ಅಹಮದಾಬಾದ್ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಪೂರಕವಾಗಿ ಒಎನ್‌ಜಿಸಿಗೆ ದೇಶಿ ನಿರ್ಮಿತ ಆಲ್ಟ್ರಾ ಮಾಡರ್ನ್ ‘’ಗಳನ್ನು ಮೂಲದ ‘ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫಾಸ್ಟ್ರಕ್ಚರ್ ಲಿ.’ (ಎಂಇಐಎಲ್) ಪೂರೈಕೆ ಮಾಡುತ್ತಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಂಇಐಎಲ್ 6,000 ಕೋಟಿ ರೂ. ವೆಚ್ಚದಲ್ಲಿ 47 ದೇಶಿ ನಿರ್ಮಿತ ಅತ್ಯಾಧುನಿಕ ರಿಗ್ (ಭೂಮಿಯನ್ನು ಕೊರೆಯುವ ಯಂತ್ರ)ಗಳನ್ನು ನಿರ್ಮಾಣ ಮಾಡಿ ಒಎನ್‌ಜಿಸಿಗೆ ನೀಡಲಿದೆ. ಈ ಅತ್ಯಾಧುನಿಕ ಹೈಡ್ರಾಲಿಕ್ ರಿಗ್‌ಗಳು 4,000 ಮೀಟರ್ ಅಂದರೆ 4 ಕಿ.ಮೀ ವರೆಗೆ ಡ್ರಿಲ್ಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.
ಈ ರಿಗ್‌ಗಳು 40 ವರ್ಷದವರೆಗೂ ಬಾಳಿಕೆ ಬರಲಿವೆ. ಹೆಚ್ಚು ಸುರಕ್ಷತೆ ಮತ್ತು ಸ್ವಯಂ ಕಾರ್ಯಾಚರಣೆಯೇ ಈ ರಿಗ್‌ಗಳ ವೈಶಿಷ್ಟ್ಯವಾಗಿದೆ. ಈಗ ಎರಡು ರಿಗ್‌ಗಳನ್ನು ಯಶಸ್ವಿಯಾಗಿ ಕಾರ್ಯಾರಂಭ ಮಾಡಿದ್ದು, ಉಳಿದ ರಿಗ್‌ಗಳು ನಿರ್ಮಾಣ ಹಂತದಲ್ಲಿವೆ. ಈ ರಿಗ್‌ಗಳನ್ನು ಗುಜರಾತ್‌ನ ಒಎನ್‌ಜಿಸಿ ತೈಲ ಕ್ಷೇತ್ರಗಳಲ್ಲಿ ಅಳವಡಿಸಲಾಗಿದೆ. ಒಂದು ರಿಗ್ ಅಹಮದಾಬಾದ್‌ನ ಧಮಸನಾ ಹಳ್ಳಿಯ ಜಿಜಿಎಸ್ 3ನೇ ಕಲೊಲ್ ತೈಲ ಕ್ಷೇತ್ರದಲ್ಲಿ ಡ್ರಿಲ್ಲಿಂಗ್ ಶುರುವಾಗಿದೆ.
ಮೊದಲ ಖಾಸಗಿ ಕಂಪನಿ: ಒಎನ್‌ಜಿಸಿಗೆ ರಿಗ್‌ಗಳನ್ನು ಪೂರೈಸುತ್ತಿರುವ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಯನ್ನು ಎಂಇಐಎಲ್ ಪಡೆದುಕೊಂಡಿದೆ. ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನದ 1,500 ಅಶ್ವಶಕ್ತಿ ಸಾಮರ್ಥ್ಯದ ಮೊಬೈಲ್ ಹೈಡ್ರಾಲಿಕ್ ಲ್ಯಾಂಡ್ ಡ್ರಿಲಿಂಗ್ ರಿಗ್ ನಿರ್ಮಾಣ ಮಾಡುತ್ತಿದೆ. 1989ರಲ್ಲಿ ಪ್ರಾರಂಭವಾದ ಎಂಇಐಎಲ್, ಈಗ 20 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ನೀರಾವರಿ ಆಯಿಲ್ ಮತ್ತು ಗ್ಯಾಸ್, ಸಾರಿಗೆ ಇಂಧನ, ಟೆಲಿಕಾಂ, ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಿಸಿಕೊಂಡಿದೆ.
ಎಂಇಐಎಲ್ ಆಯಿಲ್ ರಿಗ್ ವಿಭಾಗದ ಮುಖ್ಯಸ್ಥ ಎನ್. ಕೃಷ್ಣಕುಮಾರ್, ಉಪಾಧ್ಯಕ್ಷ ಪಿ. ರಾಜೇಶ್ ರೆಡ್ಡಿ, ಆಯಿಲ್ ರಿಗ್ ವಿಭಾಗದ ಅಧ್ಯಕ್ಷ ಶ್ರೀನಿವಾಸ ಬೊಮ್ಮರೆಡ್ಡಿ ಅವರು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕಾರಿಗಳು ಈ ರಿಗ್ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮಾಹಿತಿ ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯೇ ಅತ್ಯಾಧುನಿಕ ಹೈಡ್ರಾಲಿಕ್ ಲ್ಯಾಂಡ್ ಡ್ರಿಲ್ ರಿಗ್ ನಿರ್ಮಾಣಕ್ಕೆ ಪ್ರೇರಣೆ. ಒಎನ್‌ಜಿಸಿಗೆ ರಿಗ್‌ಗಳನ್ನು ದೇಸೀಯವಾಗಿ ನಿರ್ಮಿಸಿ ಪೂರೈಸಿದ ಸವಾಲು ಎದುರಿಸಿದ ಖುಷಿ ನಮಗಿದೆ’ ಎಂದು ಹೇಳಿಕೊಂಡರು.
‘ಮೂರು ಪ್ರಮುಖ ಸಂಗತಿಗಳಿಂದಾಗಿ ಹಳೆಯ ರಿಗ್‌ಗಳಿಗಿಂತಲೂ ಅತ್ಯಾಧುನಿಕ ರಿಗ್‌ಗಳು ಭಿನ್ನವಾಗಿ ನಿಲ್ಲುತ್ತವೆ. ಮೊದಲನೆಯದು - ಸುರಕ್ಷತೆ, ಎರಡನೆಯದು - ವೇಗವಾಗಿ ಕೊರೆಯುವ ತಂತ್ರಜ್ಞಾನ, ಮೂರನೆಯದು - ನಿಖರತೆ. ಹಳೆಯ ರಿಗ್‌ಗಳಿಗೆ ಹೋಲಿಸಿದರೆ ಹೊಸ ರಿಗ್‌ಗಳು ಹೆಚ್ಚು ಸುರಕ್ಷಿತವಾಗಿವೆ. ಇಲ್ಲಿ ಮಾನವ ಹಸ್ತಕ್ಷೇಪ ಕಡಿಮೆ. ಎಲ್ಲವೂ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ಹೈಡ್ರಾಲಿಕ್ ರಿಗ್ ತುಂಬ ವೇಗವಾಗಿ ಡ್ರಿಲ್ಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹಳೆಯ ರಿಗ್‌ಗೆ ಹೋಲಿಸಿದರೆ ಶೇ.35 ರಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಕೃಷ್ಣಕುಮಾರ್ ವಿವರಿಸಿದರು.
ಈ ಅತ್ಯಾಧುನಿಕ ಲ್ಯಾಂಡ್ ಡ್ರಿಲ್ ರಿಗ್‌ಗಳನ್ನು ಎಂಇಐಎಲ್ ದೇಶೀಯವಾಗಿ ನಿರ್ಮಾಣ ಮಾಡಿದರೂ ತಂತ್ರಜ್ಞಾನವು ಇಟಲಿಯದ್ದಾಗಿದೆ. ಮೂರು ವರ್ಷಗಳ ಹಿಂದೆ ಎಂಇಐಎಲ್ ಇಟಲಿಯ ಡ್ರಿಲ್ ಮ್ಯಾಕ್ ಎಂಬ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಡ್ರಿಲ್ ಮ್ಯಾಕ್ ಕಂಪನಿಯ ತಂತ್ರಜ್ಞಾನವನ್ನು ಬಳಸಿಕೊಂಡು ದೇಶೀಯವಾಗಿ ರಿಗ್‌ಗಳನ್ನು ನಿರ್ಮಾಣ ಮಾಡಿದೆ. ಹಾಗಿದ್ದೂ ಕೆಲವು ಮುಖ್ಯ ಭಾಗಗಳನ್ನು ಹೊರಗಿನಿಂದಲೇ ತರಿಸಲಾಗಿದೆ. ಹೈದ್ರಾಬಾದ್‌ನ ಉತ್ಪಾದನಾ ಘಟಕದಲ್ಲಿ ರಿಗ್‌ಗಳನ್ನು ನಿರ್ಮಾಣ ಮಾಡಿ ಒಎನ್‌ಜಿಸಿಗೆ ಒಪ್ಪಿಸಲಾಗುತ್ತಿದೆ.
ಎಲ್ಲೆಲ್ಲಿ ಅಳವಡಿಕೆ?: ಗುಜರಾತ್ ಮಾತ್ರವಲ್ಲದೆ ದೇಶದ ನಾನಾ ಕಡೆ ಒಎನ್‌ಜಿಸಿ ತೈಲ ಕ್ಷೇತ್ರಗಳನ್ನು ಹೊಂದಿವೆ. ಅಸ್ಸಾಂನ ಶಿವಸಾಗರ (ಜೋರ್ಹಾಟ್) ಆಂಧ್ರಪ್ರದೇಶದ ರಾಜಮುಂಡ್ರಿ, ಗುಜರಾತ್‌ನ ಅಹಮದಾಬಾದ್, ಮೆದಹ್ಸಿನಾ, ಕಾಂಬೆ, ತ್ರಿಪುರದ ಅಗರ್ತಲ ಮತ್ತು ತಮಿಳುನಾಡಿನ ಕಾರೈಕಲ್ ನಿಕ್ಷೇಪಗಳಲ್ಲಿ ಎಂಇಐಎಲ್ ರಿಗ್‌ಗಳನ್ನು ಅಳವಡಿಸಲಾಗುತ್ತದೆ.