ಅಹಂ ಬಿಟ್ಟು ಸಂತೋಷದ ಜೀವನ ನಡೆಸಿ; ಆಸ್ತಿ ವಿವಾದದಲ್ಲಿ ಕೋರ್ಟ್‌ ಮೆಟ್ಟಿಲೇರಿದವರಿಗೆ ಹೈಕೋರ್ಟ್‌ ಕಿವಿಮಾತು

ಸುಂದರ ಚಳಿಗಾಲದ ಋುತುಮಾನದಲ್ಲಿ ಬದುಕನ್ನು ಆಸ್ವಾದಿಸುವುದರ ಬದಲಿಗೆ ಅಹಂಕಾರಗಳ ಗೋಡೆ ಕಟ್ಟಿಕೊಂಡು ಯಾಕೆ ಜಗಳದ ಜೀವನ ನಡೆಸುತ್ತಿದ್ದೀರಿ? ಅಪ್ಪ ಮಕ್ಕಳು ಆಸ್ತಿಗಾಗಿ ಜಗಳ ಕಾಯುತ್ತಾ ಕೋರ್ಟ್‌ ಕಚೇರಿ ಅಲೆಯುವುದು ಎಷ್ಟು ಸೂಕ್ತ? ಕುಳಿತು ಎಲ್ಲರೂ ವಿವಾದ ಬಗೆಹರಿಸಿಕೊಳ್ಳಿ ಎಂದು ನ್ಯಾಯಪೀಠ ಸಲಹೆ ನೀಡಿತು.

ಅಹಂ ಬಿಟ್ಟು ಸಂತೋಷದ ಜೀವನ ನಡೆಸಿ; ಆಸ್ತಿ ವಿವಾದದಲ್ಲಿ ಕೋರ್ಟ್‌ ಮೆಟ್ಟಿಲೇರಿದವರಿಗೆ ಹೈಕೋರ್ಟ್‌ ಕಿವಿಮಾತು
Linkup
ಬೆಂಗಳೂರು: ನಾನು ಎನ್ನುವ ಅಹಂ ಬಿಟ್ಟು ನಾವು ಎನ್ನುವ ಸಂತೋಷದಿಂದಾಗಿ ಎಲ್ಲರೂ ಒಟ್ಟಾಗಿ ಜೀವನ ನಡೆಸಿ ಎಂದು ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿರುವ ವೃದ್ಧ ತಂದೆ- ತಾಯಿ ಮತ್ತು ಮಕ್ಕಳಿಗೆ ಹೈಕೋರ್ಟ್‌ ಬುದ್ಧಿವಾದ ಹೇಳಿದ ಪ್ರಸಂಗ ಗುರುವಾರ ನಡೆಯಿತು. ಉತ್ತರ ವಿಭಾಗ ವಿಭಾಗಾಧಿಕಾರಿ ನೀಡಿದ್ದ ಆದೇಶ ರದ್ದು ಕೋರಿ 42 ವರ್ಷದ ಬಹುರಾಷ್ಟ್ರೀಯ ಕಂಪನಿಯ ಸಾಫ್ಟವೇರ್‌ ಉದ್ಯೋಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಕರಣದ ಸಂತ್ರಸ್ತರೂ ಆದ ನಿವೃತ್ತ ಪೊಲೀಸ್‌ ಅಧಿಕಾರಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಜಯಕುಮಾರ್‌ ಎಸ್‌.ಪಾಟೀಲ ‘ಅರ್ಜಿದಾರರು ನಿವೃತ್ತ ಡಿವೈಎಸ್‌ಪಿ ಅವರ ಜೇಷ್ಠ ಪುತ್ರ. ತಂದೆಯ ಆಸ್ತಿಗಾಗಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿ ಅವರು ಪ್ರತ್ಯೇಕವಾಗಿ ವಾಸಿಸುವಂತೆ ಮಾಡಿ ಹಿಂಸೆ ನೀಡುತ್ತಿದ್ದಾರೆ’ ಎಂದು ಪ್ರಕರಣದ ಬಗ್ಗೆ ವಿವರಿಸಿದರು. ಕೇಸ್‌ನ ವಿವರಗಳನ್ನು ಗಮನಿಸಿದರೆ ಅಜ್ಜ- ಅಜ್ಜಿಗೆ ಮೊಮ್ಮಕ್ಕಳ ಮೇಲೆ, ಮೊಮ್ಮಕಳ್ಳಿಗೆ ಅಜ್ಜ- ಅಜ್ಜಿ ಮೇಲೆ ಭಾರಿ ಪ್ರೀತಿ ಇದ್ದಂತೆ ಕಾಣುತ್ತಿದೆ. ಸುಂದರ ಚಳಿಗಾಲದ ಋುತುಮಾನದಲ್ಲಿ ಬದುಕನ್ನು ಆಸ್ವಾದಿಸುವುದರ ಬದಲಿಗೆ ಅಹಂಕಾರಗಳ ಗೋಡೆ ಕಟ್ಟಿಕೊಂಡು ಯಾಕೆ ಜಗಳದ ಜೀವನ ನಡೆಸುತ್ತಿದ್ದೀರಿ? ಅಪ್ಪ ಮಕ್ಕಳು ಆಸ್ತಿಗಾಗಿ ಜಗಳ ಕಾಯುತ್ತಾ ಕೋರ್ಟ್‌ ಕಚೇರಿ ಅಲೆಯುವುದು ಎಷ್ಟು ಸೂಕ್ತ? ಕುಳಿತು ಎಲ್ಲರೂ ವಿವಾದ ಬಗೆಹರಿಸಿಕೊಳ್ಳಿ ಎಂದು ನ್ಯಾಯಪೀಠ ಸಲಹೆ ನೀಡಿತು. ‘ಅರ್ಜಿದಾರನೂ ಆಗಿರುವ ಪುತ್ರ, ತಂದೆ ತಾಯಿಗೆ ಹಿಂಸೆ ನೀಡಬಾರದು. ಮನೆಯ ನೆಲ ಅಂತಸ್ತವನ್ನು ಅವರಿಗೆ ಬಿಟ್ಟುಕೊಡಬೇಕು. ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅರ್ಜಿದಾರರು ತಂದೆತಾಯಿ ಜತೆ ನಡೆದುಕೊಳ್ಳುವ ಚಟುವಟಿಕೆಗಳನ್ನು ದಾಖಲಿಸಬೇಕು ಎಂದೂ ಆದೇಶಿಸಿದೆ. ಪ್ರಕರಣದ ಹಿನ್ನೆಲೆ ಏನು? ರಾಜ್ಯದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಡಿವೈಎಸ್‌ಪಿ ಹುದ್ದೆಯಿಂದ ನಿವೃತ್ತರಾಗಿರುವ ಅರ್ಜಿದಾರರ ತಂದೆಗೆ ಈಗ 72 ವರ್ಷ. ತಾಯಿಗೆ 62 ವರ್ಷ. ಸಂತ್ರಸ್ತ ತಂದೆ 1987 ಮತ್ತು 1994ರಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳ ಪೊಲೀಸ್‌ ಪದಕ ಪಡೆದು ಸೇವೆಯಲ್ಲಿ ಶಹಬ್ಬಾಸ್‌ಗಿರಿ ಪಡೆದಿದ್ದವರು. ಬೆಂಗಳೂರಿನ ವಿಜಯನಗರದ ಚಂದ್ರಾ ಲೇಔಟ್‌ನಲ್ಲಿರುವ ಮೂರು ಮಹಡಿಗಳ ಮನೆ ಇದೆ. ಅದನ್ನು ಬಿಟ್ಟುಕೊಡುವಂತೆ ಮಗ ಕಿರುಕುಳ ನೀಡುತ್ತಿದ್ದಾನೆನ್ನುವುದು ಆರೋಪ. ಅವರು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ-2007ರ ಕಲಂ 5 ಮತ್ತು 23ರ ಅನುಸಾರ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ ರಕ್ಷಣೆ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ಅರೆನ್ಯಾಯಿಕ ನ್ಯಾಯಮಂಡಳಿಯ ಅಧಿಕಾರಿ ಕೆ.ರಂಗನಾಥ್‌, ವೃದ್ಧಾಪ್ಯದಲ್ಲಿರುವ ಪೋಷಕರಿಗೆ ಆಸ್ತಿ ಬಿಟ್ಟುಕೊಡುವಂತೆ ಆದೇಶಿಸಿದ್ದರು. ಮಗ ಆ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾನೆ.