ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ತಳಿಯಾದ ಬೆಂಗಳೂರಿನ ಮೂಲಕ ಭಾರತಕ್ಕೂ ಲಗ್ಗೆ ಇಟ್ಟಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 46 ವರ್ಷದ ವೈದ್ಯರೊಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.
ಜೆ.ಪಿ.ನಗರದಲ್ಲಿ ವಾಸವಿರುವ ಸೋಂಕಿತ ವೈದ್ಯನ ಸಂಪರ್ಕದಲ್ಲಿದ್ದ ಪತ್ನಿ ಸೇರಿ ಐದು ಮಂದಿಗೆ ಕೊರೊನಾ ಸೋಂಕು ತಗಲಿದೆ. ಇವರೆಲ್ಲರೂ ಕೂಡ ವೈದ್ಯರೇ ಆಗಿದ್ದಾರೆ. ಇವರೆಲ್ಲಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗಿದ್ದಾರೆ. ಸೋಂಕಿತ ವೈದ್ಯ ಹಾಗೂ ಇತರೆ ಇಬ್ಬರು ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವೈದ್ಯರು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದರು. ಇವರು ಯಾವುದೇ ಪ್ರಯಾಣ ಇತಿಹಾಸ ಹೊಂದಿರಲಿಲ್ಲ. ಆದರೂ, ಸೋಂಕು ಹೇಗೆ ತಗಲಿತು ಎಂಬುದು ನಿಗೂಢವಾಗಿದೆ.
ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 205 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಮೂವರು ಪ್ರಾಥಮಿಕ ಸಂಪರ್ಕಿತರು, ಇಬ್ಬರು ದ್ವಿತೀಯ ಸಂಪರ್ಕಿತರಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಹೀಗಾಗಿ, ಐದೂ ಮಂದಿಯ ಗಂಟಲು ದ್ರವದ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿದ್ದು, ಇನ್ನೂ ವರದಿ ಬಂದಿಲ್ಲ.
ಸೋಂಕಿತ ವೈದ್ಯರಿಗೆ ನ.21ರಂದು ಜ್ವರ ಮತ್ತು ಮೈಕೈ ನೋವು ಕಾಣಿಸಿಕೊಂಡಿತ್ತು. ಹೀಗಾಗಿ, ನ.22ರಂದು ಆಸ್ಪತ್ರೆಯಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದು, ಅದೇ ದಿನ ಸಂಜೆ ಪಾಸಿಟಿವ್ ವರದಿ ಬಂದಿತ್ತು. ಇವರ ಸಿ.ಟಿ ವ್ಯಾಲ್ಯೂ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಬಿಬಿಎಂಪಿಯು, ಸಂಗ್ರಹಿಸಿದ್ದ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿತ್ತು. ನ. 22ರಿಂದ 24ರವರೆಗೆ ಮನೆಯಲ್ಲಿಯೇ ಪ್ರತ್ಯೇಕ ಆರೈಕೆಗೆ ಒಳಗಾಗಿದ್ದ ವೈದ್ಯರು ನ. 25ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದು ನ. 27ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ಓಮಿಕ್ರಾನ್ ಸೋಂಕು ತಗಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದಕ್ಷಿಣ ಆಫ್ರಿಕಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನ. 20ರಂದು ಆಗಮಿಸಿದ್ದ 66 ವರ್ಷದ ವ್ಯಕ್ತಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ಪತ್ತೆಯಾಗಿತ್ತು. ಹೀಗಾಗಿ, ಅವರನ್ನು ಹೋಟೆಲ್ನಲ್ಲೇ ಐಸೋಲೇಷನ್ಗೆ ಒಳಪಡಿಸಲಾಗಿತ್ತು. ಬಳಿಕ ಬಿಬಿಎಂಪಿಯು ಸೋಂಕಿತರ ಮಾದರಿಯನ್ನು ನ. 22ರಂದು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಸೋಂಕಿತ ವ್ಯಕ್ತಿಯೇ ನ. 23ರಂದು ಖಾಸಗಿ ಪ್ರಯೋಗಾಲಯದಲ್ಲಿ ಸ್ವಯಂ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ವರದಿ ಬಂದಿದೆ. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 24 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 240 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯು ನ. 27ರಂದು ಮಧ್ಯರಾತ್ರಿ 12.34ಕ್ಕೆ ಟ್ಯಾಕ್ಸಿಯೊಂದರಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ದುಬೈಗೆ ವಾಪಸಾಗಿದ್ದಾರೆ.
''ಓಮಿಕ್ರಾನ್ ಸೋಂಕಿತ ಬೆಂಗಳೂರಿನ ನಿವಾಸಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೊಂದಿಗೆ ಸಂಪರ್ಕದಲ್ಲಿದ್ದ ಐದು ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಅವರೆಲ್ಲರ ಮಾದರಿಗಳನ್ನೂ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಕೋವಿಡ್ ಸೋಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಿ ನಿಗಾ ಇಡಲಾಗಿದೆ,'' ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸುದ್ದಿಗಾರರಿಗೆ ತಿಳಿಸಿದರು.
''ಅಂತಾರಾಷ್ಟ್ರೀಯ ಪ್ರಯಾಣಿಕರು ಹಾಗೂ ಸಿ.ಟಿ ವ್ಯಾಲ್ಯೂ ಕಡಿಮೆ ಇರುವ ಸೋಂಕಿತರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿ, ಆದಷ್ಟು ಶೀಘ್ರವಾಗಿ ವರದಿ ಪಡೆಯಲಾಗುತ್ತಿದೆ. ಓಮಿಕ್ರಾನ್ ಸೋಂಕಿತ ವ್ಯಕ್ತಿಗೆ ಯಾವುದೇ ಪ್ರಯಾಣ ಇತಿಹಾಸ ಇಲ್ಲ. ಜನರು ಹೊಸ ವೈರಾಣು ಬಗ್ಗೆ ಎಚ್ಚರದಿಂದಿರಬೇಕು. ಈ ಸೋಂಕಿನ ಬಗೆಗಿನ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಸೋಂಕು ಹರಡದಂತೆ ತಡೆಯಲು ಎಲ್ಲರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ,'' ಎಂದರು.
ರಾಜ್ಯದಲ್ಲಿ ವೇಗದ ಸಮರ್ಥ ಪರೀಕ್ಷೆ ವ್ಯವಸ್ಥೆಯಿಂದಾಗಿ ಬೇಗನೆ ಕೋವಿಡ್ ಓಮಿಕ್ರಾನ್ ವೈರಾಣು ಪತ್ತೆಯಾಗಿದೆ. ಜನರು ತಪ್ಪದೇ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಯಾರೂ ಆತಂಕಕ್ಕೆ ಒಳಗಾಗಬಾರದು
ಡಾ. ಕೆ ಸುಧಾಕರ್, ಆರೋಗ್ಯ ಸಚಿವ
ಸೋಂಕು ಲಕ್ಷಣಗಳೇನು?
ಅತಿಯಾದ ಆಯಾಸ, ವಾಂತಿ ಬಂದಂತಾಗುವುದು, ಗಂಟಲಿನಲ್ಲಿತುರಿಕೆ ಮತ್ತು ಒಣ ಕೆಮ್ಮು. ಕೆಲವರಲ್ಲಿ ತೀವ್ರ ಸ್ವರೂಪದ ಜ್ವರ ಕೂಡ ಇರಲಿದೆ.
ಮುಂಜಾಗ್ರತಾ ಕ್ರಮಗಳು
ಮಾಸ್ಕ್ ಧರಿಸಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು.