ಓಮಿಕ್ರಾನ್ ಪತ್ತೆಯಾದ ದೇಶಗಳಿಂದ ಬಂದ 6 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್: ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಈ ನಡುವೆ 'ಅಪಾಯದಲ್ಲಿ ಇರುವ' ದೇಶಗಳಿಂದ ಬಂದ ಆರು ಮಂದಿ ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.

ಓಮಿಕ್ರಾನ್ ಪತ್ತೆಯಾದ ದೇಶಗಳಿಂದ ಬಂದ 6 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್: ಮಹಾರಾಷ್ಟ್ರ
Linkup
ಮುಂಬಯಿ: 'ಅಪಾಯದಲ್ಲಿ ಇರುವ' ದೇಶಗಳಿಂದ ಬಂದ ಆರು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. ಎಲ್ಲ ಆರು ಪ್ರಯಾಣಿಕರು ದಕ್ಷಿಣ ಆಫ್ರಿಕಾ ಅಥವಾ ತಳಿ ಸೋಂಕು ದೃಢಪಟ್ಟ ಬೇರೆ ದೇಶಗಳಿಂದ ಬಂದವರಾಗಿದ್ದಾರೆ. ಅವರ ಪೈಕಿ ಕೆಲವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ (Asymptomatic) ಅಥವಾ ಲಘು ಲಕ್ಷಣಗಳಿವೆ. ಅವರ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿಕೆ ತಿಳಿಸಿದೆ. 'ಅಪಾಯದಲ್ಲಿ ಇರುವ' ದೇಶಗಳೆಂದು ಗುರುತಿಸಲಾಗಿರುವ ರಾಷ್ಟ್ರಗಳಿಂದ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಏಳು ದಿನಗಳ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಗಾಗುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಪ್ರಯಾಣಿಕರನ್ನು ಕಡ್ಡಾಯ ಐಸೋಲೇಷನ್‌ಗೆ ಒಳಪಡಿಸುವ ಸೌಲಭ್ಯಗಳು ತಕ್ಷಣದಿಂದಲೇ ಜಾರಿಯಾಗಿದೆ. ನಿಯೋಜಿತ ಹೋಟೆಲ್‌ಗಳಲ್ಲಿ ಪ್ರಯಾಣಿಕರು ಇರಬೇಕಾಗಿದ್ದು, ಅದರ ವೆಚ್ಚಗಳನ್ನು ಪ್ರಯಾಣಿಕರೇ ಭರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ಹೊಸ ಆದೇಶ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ವಿಮಾನ ಏರುವ ಸಂದರ್ಭದಲ್ಲಿ ಅವರಿಗೆ ಈ ಆದೇಶದ ಮಾಹಿತಿ ಇರಲಿಲ್ಲ. ಆದರೆ ಮಹಾರಾಷ್ಟ್ರಕ್ಕೆ ಬಂದು ಇಳಿಯುತ್ತಿದ್ದಂತೆ, ಕಡ್ಡಾಯ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡುವುದು ಹಾಗೂ ಹೋಟೆಲ್ ಖರ್ಚುಗಳನ್ನು ತಾವೇ ಭರಿಸಬೇಕು ಎನ್ನುವುದು ಗೊತ್ತಿರದೆ ಅವರು ಕಂಗಾಲಾದರು. ಓಮಿಕ್ರಾನ್ ಪತ್ತೆಯಾದ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು, ತಮ್ಮ ಆಗಮನದ ಎರಡು, ನಾಲ್ಕು ಹಾಗೂ ಏಳನೇ ದಿನ- ಹೀಗೆ ಒಟ್ಟು ಮೂರು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಬೇಕು. ಪಾಸಿಟಿವ್ ಕಂಡುಬಂದ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗುವುದು. ನೆಗೆಟಿವ್ ಬಂದವರನ್ನು ಹೆಚ್ಚುವರಿ ಏಳು ದಿನ ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು. ಓಮಿಕ್ರಾನ್ ಹಿನ್ನೆಲೆಯಲ್ಲಿ ನ. 28ರಂದು ಕೇಂದ್ರ ಸರ್ಕಾರ ಪ್ರಯಾಣ ಮಾರ್ಗಸೂಚಿ ಹೊರಡಿಸಿದ್ದು, ಈ ತಳಿಯನ್ನು ಆತಂಕದ ಪ್ರಭೇದ ಎಂದು ಗುರುತಿಸಿದೆ. ಹೀಗಾಗಿ ಕನಿಷ್ಠ ನಿರ್ಬಂಧಗಳು ಜಾರಿಯಲ್ಲಿ ಇರಲಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮಹಾರಾಷ್ಟ್ರಕ್ಕೆ ಬಂದಿಳಿದ ಅಂತಾರಾಷ್ಟ್ರೀಯ ಪ್ರಯಾಣಿಕರು ತಾವು ಕಳೆದ 15 ದಿನಗಳಲ್ಲಿ ಪ್ರಯಾಣಿಸಿದ ಎಲ್ಲ ದೇಶಗಳ ವಿವರಗಳನ್ನು ನೀಡಬೇಕು. ಇದನ್ನು ಅವರು ಆಗಮಿಸಿದ ಸಂದರ್ಭದಲ್ಲಿ ವಲಸೆ ವಿಭಾಗದಲ್ಲಿ ಪರಿಶೀಲಿಸಿ ದೃಢಪಡಿಸಿಕೊಳ್ಳಲಾಗುತ್ತದೆ. ತಪ್ಪು ಮಾಹಿತಿ ನೀಡಿರುವುದು ಖಚಿತವಾದರೆ ಆ ಪ್ರಯಾಣಿಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005ರ ವಿವಿಧ ಸೆಕ್ಷನ್‌ಗಳ ಅಡಿ ಕ್ರಮಕ್ಕೆ ಒಳಪಡಿಸಲಾಗುತ್ತದೆ. ಕೇಂದ್ರ ಸರ್ಕಾರವು ಗುರುತಿಸಿರುವ 'ಅಪಾಯದಲ್ಲಿ ಇರುವ' ದೇಶಗಳಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ. ಅವರ ವರದಿ ನೆಗೆಟಿವ್ ಬಂದರೆ ಮನೆಯಲ್ಲಿ ಎರಡು ವಾರಗಳ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಬೇಕು. ಪಾಸಿಟಿವ್ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಯುರೋಪ್‌ನ ಎಲ್ಲ 44 ದೇಶಗಳು, ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೀನಾ, ಬೋಟ್ಸ್‌ವಾನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಸಿಂಗಪುರ, ಹಾಂಕಾಂಗ್ ಮತ್ತು ಇಸ್ರೇಲ್ 'ಅಪಾಯದಲ್ಲಿ ಇರುವ' ದೇಶಗಳ ಪಟ್ಟಿಯಲ್ಲಿವೆ. ಭಾರತದ ಇತರೆ ವಿಮಾನ ನಿಲ್ದಾಣಕ್ಕೆ ತೆರಳಲು ಸಂಪರ್ಕ ವಿಮಾನಕ್ಕಾಗಿ ಕಾಯುವ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಡುವಂತೆ ಇಲ್ಲ. ಅವರು ಮಹಾರಾಷ್ಟ್ರದಲ್ಲಿ ಮೊದಲು ಇಳಿದ ಕೂಡಲೇ ಆರ್‌ಟಿ ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಅವರಲ್ಲಿ ನೆಗೆಟಿವ್ ಕಂಡುಬಂದರೆ ಮಾತ್ರವೇ ಮತ್ತೆ ವಿಮಾನ ಏರಲು ಅನುಮತಿ ನೀಡಲಾಗುತ್ತದೆ. ರಾಜ್ಯದ ಒಳಗೆ ಸಂಪರ್ಕ ವಿಮಾನ ಇದ್ದರೆ, ರಾಜ್ಯಕ್ಕೆ ನೇರವಾಗಿ ಬಂದಿಳಿಯುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇರುವ ಎಲ್ಲ ನಿಯಮಗಳು ಅವರಿಗೂ ಅನ್ವಯವಾಗುತ್ತದೆ.