ಕಚ್ಚಾ ತೈಲ ದರ ಕುಸಿದರೂ ಭಾರತದಲ್ಲಿ ಇಳಿಕೆಯಾಗದ ಪೆಟ್ರೋಲ್‌ ದರ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತನ್ನ ಉನ್ನತ ಮಟ್ಟದಿಂದ ಇಳಿದ ಸಂದರ್ಭದಲ್ಲೂ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ನ ರಿಟೇಲ್‌ ದರದಲ್ಲಿ ಇಳಿಕೆಯಾಗಿಲ್ಲ. ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನ ಇನ್ನೂ ಬಳಕೆದಾರರಿಗೆ ಲಭಿಸಿಲ್ಲ.

ಕಚ್ಚಾ ತೈಲ ದರ ಕುಸಿದರೂ ಭಾರತದಲ್ಲಿ ಇಳಿಕೆಯಾಗದ ಪೆಟ್ರೋಲ್‌ ದರ!
Linkup
ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ತನ್ನ ಉನ್ನತ ಮಟ್ಟದಿಂದ ಇಳಿದ ಸಂದರ್ಭದಲ್ಲೂ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ನ ರಿಟೇಲ್‌ ದರದಲ್ಲಿ ಇಳಿಕೆಯಾಗಿಲ್ಲ. ಸತತ 10 ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಯಥಾಸ್ಥಿತಿಯಲ್ಲಿದೆ ಎನ್ನುವುದು ಹೊರತುಪಡಿಸಿದರೆ, ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನ ಇನ್ನೂ ಬಳಕೆದಾರರಿಗೆ ಲಭಿಸಿಲ್ಲ. ಬ್ರೆಂಟ್‌ ಕಚ್ಚಾ ತೈಲ ದರ ಮಂಗಳವಾರ ಬ್ಯಾರೆಲ್‌ಗೆ 73.72 ಡಾಲರ್‌ ನಷ್ಟಿದೆ. ಜುಲೈ 1ಕ್ಕೆ ಹೋಲಿಸಿದರೆ ಅಲ್ಪ ಮಟ್ಟದ ಏರಿಕೆ ದಾಖಲಿಸಿದೆ. ಹೀಗಿದ್ದರೂ, ಜುಲೈ 17ಕ್ಕೆ 66.15 ಡಾಲರ್‌ಗೆ ತಗ್ಗಿತ್ತು.ಹೀಗಿದ್ದರೂ, ರಿಟೇಲ್‌ ದರ ಇಳಿಯದಿರುವುದರಿಂದ ಬಳಕೆದಾರರಿಗೆ ನಿರೀಕ್ಷಿತ ಪ್ರಯೋಜನವಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಮಂಗಳವಾರ ಲೀಟರ್‌ಗೆ 105.25 ರೂ. ನಷ್ಟಿದೆ. ಡೀಸೆಲ್‌ ದರ 95.26 ರೂ. ನಷ್ಟಿತ್ತು. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕದಿಂದ ಸಂಗ್ರಹವಾಗುವ ಹಣವನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಅಭಿವೃದ್ಧಿ ವೆಚ್ಚಗಳಿಗೆ ಬಳಸಲಾಗುತ್ತಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್‌ ಚೌಧುರಿ ಇತ್ತೀಚೆಗೆ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಮತ್ತು ಡಾಲರ್‌ ಎದುರು ರೂಪಾಯಿಯ ವಿದೇಶಿ ವಿನಿಮಯ ದರವನ್ನು ಅಧರಿಸಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ನಿರ್ಧರಿಸುತ್ತವೆ . ಬಜೆಟ್‌ನಲ್ಲಿ ಘೋಷಿಸಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸರಕಾರ ಕಾರ್ಯಪ್ರವೃತ್ತವಾಗಿದೆ. ವಿತ್ತೀಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪನ್ಮೂಲ ಸಂಗ್ರಹಿಸಲಾಗುತ್ತಿದೆ. ರಾಜ್ಯಗಳು ತೈಲದ ಮೇಲೆ ವ್ಯಾಟ್‌ ಸಂಗ್ರಹಿಸುತ್ತಿವೆ ಎಂದು ಹೇಳಿದ್ದರು. ಆದರೆ ರಿಟೇಲ್‌ ದರಗಳು ಇಳಿಯದ ಪರಿಣಾಮ ಜನತೆಗೆ ಭಾರಿ ಹೊರೆಯಾಗಿ ಪರಿಣಮಿಸಿದೆ. ಹಣದುಬ್ಬರಕ್ಕೂ ಇದು ಕಾರಣವಾಗುತ್ತಿದೆ. ಮತ್ತೊಂದು ಕಡೆ ಜಿಎಸ್‌ಟಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರ್ಪಡೆಗೊಳಿಸಿದರೆ ದರ ಗಣನೀಯ ಇಳಿಕೆಯಾಗಬಹುದಿದ್ದರೂ, ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಂಭವಿಸಿಲ್ಲ.