ಆಗ ಲಾಕ್‌ಡೌನ್, ಈಗ ತೈಲ ಬೆಲೆ ಏರಿಕೆ: ನೆಲಕಚ್ಚುತ್ತಿದೆ ಸಾರಿಗೆ ಉದ್ಯಮ, ಬೀದಿಗೆ ಬಂದ ಬದುಕು

ಕಳೆದ ಒಂದೂವರೆ ವರ್ಷದಿಂದ ಲಾಕ್‌ಡೌನ್ ಹಾಗೂ ಇತರೆ ನಿರ್ಬಂಧಗಳಿಂದ ಕಂಗೆಟ್ಟಿದ್ದ ಸಾರಿಗೆ ಉದ್ಯಮ, ಈಗ ಸತತ ತೈಲ ಬೆಲೆ ಏರಿಕೆಯಿಂದ ಮತ್ತಷ್ಟು ಹೊಡೆತ ಅನುಭವಿಸುತ್ತಿದೆ. ಇದರ ಪರಿಣಾಮ ವಾಣಿಜ್ಯ ವಾಹನ ಉದ್ಯಮ ಅವನತಿಯತ್ತ ಸಾಗುತ್ತಿದೆ.

ಆಗ ಲಾಕ್‌ಡೌನ್, ಈಗ ತೈಲ ಬೆಲೆ ಏರಿಕೆ: ನೆಲಕಚ್ಚುತ್ತಿದೆ ಸಾರಿಗೆ ಉದ್ಯಮ, ಬೀದಿಗೆ ಬಂದ ಬದುಕು
Linkup
ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತೈಲ ಬೆಲೆ ಸಾರಿಗೆ ಕ್ಷೇತ್ರಕ್ಕೆ ಚೇತರಿಸಲಾಗದ ಹೊಡೆತ ನೀಡುತ್ತಿದೆ. ಒಂದೆಡೆ ಲಾಕ್‌ಡೌನ್ ನಿಯಂತ್ರಣ ಕ್ರಮಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಉದ್ಯಮ, ಈಗ ತೈಲ ಬೆಲೆಯಲ್ಲಿನ ಏರಿಕೆ ಹಾಗೂ ವಿವಿಧ ತೆರಿಗೆಗಳಿಂದ ಮತ್ತಷ್ಟು ಕಂಗೆಟ್ಟಿದೆ. ಸಾವಿರಾರು ಕ್ಯಾಬ್ ಮಾಲೀಕರು ತಮ್ಮ ಪರವಾನಗಿಗಳನ್ನು ಸಾರಿಗೆ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. ನೂರಾರು ಖಾಸಗಿ ಬಸ್‌ಗಳು ತಮ್ಮ ಕಾರ್ಯಾಚರಣೆಯನ್ನು ಬಹುತೇಕ ಅರ್ಧದಷ್ಟು ಕಡಿತಗೊಳಿಸಿವೆ. ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವುಗಳಿಗೆ ಆರ್ಥಿಕ ಶಕ್ತಿಯಿಲ್ಲ. ಕಳೆದ 10 ದಿನಗಳಿಂದ ಕರ್ನಾಟಕದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 4 ರೂಪಾಯಿ ಮತ್ತು ಡೀಸೆಲ್ ದರ 3.5 ರೂಪಾಯಿಯಷ್ಟು ತುಟ್ಟಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಲೇ ಇರುವುದರಿಂದ ದೇಶದೊಳಗಿನ ತೈಲ ಬೆಲೆ ಶೀಘ್ರದಲ್ಲಿ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ. ಇದರ ಬಿಸಿ ಸಾರಿಗೆ ಉದ್ಯಮಕ್ಕೆ ತೀವ್ರವಾಗಿ ತಟ್ಟಿದೆ. ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿನ ಲಾಕ್‌ಡೌನ್ ಹಾಗೂ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಂಡು ಪ್ರವಾಸಿ ತಾಣಗಳು ಮತ್ತೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾದ ಬಳಿಕ ಮತ್ತೆ ಚೇತರಿಸಿಕೊಳ್ಳಲಿದೆ ಎಂಬ ಭರವಸೆ ಇತ್ತು. ಆದರೆ ಆ ಆಶಾವಾದಕ್ಕೆ ತಣ್ಣೀರೆರಚಿದೆ. ತೈಲ ಬೆಲೆ ಏರಿಕೆ ಕಾರಣದಿಂದ ಒಂದು ಲಕ್ಷಕ್ಕೂ ಅಧಿಕ ಟ್ರಕ್‌ಗಳು ಸಂಚಾರ ಸ್ಥಗಿತಗೊಳಿಸಿವೆ ಎಂದು ಲಾರಿ ಮಾಲೀಕರ ಸಂಘಗಳ ಒಕ್ಕೂಟ ತಿಳಿಸಿದೆ. 'ಟ್ರಕ್‌ಗಳ ಓಡಾಟದ ವೆಚ್ಚ ಪ್ರತಿ ಕಿಲೋ ಮೀಟರ್‌ಗೆ ಕಳೆದ ವರ್ಷ 19-20 ರೂಪಾಯಿ ಇತ್ತು. ಅದೀಗ ಕಿಲೋ ಮೀಟರ್‌ಗೆ 28 ರೂಪಾಯಿ ತಲುಪಿದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ಕೆಲವು ತಿಂಗಳಲ್ಲಿ ಇನ್ನೂ ಒಂದು ಲಕ್ಷ ಟ್ರಕ್‌ಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ' ಎಂದು ಒಕ್ಕೂಟದ ಅಧ್ಯಕ್ಷ ಜಿಆರ್ ಷಣ್ಮುಖಪ್ಪ ತಿಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ 15,000ಕ್ಕೂ ಹೆಚ್ಚು ಕ್ಯಾಬ್‌ಗಳು ಮತ್ತು ಖಾಸಗಿ ಬಸ್‌ ಮಾಲೀಕರು ತಮ್ಮ ಪರವಾನಗಿಗಳನ್ನು ಒಪ್ಪಿಸಿದ್ದಾರೆ. ಪ್ರಯಾಣಿಕ ಬಸ್‌ಗಳು ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಸಾವಿರಾರು ರೂಪಾಯಿ ರಸ್ತೆ ತೆರಿಗೆಯನ್ನು ಪಾವತಿಸಲೇಬೇಕಿದೆ. ಉದ್ಯಮದ ಚಟುವಟಿಕೆಗಳೇ ಬಂದ್ ಆಗಿರುವಾಗ ವಿನಾಕಾರಣ ತೆರಿಗೆ ಪಾವತಿಸಿ ಮತ್ತಷ್ಟು ನಷ್ಟ ಅನುಭವಿಸಲು ಮಾಲೀಕರು ಸಿದ್ಧರಿಲ್ಲ. ರಾಜ್ಯದ ಪ್ರತಿಷ್ಠಿತ ಖಾಸಗಿ ಬಸ್ ಸಂಸ್ಥೆಗಳಾದ ಎಸ್‌ಆರ್‌ಎಸ್ ಮತ್ತು ವಿಆರ್‌ಎಲ್ ಟ್ರಾವೆಲ್ಸ್ ಕೂಡ ತಮ್ಮ ಶೇ 20-25ರಷ್ಟು ಬಸ್‌ಗಳನ್ನು ಸ್ಥಗಿತಗೊಳಿಸಿವೆ. ಎರಡು ಲಕ್ಷಕ್ಕೂ ಅಧಿಕ ಕ್ಯಾಬ್‌ಗಳು ಮತ್ತು ಇತರೆ ಪ್ರಯಾಣಿಕ ವಾಹನಗಳು ಕೂಡ ರಸ್ತೆಗಳಿಂದ ಮಾಯವಾಗಿವೆ! ಹೊಸ ವಾಣಿಜ್ಯ ವಾಹನಗಳ ನೋಂದಣಿಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. 'ಸಾಂಕ್ರಾಮಿಕಕ್ಕೂ ಮೊದಲು ನಾವು ಪ್ರತಿ ತಿಂಗಳೂ ಕ್ಯಾಬ್, ಟ್ಯಾಕ್ಸಿ, ಬಸ್ ಮತ್ತು ಟ್ರಕ್‌ಗಳು ಸೇರಿದಂತೆ ಸುಮಾರು 10,000 ವಾಣಿಜ್ಯ ವಾಹನಗಳನ್ನು ನೋಂದಣಿ ಮಾಡುತ್ತಿದ್ದೆವು. ಈಗ ಆ ಸಂಖ್ಯೆ ಕೇವಲ 200-300 ವಾಹನಗಳಿಗೆ ಇಳಿಕೆಯಾಗಿದೆ' ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಆಡಳಿತ) ಎಲ್ ಹೇಮಂತ್ ಕುಮಾರ್ ತಿಳಿಸಿದ್ದಾರೆ. ಹಾಗೂ ವಾಹನ ಖರೀದಿಸಿದವರಿಗೆ ಒಂದೆಡೆ ತೈಲ ಬೆಲೆ ಏರಿಕೆ ಹಾಗೂ ಇನ್ನೊಂದೆಡೆ ಕುಂಠಿತ ವ್ಯವಹಾರಗಳ ಎರಡೂ ಏಟು ಒಟ್ಟಿಗೆ ಬೀಳುತ್ತಿದೆ. 'ನಾನು ಸಾಂಕ್ರಾಮಿಕ ಆರಂಭವಾಗುವುದಕ್ಕೂ ಆರು ತಿಂಗಳು ಮುನ್ನವಷ್ಟೇ ಸಾಲ ಪಡೆದು ಹೊಸ ಕಾರು ಖರೀದಿಸಿದ್ದೆ. ಪರಿಸ್ಥಿತಿ ಸುಧಾರಣೆಯಾಗಬಹುದು ಎಂಬ ಆಶಯದೊಂದಿಗೆ ಪ್ರತಿ ತಿಂಗಳೂ ಇಎಂಐ ಪಾವತಿಸಿದ್ದೆ. ಆದರೆ ಡೀಸೆಲ್ ದರದ ಏರಿಕೆ ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ. ಈಗ ವಾಹನವನ್ನು ಮಾರಾಟ ಮಾಡಿದ್ದೇನೆ. ಪ್ರಸ್ತುತ ನಾನು ನಿರುದ್ಯೋಗಿ' ಎಂದು ಹುಬ್ಬಳ್ಳಿಯ ಕ್ಯಾಬ್ ಚಾಲಕ ಮಧುಸೂದನ್ ತಿಳಿಸಿದರು. ಮುಷ್ಕರ ನಡೆಸಲು ಚಿಂತನೆಸಾರಿಗೆ ವಲಯ ಬೀದಿಗೆ ಬಂದಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ರೀತಿ ಸಹಾಯಕ್ಕೆ ಬಂದಿಲ್ಲ ಎಂದು ಆರೋಪಿಸಿರುವ ಷಣ್ಮುಖಪ್ಪ, ರಾಷ್ಟ್ರವ್ಯಾಪಿ ಟ್ರಕ್ ಮುಷ್ಕರಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. 'ಜನರು ಈಗಾಗಲೇ ಕೋವಿಡ್ 19 ಕಾರಣದಿಂದ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಇಷ್ಟು ದೊಡ್ಡ ಮೊತ್ತದ ತೆರಿಗೆ ವಿಧಿಸುವುದರ ಅಗತ್ಯವೇನಿದೆ? ನಾವು ಸರ್ಕಾರಕ್ಕೆ 21 ದಿನಗಳ ಗಡುವು ನೀಡಲು ಉದ್ದೇಶಿಸಿದ್ದೇವೆ. ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಮುಷ್ಕರ ನಡೆಸುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.