ಸಂಸತ್‌ನಲ್ಲಿ ಸರಿಯಾದ ಚರ್ಚೆಗಳೇ ನಡೆಯುತ್ತಿಲ್ಲ: ಸಂಸದರ ವರ್ತನೆ ಬಗ್ಗೆ ಸಿಜೆಐ ಎನ್‌ವಿ ರಮಣ ಬೇಸರ

ಸಂಸತ್ತಿನ ಕಲಾಪಗಳು ನಡೆಯುತ್ತಿರುವ ರೀತಿಯ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಬೇಸರ ವ್ಯಕ್ತಪಡಿಸಿದ್ದಾರೆ. ಸದನಗಳಲ್ಲಿ ಸದಸ್ಯರಿಗೆ ಕಾನೂನುಗಳ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಸಂಸತ್‌ನಲ್ಲಿ ಸರಿಯಾದ ಚರ್ಚೆಗಳೇ ನಡೆಯುತ್ತಿಲ್ಲ: ಸಂಸದರ ವರ್ತನೆ ಬಗ್ಗೆ ಸಿಜೆಐ ಎನ್‌ವಿ ರಮಣ ಬೇಸರ
Linkup
ಹೊಸದಿಲ್ಲಿ: ಕಲಾಪಗಳ ಕಾರ್ಯನಿರ್ವಹಣೆ ರೀತಿಯನ್ನು ಮುಖ್ಯ ನ್ಯಾಯಮೂರ್ತಿ ಕಟುವಾಗಿ ಟೀಕಿಸಿದ್ದಾರೆ. ಒಂದು ಕಾಲದಲ್ಲಿ ಸಂಸತ್‌ನ ಎರಡೂ ಸದನಗಳಲ್ಲಿ ವಕೀಲರೇ ತುಂಬಿರುತ್ತಿದ್ದರು. ಆಗ ಕಾನೂನುಗಳ ಕುರಿತಾದ ಚರ್ಚೆ ಯೋಗ್ಯ ರೀತಿಯಲ್ಲಿ ನಡೆಯುತ್ತಿತ್ತು. ಈಗಿನ ಸನ್ನಿವೇಶ ಬಹಳ ಬೇಸರ ಉಂಟುಮಾಡುವಂತಿದೆ. ಸದನದಲ್ಲಿ ಯಾವುದೇ ಸೂಕ್ತ ರೀತಿಯ ಚರ್ಚೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. 'ಅಲ್ಲಿ ಕಾನೂನುಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶ ಏನು ಎನ್ನುವುದೇ ನಮಗೆ ತಿಳಿದಿಲ್ಲ. ಇದು ಸಾರ್ವಜನಿಕರಿಗೆ ಆಗುತ್ತಿರುವ ನಷ್ಟ. ಮತ್ತು ಬುದ್ಧಿಜೀವಿಗಳು ಸದನದಲ್ಲಿ ಇಲ್ಲದೆ ಇರುವುದರ ಪರಿಣಾಮವಿದು' ಎಂದು ಸುಪ್ರೀಂಕೋರ್ಟ್‌ನಲ್ಲಿ ಭಾನುವಾರ ವೇಳೆ ಅವರು ಹೇಳಿದ್ದಾರೆ. 'ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿದರೆ, ಅವರಲ್ಲಿ ಅನೇಕರು ಕಾನೂನು ಕಲಿತವರಾಗಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ಕೂಡ ಆರಂಭದಲ್ಲಿ ವಕೀಲ ಸಮುದಾಯದಿಂದ ತುಂಬಿ ಹೋಗಿದ್ದವು. ದುರದೃಷ್ಟವಶಾತ್, ಇಂದು ನೀವು ಸದನಗಳಲ್ಲಿ ನೋಡುತ್ತಿರುವುದೇನು... ಈ ಹಿಂದೆ ಸದನಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು ರಚನಾತ್ಮಕವಾಗಿದ್ದವು. ಹಣಕಾಸು ಮಸೂದೆಗಳ ಬಗ್ಗೆ ಚರ್ಚೆಗಳನ್ನು ನೋಡಿದ್ದೆ. ಅಲ್ಲಿ ಬಹಳ ರಚನಾತ್ಮಕ ಅಂಶಗಳನ್ನು ಮಂಡಿಸಲಾಗಿತ್ತು. ಕಾನೂನುಗಳನ್ನು ಚರ್ಚಿಸಿ ಜಾರಿಗೆ ತರಲಾಗುತ್ತಿತ್ತು. ಕಾನೂನಿನ ಶಾಸನದ ಭಾಗದ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವಿತ್ತು' ಎಂದಿದ್ದಾರೆ. 'ನೀವು ಕಾನೂನು ಸೇವೆಗೆ ನಿಮ್ಮನ್ನು ಸೀಮಿತಗೊಳಿಸಿಕೊಳ್ಳಬೇಡಿ. ಸಾರ್ವಜನಿಕ ಸೇವೆಯನ್ನೂ ಮಾಡಿ ಎಂದು ವಕೀಲರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಈ ದೇಶಕ್ಕೂ ನೀಡಿ' ಎಂದು ವಕೀಲರಿಗೆ ಸಲಹೆ ನೀಡಿದ್ದಾರೆ.