ಜನೌಷಧ ಮಳಿಗೆಯಿಂದ 800 ಕೋಟಿ ರೂ. ವ್ಯವಹಾರ ಗುರಿ: ಭಗವಂತ ಖೂಬಾ

ದೇಶದಲ್ಲಿ 8,400 ಜನೌಷಧ ಮಳಿಗೆ ತೆರೆದಿದ್ದು, 1,451 ಬಗೆಯ ಔಷಧಗಳು ಲಭ್ಯವಿದೆ. ಕಳೆದ ವರ್ಷ 665 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದು, ಈ ವರ್ಷ 800 ಕೋಟಿ ರೂ. ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ಜನೌಷಧ ಮಳಿಗೆಯಿಂದ 800 ಕೋಟಿ ರೂ. ವ್ಯವಹಾರ ಗುರಿ: ಭಗವಂತ ಖೂಬಾ
Linkup
ಮಂಗಳೂರು: ದೇಶದಲ್ಲಿ 8,400 ತೆರೆದಿದ್ದು, 1,451 ಬಗೆಯ ಔಷಧ ಲಭ್ಯವಿದೆ. ಕಳೆದ ವರ್ಷ 665 ಕೋಟಿ ರೂ. ವ್ಯವಹಾರ ಮಾಡಿದ್ದು, ಈ ವರ್ಷ 800 ಕೋಟಿ ರೂ. ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು. ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಶುಕ್ರವಾರ ಫಾರ್ಮಾಸ್ಯುಟಿಕಲ್ಸ್‌ ಮತ್ತು ಡಿವೈಸಸ್‌ ಬ್ಯೂರೊ ಆಫ್‌ ಇಂಡಿಯಾ (ಪಿಎಂಬಿಐ) ಆಯೋಜಿಸಿದ್ದ ಜನೌಷಧ ಮಿತ್ರ ಸಮ್ಮೇಳನ ಮತ್ತು ರಾಷ್ಟ್ರೀಯ ಏಕತಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. 2007ರಲ್ಲಿ ಜನೌಷಧ ಯೋಜನೆ ಆರಂಭಿಸಿದ್ದರೂ 2014ರ ತನಕ ಕೇವಲ 90 ಮಳಿಗೆ ಸ್ಥಾಪಿಸಲಾಗಿತ್ತು. ನರೇಂದ್ರ ಮೋದಿ ಸರಕಾರ ಬಂದ ತಕ್ಷಣ ಬಡ ಜನರ ಮೇಲಿನ ಆರೋಗ್ಯದ ಕಾಳಜಿಯಿಂದ ಅಂದಿನ ಸಚಿವ ದಿ. ಅನಂತ ಕುಮಾರ್‌ ಅವರ ಮುತುವರ್ಜಿಯಿಂದ ದೊಡ್ಡ ಸಾಧನೆ ಮಾಡಲಾಗಿದೆ. ಬಡವರಿಗೆ ಶೇ. 70 ಕಡಿಮೆ ದರದಲ್ಲಿ ಔಷಧ ಲಭಿಸುವಂತಾಗಿದೆ. ಎಷ್ಟೋ ಮಂದಿಗೆ ಉದ್ಯೋಗ ಲಭಿಸುವಂತಾಗಿದೆ ಎಂದರು. ಜನೌಷಧ ಮಳಿಗೆಯಲ್ಲಿ ಯಾವ ಕಾರಣಕ್ಕೂ ಔಷಧ ಇಲ್ಲ ಎಂದಾಗಬಾರದು. ಮಳಿಗೆಯವರು ಔಷಧ ದಾಸ್ತಾನು ಇಟ್ಟುಕೊಳ್ಳಬೇಕು. ಸರಕಾರಿ ಹಾಗೂ ಖಾಸಗಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಜನೌಷಧಕ್ಕೆ ಹೆಚ್ಚಿನ ಪ್ರಚಾರ ಕೊಟ್ಟು, ಜನರು ಖರೀದಿ ಮಾಡಲು ಡಿಎಚ್‌ಒ ಕ್ರಮ ಕೈಗೊಳ್ಳಬೇಕು. ಮುಂದೆ ಜನೌಷಧ ಆ್ಯಪ್‌ ಮೂಲಕ ಲಭ್ಯ ಇರುವ ಔಷಧ ಸೇರಿದಂತೆ ಸಮಗ್ರ ಮಾಹಿತಿ ನೀಡಲಾಗುವುದು ಎಂದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನೌಷಧ ಮಳಿಗೆ ಸ್ಥಾಪನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ವಹಿವಾಟಿನಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕೋವಿಡ್‌ ಸಂದರ್ಭ ಶೇ.82.5 ಮಂದಿಗೆ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದರು. ಶಾಸಕ ವೇದವ್ಯಾಸ ಡಿ. ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೈಸೂರು ಲೈಟ್ಸ್‌ ನಿಗಮದ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಮುಡಾ ಅಧ್ಯಕ್ಷ ರವಿಶಂಕರ್‌ ಮಿಜಾರು, ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾಆರೋಗ್ಯಾಧಿಕಾರಿ ಡಾ. ಕಿಶೋರ್‌ ಕುಮಾರ್‌, ನಿಟ್ಟೆ ವಿವಿ ಡೀನ್‌ ಪ್ರೊ. ಸಿ.ಎಸ್‌. ಶಾಸ್ತ್ರಿ, ಡಾ.ನವೀನ್‌ ಕುಮಾರ್‌ ಬಿ.ಸಿ., ಡಾ. ರಾಘವೇಂದ್ರ ಪ್ರಸಾದ್‌ ಬಂಗಾರಡ್ಕ ಉಪಸ್ಥಿತರಿದ್ದರು. ಐವರು ಜನೌಷಧ ಮಿತ್ರರು, ಐವರು ಜನೌಷಧ ಪ್ರಬುದ್ಧರನ್ನು ಸನ್ಮಾನಿಸಲಾಯಿತು. ಪಿಎಂಬಿಐ ಮಾರಾಟ ಮತ್ತು ಪೂರೈಕೆ ವಿಭಾಗದ ಉಪ ಮಹಾಪ್ರಬಂಧಕ ಕುಂದನ್‌ ಸಿಂಗ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಾ ಪ್ರಬಂಧಕ ರವಿಕಾಂತ್‌ ತಿವಾರಿ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು. ಪ್ಲಾಸ್ಟಿಕ್‌ ಪಾರ್ಕ್‌ಗೆ ವೇಗ ಮಂಗಳೂರು ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್ ನಿರ್ಮಾಣ ದಿ .ಅನಂತಕುಮಾರ್‌ ಅವರ ಕನಸಾಗಿತ್ತು. ಕೆಲವು ಕಾರಣಗಳಿಂದ ವಿಳಂಬವಾಗಿದೆ. ಇತ್ತೀಚೆಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ವೇಗ ನೀಡಲಾಗುವುದು ಎಂದು ಸಚಿವ ಭಗವಂತ ಖೂಬಾ ಇದೇ ಸಂದರ್ಭದಲ್ಲಿ ಹೇಳಿದರು. ಪ್ಲಾಸ್ಟಿಕ್‌ ಪಾರ್ಕ್‌ಗೆ ಕೇಂದ್ರ ಸರಕಾರ ಈಗಾಗಲೇ ಮಂಜೂರಾತಿ ನೀಡಿದ್ದು, 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಅಗತ್ಯ ಪ್ರಕ್ರಿಯೆ ಮುಗಿಸಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.