ಪಿಂಚಣಿ ಯೋಜನೆಗೆ ಬೇಡಿಕೆ ಹೆಚ್ಚಳ: ಚಂದಾದಾರರ ಸಂಖ್ಯೆ 4.35 ಕೋಟಿಗೆ ಏರಿಕೆ!
ಪಿಂಚಣಿ ಯೋಜನೆಗೆ ಬೇಡಿಕೆ ಹೆಚ್ಚಳ: ಚಂದಾದಾರರ ಸಂಖ್ಯೆ 4.35 ಕೋಟಿಗೆ ಏರಿಕೆ!
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಚಂದಾದಾರರ ಸಂಖ್ಯೆ ಕಳೆದ ಜೂನ್ 30ರ ವೇಳೆಗೆ 4.35 ಕೋಟಿಗೆ ಏರಿಕೆಯಾಗಿದೆ. ಚಂದಾದಾರರ ಸಂಖ್ಯೆಯಲ್ಲಿ 33% ಹೆಚ್ಚಳವಾಗಿದೆ.
ಹೊಸದಿಲ್ಲಿ: ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ನಿರ್ವಹಿಸುತ್ತಿರುವ ರಾಷ್ಟ್ರೀಯ () ಮತ್ತು ಅಟಲ್ ಪಿಂಚಣಿ ಯೋಜನೆಯ (ಎಪಿವೈ) ಚಂದಾದಾರರ ಸಂಖ್ಯೆ ಕಳೆದ ಜೂನ್ 30ರ ವೇಳೆಗೆ 4.35 ಕೋಟಿಗೆ ಏರಿಕೆಯಾಗಿದೆ.
ಅಂದರೆ 33% ಹೆಚ್ಚಳವಾಗಿದೆ. ಜನತೆ ತಮ್ಮ ಇಳಿಗಾಲದಲ್ಲಿ ಆರ್ಥಿಕ ಭದ್ರತೆ ಮತ್ತು ನಿಗದಿತ ಆದಾಯದ ಮೂಲಕ್ಕಾಗಿ ಈ ಎರಡು ಜನಪ್ರಿಯ ಪಿಂಚಣಿ ಯೋಜನೆಗಳನ್ನು ಆಶ್ರಯಿಸುತ್ತಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ. ಹಾಗಾದರೆ ಈ ಎರಡು ಯೋಜನೆಗಳ ಲಾಭವೇನು? ಇಲ್ಲಿದೆ ವಿವರ.
ಅಟಲ್ ಪಿಂಚಣಿ ಯೋಜನೆಯಲ್ಲಿ ಚಂದಾದಾರರು: 2.66 ಕೋಟಿ
ಎನ್‌ಪಿಎಸ್ ಮತ್ತಯ ಎಪಿವೈನಲ್ಲಿ ನಿರ್ವಹಣೆಯಾಗುತ್ತಿರುವ ಒಟ್ಟು ಮೊತ್ತ: 6 ಲಕ್ಷ ಕೋಟಿ ರೂ.
ಏನಿದು ಎನ್‌ಪಿಎಸ್?
ನ್ಯಾಶನಲ್ ಪೆನ್ಷನ್ ಸ್ಕೀಮ್ (ಎನ್‌ಪಿಎಸ್) ಅಥವಾ ರಾಷ್ಟ್ರೀಯ ಪಿಂಚಣಿಯು ಸರಕಾರದ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುವ ನಿವೃತ್ತಿನಿಧಿ ಯೋಜನೆ. ಅತ್ಯಂತ ಸುರಕ್ಷಿತ. ಪ್ರತಿಯೊಬ್ಬ ನಾಗರಿಕರೂ ತಮ್ಮ ನಿವೃತ್ತಿಯ ಬದುಕಿನ ಕಾಲದ ನಿಶ್ಚಿತ ಆದಾಯಕ್ಕೆ ಆಯ್ಕೆ ಮಾಡಬಹುದು.
ಎನ್‌ಪಿಎಸ್ ಅಡಿಯಲ್ಲಿನಿಮ್ಮ ಹೂಡಿಕೆಯನ್ನು ವೃತ್ತಿಪರ ಫಂಡ್ ವ್ಯವಸ್ಥಾಪಕರು ವಿಭಿನ್ನ ಸಾಧನಗಳಲ್ಲಿ ಹೂಡುತ್ತಾರೆ. ಅಂದರೆ ಬಾಂಡ್, ಬಿಲ್, ಕಾಪೊರ್‍ರೇಟ್ ಡಿಬೆಂಚರ್ ಮತ್ತು ಷೇರುಗಳಲ್ಲಿಹೂಡಿಕೆ ಮಾಡುತ್ತಾರೆ. ಅದರಲ್ಲಿ ಬರುವ ಆದಾಯ ನಿಮ್ಮ ಖಾತೆಗೆ ಜಮೆಯಾಗುತ್ತದೆ. ಎನ್‌ಪಿಎಸ್ ಹೂಡಿಕೆ ಪೂರ್ಣವಾದ ನಂತರ ನಿರ್ದಿಷ್ಟ ಮೊತ್ತದ ಜತೆಗೆ ಪಿಂಚಣಿ ಆದಾಯವೂ ಸಿಗುತ್ತದೆ. ಎನ್‌ಪಿಎಸ್‌ನಲ್ಲಿ ಎರಡು ವಿಧದ ಅಕೌಂಟ್‌ಗಳಿವೆ. ಟೈರ್-1 ಖಾತೆ ಮತ್ತು ಟೈರ್-2 ಎಂದು. ಟೈರ್-1 ರಲ್ಲಿ ನಿಮ್ಮ ಹೂಡಿಕೆಯ ಮೊತ್ತವು ನಿಮ್ಮ ವಯಸ್ಸು 60 ಆಗುವ ತನಕ ಲಾಕ್ ಆಗುತ್ತದೆ. ಟೈರ್ 2ರಲ್ಲಿ ಅವಧಿಗೆ ಮುನ್ನವೂ ನಿರ್ದಿಷ್ಟ ಉದ್ದೇಶಗಳಿಗೆ ಭಾಗಶಃ ಹಿಂತೆಗೆದುಕೊಳ್ಳಬಹುದು. ಟೈರ್ 2ರಲ್ಲಿಹೂಡಿಕೆ ಮಾಡುವವರಿಗೆ ಟೈರ್ 1 ಖಾತೆ ಇರಲೇಬೇಕು.
ಏನಿದು ಅಟಲ್ ಪಿಂಚಣಿ ಯೋಜನೆ:
ಇದರಲ್ಲಿ 18 ವರ್ಷದಿಂದ 40 ವರ್ಷ ವಯೋಮಿತಿಯವ ಯುವ ಜನತೆ ಹೂಡಿಕೆ ಮಾಡಬಹುದು. ಆದ್ದರಿಂದ ಕಾಲೇಜು ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳು ಇದನ್ನೊಂದು ಉಳಿತಾಯ ಮತ್ತು ನಿವೃತ್ತಿ ನಿಧಿಯಾಗಿ ಆಯ್ಕೆ ಮಾಡಬಹುದು. ಇದರಲ್ಲಿ ನಿಮ್ಮ ಹೂಡಿಕೆಯನ್ನು ಆಧರಿಸಿ 60 ವರ್ಷದ ನಂತರ ಮಾಸಿಕ 1,000 ರೂ. ರೂ, 3,000 ರೂ, 4,000 ರೂ, ಅಥವಾ 5,000 ರೂ. ಪಿಂಚಣಿಗೆ ವ್ಯವಸ್ಥೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳ ಹೂಡಿಕೆ ಅಗತ್ಯ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು. ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಯೋಜನೆ ಲಭ್ಯವಿದೆ. ಉತ್ತಮ ಆದಾಯ, ಸುರಕ್ಷತೆ, ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತ ಇತ್ಯಾದಿಗಳಿಂದ ಈ ಯೋಜನೆಗಳು ಜನಪ್ರಿಯವಾಗುತ್ತಿವೆ.