ರಾಜ್ಯದಲ್ಲಿ ಎಚ್‌ಸಿಎಲ್ ಸೇರಿ ವಿವಿಧ ಕಂಪನಿಗಳಿಂದ ₹5 ಸಾವಿರ ಕೋಟಿ ಹೂಡಿಕೆ!

ಎಚ್‌ಸಿಎಲ್ ಸೇರಿದಂತೆ ವಿವಿಧ ಕಂಪನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ರಾಜ್ಯದಲ್ಲಿ ಎಚ್‌ಸಿಎಲ್ ಸೇರಿ ವಿವಿಧ ಕಂಪನಿಗಳಿಂದ ₹5 ಸಾವಿರ ಕೋಟಿ ಹೂಡಿಕೆ!
Linkup
ಬೆಂಗಳೂರು: ಎಚ್‌ಸಿಎಲ್, ಅಪ್ಲೈಡ್ ಮೆಟೀರಿಯಲ್, ರಾಕಾನ್ ಮತ್ತು ಚಿಂಟ್ ಕಂಪನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ತಂತ್ರಜ್ಞಾನ ಶೃಂಗಸಭೆಯ ಫಲವಾಗಿ ಆಗಿರುವ ಪ್ರಗತಿ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೂಡಿಕೆಯಿಂದಾಗಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದರು. ರಾಜ್ಯದಲ್ಲಿ ವಿದ್ಯುನ್ಮಾನ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದ ನೀತಿ ಆಕರ್ಷಕವಾಗಿದ್ದು, ಐಎಫ್ ಬಿ ಮತ್ತು ತೇಜಸ್ ಕಂಪನಿಗಳು ಕೂಡ ರಾಜ್ಯದಲ್ಲಿ ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲು ಆಸಕ್ತಿ ತೋರಿವೆ. ಜತೆಗೆ ಜಿಟಿಎಂ ಕಂಪನಿಯು ಚಾಮರಾಜನಗರದಲ್ಲಿ ತನ್ನ ಘಟಕವನ್ನು ಆರಂಭಿಸಲು ಉತ್ಸುಕವಾಗಿದೆ. ಇವುಗಳ ಪೈಕಿ ಕೆಲವು ಕಂಪನಿಗಳಿಗೆ ಈಗಾಗಲೇ ಭೂಮಿಯನ್ನು ಕೊಡಲಾಗಿದೆ. ಮಿಕ್ಕ ಕಂಪನಿಗಳಿಗೆ ಅಗತ್ಯ ಸೌಲಭ್ಯಗಳನ್ನೆಲ್ಲ ಶೀಘ್ರವೇ ಒದಗಿಸಲಾಗುವುದು ಎಂದು ಅವರು ವಿವರಿಸಿದರು. ರಾಜ್ಯದಲ್ಲಿ ಈ ಕಂಪನಿಗಳ ಹೂಡಿಕೆಯಿಂದಾಗಿ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್, ಸೌರ ಕೋಶಗಳು, ವಾಶಿಂಗ್ ಮಶೀನ್ ಮತ್ತು ಹವಾ ನಿಯಂತ್ರಕಗಳಿಗೆ ಅಳವಡಿಸುವ ಮೋಟಾರುಗಳ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು. ಆಂಧ್ರಪ್ರದೇಶದ ಮಾಜಿ ಸಚಿವರಾದ ಕಿಶೋರ ಕುಮಾರ್ ಇವರುಸಚಿವರನ್ನು ಭೇಟಿಯಾಗಿ ಚಾಮರಾಜನಗರಲ್ಲಿ ಲಿಥಿಯಂ ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪನೆ ಸಂಬಂಧ ಚರ್ಚೆ ನಡೆಸಿದರು.