ಮುಂಬಯಿ: ದೇಶದ ಅತ್ಯಂತ ಹಳೆಯ ಪಕ್ಷ ಎನಿಸಿರುವ ಕಾಂಗ್ರೆಸ್, ತನ್ನ ನೆಲೆಯನ್ನು ಮರಳಿ ಕಂಡುಕೊಳ್ಳಲು ಹೆಣಗಾಡುತ್ತಿದೆ. ಈ ನಡುವೆ ಅದಕ್ಕೆ ಬಿಜೆಪಿಗಿಂತಲೂ ಮತ್ತೊಂದು ಎದುರಾಳಿ ಪಕ್ಷ ರೂಪುಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಮುಂಬರುವ ಸಾರ್ವತ್ರಿಕ ಚುನಾವಣೆಯ ವೇಳೆ ವಿರುದ್ಧ ಪ್ರಬಲ ಮೈತ್ರಿಕೂಟವನ್ನು ರಚಿಸಿ, ಅದನ್ನು ಅಧಿಕಾರದಿಂದ ಕೆಳಕ್ಕಿಳಿಸುವ ಪಣ ತೊಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ , ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮೂಲಕ ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡುವ ಸೂಚನೆ ನೀಡಿದ್ದಾರೆ.
'ಯುಪಿಎ ಎಂದರೆ ಯಾವುದು? ಈಗ ಎಂಬುದು ಇಲ್ಲ' ಎನ್ನುವ ಮೂಲಕ ಕಾಂಗ್ರೆಸ್ ನೇತೃತ್ವದ ಬಿಜೆಪಿ ವಿರೋಧಿ ಬಣದೊಂದಿಗೆ ತಾವು ಇಲ್ಲ ಎಂಬ ಸುಳಿವು ನೀಡಿರುವ ಮಮತಾ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯಕ್ಕೆ ನಿರಂತರ ಪ್ರಯತ್ನದ ಅಗತ್ಯವಿದೆ. ನೀವು ಮಜಾ ಮಾಡಲು ವಿದೇಶಕ್ಕೆ ಹೋಗುವುದಾದರೆ ಜನರು ನಿಮ್ಮನ್ನು ಹೇಗೆ ತಾನೆ ನಂಬುತ್ತಾರೆ ಎಂದು ಕಾಂಗ್ರೆಸ್ ನಾಯಕತ್ವ ಹಾಗೂ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದ್ದಾರೆ.
ತಳಮಟ್ಟದ ವಾಸ್ತವಗಳನ್ನು ಅರಿತ ರಾಜಕಾರಣಿಗಳು ಮಾತ್ರವೇ ಬಿಜೆಪಿಯನ್ನು ಎದುರಿಸಬಲ್ಲರು. ನಾವು ಅದನ್ನು ಪಶ್ಚಿಮ ಬಂಗಾಳದಲ್ಲಿ ಮಾಡಿದ್ದೆವು ಎಂದು ಬಿಜೆಪಿ ವಿರುದ್ಧ ಕಟ್ಟಲಾಗುತ್ತಿರುವ ಹೊಸ ವಿರೋಧಪಕ್ಷ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಹೆಸರಿಸದೆ ದೀದಿ ಪ್ರತಿಕ್ರಿಯೆ ನೀಡಿದ್ದಾರೆ.
ವಿರೋಧಪಕ್ಷದ ಪ್ರಧಾನಿ ಅಭ್ಯರ್ಥಿಯ ಆಯ್ಕೆಯು, ಆ ಸಮಯದಲ್ಲಿ ಉದ್ಭವಿಸುವ ಸನ್ನಿವೇಶ ಹಾಗೂ ರಾಜ್ಯಗಳಿಂದ ನಿರ್ಧಾರವಾಗಲಿದೆ. ಈಗ ಇರುವ ಮುಖ್ಯ ಸಂಗತಿ ಎಂದರೆ ಬಿಜೆಪಿಯನ್ನು ರಾಜಕೀಯವಾಗಿ ದೇಶದಿಂದ ಹೊರಹಾಕುವುದು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದು ಎಂದಿದ್ದಾರೆ.
'ಬಿಜೆಪಿಯನ್ನು ಎದುರಿಸಲು ನಾವು ಸಮಗ್ರ ಕಾರ್ಯತಂತ್ರವನ್ನು ರೂಪಿಸಬೇಕಿದೆ. ನಮಗೆ ಒಗ್ಗಟ್ಟಿನ ವಿರೋಧಪಕ್ಷ ಬೇಕು. ನಮಗೆ ಬಿಜೆಪಿ ವಿರುದ್ಧದ ದೃಢ ಪರ್ಯಾಯದ ಅಗತ್ಯವಿದೆ. ಬಿಜೆಪಿಯನ್ನು ಮಣಿಸುವ ಕಾರ್ಯ ಯೋಜನೆ ಕಾರ್ಯಗತಗೊಳಿಸುವ ಸಲುವಾಗಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದೇನೆ. ನನಗೆ ಪವಾರ್ ಅವರು ಚೆನ್ನಾಗಿ ಗೊತ್ತು. ಅವರೊಂದಿಗೆ ಕೆಲಸ ಮಾಡಿದ್ದೇನೆ' ಎಂದು ದೀದಿ ಹೇಳಿದ್ದಾರೆ.
ಬಿಜೆಪಿಯ ಟಿಆರ್‌ಪಿ ಕಾಂಗ್ರೆಸ್!ಇದೇ ವೇಳೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಪಕ್ಷವು ಬಿಜೆಪಿಯ ಟಿಆರ್‌ಪಿ ಎಂದು ಆರೋಪಿಸಿದರು. 'ಅವರು ಸುಮ್ಮನೆ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹಾಗೆಯೇ ಬಿಜೆಪಿ ಮತ್ತಷ್ಟು, ಮಗದಷ್ಟು ಪ್ರಬಲವಾಗುತ್ತಿದೆ. ಆದರೆ ನಾವು ಅದನ್ನು ಸಹಿಸುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆ ಬಳಿಕ ಗೋವಾದಲ್ಲಿ ಏನಾಗಿತ್ತು ಎನ್ನುವುದನ್ನು ನಾವು ನೋಡಿದ್ದೇವೆ. ಜನರ ತೀರ್ಪು ಕಾಂಗ್ರೆಸ್ ಕಡೆಗೆ ಇತ್ತು, ಬಿಜೆಪಿ ಪರ ಅಲ್ಲ. ಆದರೆ ಬಿಜೆಪಿ ಸರ್ಕಾರ ರಚಿಸಿತ್ತು. ಇದು ಸಾಧ್ಯವಾಗಬಾರದು. ನಾನು ಮತಗಳ ವಿಭಜನೆಯನ್ನು ಬಯಸುವುದಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷ ದೇಶಕ್ಕಿಂತಲೂ ದೊಡ್ಡದಲ್ಲ' ಎಂದು ತಿಳಿಸಿದ್ದಾರೆ.
ಬಿಜೆಪಿ ವಿರೋಧ ಮೈತ್ರಿಕೂಟ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ತಮ್ಮ ನೀತಿಯು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ. ಮಹಾರಾಷ್ಟ್ರದಲ್ಲಿನ ವ್ಯವಸ್ಥೆಯನ್ನು ನಾವೇಕೆ ಕೆಡಿಸುತ್ತೇವೆ? ಆದರೆ ಎಲ್ಲಿ ಸಾಧ್ಯತೆ ಇರುವುದಿಲ್ಲವೋ, ಎಲ್ಲಿ ಕಾಂಗ್ರೆಸ್ ಹೋರಾಟ ನಡೆಸುತ್ತಿಲ್ಲವೋ ಮತ್ತು ಬಿಜೆಪಿ ಬೆಳೆಯುತ್ತಿದೆಯೋ.. ಅಲ್ಲಿ ಬಿಜೆಪಿ ಬೆಳೆಯಲು ನಾವು ಬಿಡುವುದಿಲ್ಲ. ಬಿಜೆಪಿ ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಅಸಮಾಧಾನಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕಾಂಗ್ರೆಸ್ ಇಲ್ಲದ ಯುಪಿಎ, ಆತ್ಮವಿಲ್ಲದ ದೇಹವಿದ್ದಂತೆ. ವಿರೋಧಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ಸಮಯವಿದು' ಎಂದು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್, ಮಮತಾ ಹೇಳಿಕೆಯನ್ನು ಉಲ್ಲೇಖಿಸದೆ ಟ್ವೀಟ್ ಮಾಡಿದ್ದಾರೆ.
'ಕಾಂಗ್ರೆಸ್ ತನ್ನ ಸಾಮರ್ಥ್ಯ ತೋರಿಸಿದ ವಿವಿಧ ಸಮಾಜೋ-ರಾಜಕೀಯ ವಿಚಾರಗಳಲ್ಲಿ ಟಿಎಂಸಿಯನ್ನು ಸೇರಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೇವೆ. ವಿಪಕ್ಷಗಳು ತಮ್ಮ ನಡುವೆ ಹೊಡೆದಾಡಿಕೊಳ್ಳಬಾರದು ಮತ್ತು ವಿಭಜನೆಯಾಗಬಾರದು. ನಾವು ಜತೆಗೂಡಿ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕು' ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಬಿಜೆಪಿ ವಿರುದ್ಧದ ಹೋರಾಟವನ್ನು ಒಗ್ಗಟ್ಟಿನಿಂದ ಮಾಡಬೇಕು. ನಮ್ಮ ಅಹಂಗಳನ್ನು ಪಕ್ಕಕ್ಕಿರಿಸಬೇಕು. ಬಿಜೆಪಿಗೆ ಕಾಂಗ್ರೆಸ್ ಮಾತ್ರವೇ ಪರ್ಯಾಯ ಶಕ್ತಿ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
'ಭಾರತೀಯ ರಾಜಕೀಯದ ವಾಸ್ತವಿಕತೆ ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಇಲ್ಲದೆ ಬಿಜೆಪಿಯನ್ನು ಯಾರು ಬೇಕಾದರೂ ಮಣಿಸಬಹುದು ಎಂದು ಭಾವಿಸುವುದು ಕೇವಲ ಕನಸಷ್ಟೇ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.