ಬೆಂಗಳೂರು: ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ಉದ್ಯಮಿ ಗುರುದತ್ (49) ಎಂಬುವವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಚಿಕಿತ್ಸೆ ಸಿಕ್ಕಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ನಡೆದ ಈ ಹೃದಯಾಘಾತ ಘಟನೆ ನಟ ಪುನೀತ್ ರಾಜ್‌ಕುಮಾರ್ ಅವರ ಕೊನೆಕ್ಷಣವನ್ನು ನೆನಪಿಸಿದ್ದು, ಹೃದಯಾಘಾತ ಉಂಟಾದ ಕೂಡಲೇ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ ಎನ್ನುವುದನ್ನು ಒತ್ತಿ ಹೇಳಿದೆ. ಕುಮಾರಸ್ವಾಮಿ ಲೇಔಟ್ ನಿವಾಸಿ ಗುರುದತ್ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನದಿಂದ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಜಿಮ್ ತರಬೇತುದಾರ ಕೂಡಲೇ ಹತ್ತಿರದ ಸಾಗರ್ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.
ಶಿಸ್ತಿನ ಜೀವನ ರೂಪಿಸಿಕೊಂಡಿರುವ ಗುರುದತ್, ಕಳೆದ ಮೂರು ವರ್ಷಗಳಿಂದ ಪ್ರತಿದಿನ ಸತತ ಎರಡು ತಾಸು ಜಿಮ್ ಮಾಡುತ್ತಿದ್ದರು. ಇದುವರೆಗೆ ಅವರಿಗೆ ಹೃದಯ ಸಂಬಂಧಿ ಯಾವುದೇ ಸಮಸ್ಯೆ ಇರಲಿಲ್ಲ. ಸಣ್ಣ ನೋವು ಕೂಡ ಕಾಣಿಸಿಕೊಂಡಿರಲಿಲ್ಲ. ಯಾವುದೇ ದುಶ್ಚಟಗಳಿಲ್ಲದ, ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ ಅವರು, ನೆಗಡಿ, ಕೆಮ್ಮು ಹೊರತುಪಡಿಸಿ ಬೇರೆ ಯಾವುದಕ್ಕೂ ಮಾತ್ರೆ ನುಂಗಿದ ಉದಾಹರಣೆಯೂ ಇಲ್ಲ. ಇಂಥ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿರುವುದು ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಶಾಕ್ ನೀಡಿದೆ. ಆರೋಗ್ಯವಾಗಿದ್ದ ವ್ಯಕ್ತಿಗೆ ದಿಢೀರನೆ ಕಾಣಿಸಿಕೊಂಡ ಈ ಸಮಸ್ಯೆಯಿಂದ ಕುಟುಂಬ ಆತಂಕಗೊಂಡಿದೆ.
ಇತ್ತೀಚೆಗೆ ನಮ್ಮನ್ನಗಲಿದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರಂತೆ ಗುರುದತ್ ಕೂಡ ತಪ್ಪದೇ ದೇಹ ದಂಡನೆ ಮಾಡುತ್ತಿದ್ದರು. ಅದರಂತೆ ಅಂದು ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ಗುರುದತ್ ಕುಸಿದು ಬಿದ್ದಿದ್ದರು. ತಕ್ಷಣವೇ ಜಿಮ್ ತರಬೇತುದಾರ, ಗುರುದತ್ ಅವರ ಪತ್ನಿಗೆ ಕರೆ ಮಾಡಿದ್ದಾರೆ. ಅವರು ಮನೆಗೆ ಕರೆದುಕೊಂಡು ಬನ್ನಿ ಎಂದರೂ, ಗುರುದತ್ ಸ್ಥಿತಿಯನ್ನು ಅರಿತ ತರಬೇತುದಾರ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಕ್ಷಣ ವೈದ್ಯರು ಇಸಿಜಿ ಮಾಡಿ ನೋಡಿದಾಗ ಹೃದಯ ಸ್ತಂಬನವಾಗಿರುವುದು ಗೊತ್ತಾಯಿತು. ಜೀವ ಅಪಾಯದಲ್ಲಿದೆ ಎಂಬುದನ್ನು ಅರಿತ ಸಾಗರ್ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ. ಕಿಶೋರ್ ಕೆ.ಎಸ್, ಕೂಡಲೇ ಎಲೆಕ್ಟ್ರಿಕ್ ಶಾಕ್ ನೀಡಿದರು. ಸ್ವಲ್ಪ ಉಸಿರಾಡಲು ಆರಂಭಿಸಿದೊಡನೆಯೇ ಆ್ಯಂಜಿಯೋಗ್ರಾಮ್ ಮಾಡಿ ನೋಡಿದಾಗ ರಕ್ತನಾಳವೊಂದು ಸಂಪೂರ್ಣ ಬ್ಲಾಕ್ ಆಗಿರುವುದು ತಿಳಿದು ಬಂತು. ನಂತರ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಹಾಕಲಾಯಿತು. 12 ತಾಸಿನ ನಂತರ ಸಹಜ ಸ್ಥಿತಿಗೆ ಮರಳಿದ ಗುರುದತ್, ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದರು. ಇದು ಐದು ದಿನಗಳ ಹಿಂದೆ ಘಟನೆಯಾಗಿದೆ.
ನೆನಪಿಸಿದ ಪುನೀತ್ ಘಟನೆಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ ಕಿಶೋರ್, ‘ಗುರುದತ್ ಅವರಿಗೆ ಆಗಿರುವ ಹೃದಯಾಘಾತ ಗಮನಿಸಿದಾಗ ಪುನೀತ್ ರಾಜ್‌ಕುಮಾರ್ ಘಟನೆ ನೆನಪಾಗುತ್ತದೆ. ಇಲ್ಲಿ ಜಿಮ್ ತರಬೇತುದಾರನ ಸಮಯಪ್ರಜ್ಞೆ ಗುರುದತ್ ಅವರನ್ನು ಉಳಿಸಿತು. ಗಾಬರಿಯಾಗದೆ ಕೂಡಲೇ ಹತ್ತಿರದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಬಂದದ್ದಕ್ಕೆ ಅವರಿಗೆ ಧನ್ಯವಾದ ಹೇಳಬೇಕು. ಸಮಯ ಪ್ರಜ್ಞೆ ಒಂದರಿಂದಲೇ ಜೀವ ಉಳಿಸುವುದಕ್ಕೆ ಸಾಧ್ಯವಾಯಿತು’ ಎಂದಿದ್ದಾರೆ.
ಜಿಮ್ ಮಾಡಿದ ಎಲ್ಲರಿಗೂ ಹೃದಯಾಘಾತ ಆಗುವುದಿಲ್ಲ. ಕೆಲವರಿಗೆ ಆಗುವ ಸಾಧ್ಯತೆ ಇರುತ್ತದೆ. ಬಹಳ ಹೊತ್ತು ವರ್ಕ್ಔಟ್ ಮಾಡುವವರು ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವುದು ಒಳ್ಳೆಯದು. ಹಾಗೆಯೇ ಜಿಮ್ ತರಬೇತುದಾರರು, ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಸ್ವಲ್ಪ ತಿಳಿದುಕೊಂಡಿರಬೇಕು. ಪ್ರತಿ ಜಿಮ್‌ನಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳಿರಬೇಕು. ಹತ್ತಿರದ ಸುಸಜ್ಜಿತ ಆಸ್ಪತ್ರೆಯ ನಂಬರ್ ಎಲ್ಲರಿಗೂ ಕಾಣುವಂತೆ ಹಾಕಿರಬೇಕು. ಇದರಿಂದ ತಕ್ಷಣವೇ ಆಸ್ಪತ್ರೆಗೆ ಸೇರಿಸಲು ಅನುಕೂಲ ಆಗಲಿದೆ ಎಂದು ಹೃದ್ರೋಗ ತಜ್ಞ ಡಾ ಕಿಶೋಶರ್ ಹೇಳಿದ್ದಾರೆ.