆಕೆ ನಂಟು ಹೊಂದಿದ್ದಾಳೆ. ನನ್ನ ಆಲೋಚನೆಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದ್ದೇನೆ' ಎಂದು ತಿಳಿಸಿದ್ದಾರೆ.
ಆರೋಗ್ಯ ಕಾಳಜಿಯು ಮಾಳವಿಕಾ ಪ್ರಮುಖ ಆದ್ಯತೆಯಾಗಿರಲಿದೆ. ಆಯ್ಕೆಯಾದರೆ ರೋಗಿಗಳು ಉಚಿತವಾಗಿ ಡಯಾಲಿಸಿಸ್ ಪಡೆದುಕೊಳ್ಳಲು ನೆರವಾಗುತ್ತಾಳೆ. ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆಯೂ ಗಮನ ಹರಿಸುತ್ತಾಳೆ. ಜನರು ಉದ್ಯೋಗ ಸಿಗದೆ ಇದ್ದಾಗ ಮಾತ್ರವೇ ಪಂಜಾಬ್‌ನಲ್ಲಿನ ಯುವಜನರು ಮಾದಕ ವಸ್ತವಿನತ್ತ ಹೋಗುತ್ತಾರೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಸೋನು ಸೂದ್ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ಉದ್ದೇಶ ಏನು? ಅದು ಫಲಪ್ರದವಾಗಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅವರು ಭಾನುವಾರ ಮಾಡಿರುವ ಘೋಷಣೆಯು ಈ ಭೇಟಿ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದೆ.
ಸೋನು- ಕೇಜ್ರಿವಾಲ್ ಭೇಟಿಇದಕ್ಕೂ ಮುನ್ನ ಸೋನು ಸೋದ್ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ದಿಲ್ಲಿ ಸರ್ಕಾರ ರೂಪಿಸಿರುವ 'ದೇಶ್ ಕಾ ಮೆಂಟರ್ಸ್' ಯೋಜನೆಯ ರಾಯಭಾರಿಯನ್ನಾಗಿ ಸೋನು ಅವರನ್ನು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಪಂಜಾಬ್ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಎಎಪಿ ನಡುವೆ ನಿಕಟ ಪೈಪೋಟಿ ನಡೆಯುವ ನಿರೀಕ್ಷೆಯಿದೆ. ಹೀಗಾಗಿ ಸೋನು ಸೂದ್ ಅವರ ನಡೆ ಯಾವ ಪಕ್ಷದ ಕಡೆ ಇರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಸೋನು ಸೂದ್ ಅವರನ್ನು ತಮ್ಮತ್ತ ಸೆಳೆಯಲು ರಾಜಕಾರಣಿಗಳು ಮತ್ತು ವಿವಿಧ ಪಕ್ಷಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ತಮ್ಮ ಮಾನವೀಯ ಕಾರ್ಯಗಳಿಂದ ಈಗ ಜನಮನ ಮುಟ್ಟಿರುವ ಸೋನು ಸೂದ್ ಅವರಿಂದ ತಮಗೆ ಹೆಚ್ಚಿನ ಲಾಭವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಆದರೆ ತಮ್ಮ ಪರೋಪಕಾರದ ಕೆಲಸಗಳು ರಾಜಕೀಯಕ್ಕೆ ಯಾವುದೇ ರೀತಿ ಸಂಬಂಧಿಸಿದ್ದಲ್ಲ ಎಂದು ಸೋನು ಸೂದ್ ಹಲವು ಬಾರಿ ಪ್ರತಿಪಾದಿಸಿದ್ದಾರೆ.
ಕೇಜ್ರಿವಾಲ್ ಅವರೊಂದಿಗಿನ ಭೇಟಿಯು ಎಎಪಿ ಮೂಲಕ ಸೋನು ಸೂದ್ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂಬ ಊಹಾಪೋಹಗಳನ್ನು ಹುಟ್ಟುಹಾಕಿತ್ತು. 'ಯಾವುದೇ ರಾಜಕೀಯ ಸಂಗತಿಯನ್ನು ಚರ್ಚಿಸಿಲ್ಲ. ಸದ್ಯಕ್ಕೆ ನಾವು ರಾಜಕೀಯದ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ' ಎಂದು ಸೋನು ಹೇಳಿದ್ದರು.