‘ಪ್ರಧಾನಿ ಸಮಯ ನೀಡಿದ್ದಾರೆ’, ದಿಲ್ಲಿ ಭೇಟಿ ವೇಳೆ ಮೋದಿ-ದೀದಿ ಮುಖಾಮುಖಿ

ಮುಂದಿನ ವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಲ್ಲಿಗೆ ಭೇಟಿ ನೀಡಲಿದ್ದು "ಪ್ರಧಾನಿ ನನಗೆ ಸಮಯ ನೀಡಿದ್ದಾರೆ. ನಾನು ಅವರನ್ನು ಭೇಟಿಯಾಗುತ್ತೇನೆ,” ಎಂದು ಹೇಳಿದ್ದಾರೆ.

‘ಪ್ರಧಾನಿ ಸಮಯ ನೀಡಿದ್ದಾರೆ’, ದಿಲ್ಲಿ ಭೇಟಿ ವೇಳೆ ಮೋದಿ-ದೀದಿ ಮುಖಾಮುಖಿ
Linkup
ಕೋಲ್ಕೊತ್ತಾ: ಮುಂದಿನ ವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ದಿಲ್ಲಿಗೆ ಭೇಟಿ ನೀಡಲಿದ್ದು, ಈ ವೇಳೆ ಪ್ರಧಾನಿ ಅವರನ್ನು ಭೇಟಿಯಾಗಲಿದ್ದೇನೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಮೊದಲ ಬಾರಿಗೆ ಮೋದಿಯವರನ್ನು ದೀದಿ ಭೇಟಿಯಾಗುತ್ತಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಏರ್ಪಟ್ಟಿತ್ತು. “2-3 ದಿನಗಳಿಗಾಗಿ ನಾನು ದಿಲ್ಲಿಗೆ ಹೋಗುತ್ತಿದ್ದೇನೆ. ಸಮಯ ಸಿಕ್ಕಿದರೆ ನಾನು ರಾಷ್ಟ್ರಪತಿಯವರನ್ನು ಭೇಟಿಯಾಗುತ್ತೇನೆ. ಪ್ರಧಾನಿ ನನಗೆ ಸಮಯ ನೀಡಿದ್ದಾರೆ. ನಾನು ಅವರನ್ನು ಭೇಟಿಯಾಗುತ್ತೇನೆ,” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪೆಗಾಸಸ್‌ ಕದ್ದಾಲಿಕೆಯಿಂದ ಹಿಡಿದ ಮಾಧ್ಯಮಗಳ ಮೇಲಿನ ಐಟಿ ದಾಳಿ ಸಂಬಂಧ ಕೇಂದ್ರ ಸರಕಾರದ ವಿರುದ್ಧ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಇದರ ನಡುವೆಯೇ ಈ ಭೇಟಿ ನಿಗದಿಯಾಗಿದೆ. ದಿಲ್ಲಿ ಭೇಟಿ ವೇಳೆ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿ ವಿವಿಧ ವಿರೋಧ ಪಕ್ಷಗಳ ನಾಯಕರನ್ನೂ ಭೇಟಿಯಾಗಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸಿಕ್ಕಿರುವ ಅಭೂತಪೂರ್ವ ಗೆಲುವನ್ನೇ ಚಿಮ್ಮುಹಲಗೆಯಾಗಿ ಬಳಸಿಕೊಂಡು ಅವರು ರಾಷ್ಟ್ರ ರಾಜಕಾರಣದಲ್ಲಿಯೂ ಪ್ರಮುಖ ಪಾತ್ರ ವಹಿಸಲು ಹೊರಟಂತೆ ಕಾಣಿಸುತ್ತಿದೆ. ಅದಕ್ಕೆ ದಿಲ್ಲಿ ಭೇಟಿ ಮೊದಲ ಮೆಟ್ಟಿಲಾಗುವ ಸಾಧ್ಯತೆ ಇದೆ.