ಸಂಸತ್‌ ಭವನ ನಿರ್ಮಾಣದ 'ಸೆಂಟ್ರಲ್‌ ವಿಸ್ತಾ' ಯೋಜನೆಯ 10% ಅನುದಾನ ಮಾತ್ರ ಬಳಕೆ!

ನೂತನ ಸಂಸತ್‌ ಭವನ ನಿರ್ಮಾಣದ 'ಸೆಂಟ್ರಲ್‌ ವಿಸ್ತಾ' ಯೋಜನೆಗಾಗಿ ಮೀಸಲಿಟ್ಟಿರುವ ಅಂದಾಜು ಅನುದಾನ 5,477 ಕೋಟಿ ರೂ. ಪೈಕಿ ಈವರೆಗೆ ಕೇವಲ 554 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅಂದರೆ ಯೋಜನಾ ವೆಚ್ಚದ ಶೇ.10ರಷ್ಟು ಮೊತ್ತ ಮಾತ್ರ ಬಳಕೆಯಾಗಿದೆ.

ಸಂಸತ್‌ ಭವನ ನಿರ್ಮಾಣದ 'ಸೆಂಟ್ರಲ್‌ ವಿಸ್ತಾ' ಯೋಜನೆಯ 10% ಅನುದಾನ ಮಾತ್ರ ಬಳಕೆ!
Linkup
ಹೊಸದಿಲ್ಲಿ: ನಿರ್ಮಾಣದ 'ಸೆಂಟ್ರಲ್‌ ವಿಸ್ತಾ' ಯೋಜನೆಗಾಗಿ ಮೀಸಲಿಟ್ಟಿರುವ ಅಂದಾಜು ಅನುದಾನ 5,477 ಕೋಟಿ ರೂ. ಪೈಕಿ ಈವರೆಗೆ ಕೇವಲ 554 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅಂದರೆ ಯೋಜನಾ ವೆಚ್ಚದ ಶೇ.10ರಷ್ಟು ಮೊತ್ತ ಮಾತ್ರ ಬಳಕೆಯಾಗಿದೆ. ಯೋಜನೆಯಿಂಂದ ಸುಮಾರು 24 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಿದ್ದು, 10 ಸಾವಿರ ಕಾರ್ಮಿಕರಿಗೆ ಉದ್ಯೋಗ ಸಿಕ್ಕಿದೆ. ಕೇಂದ್ರ ಸರಕಾರವು ಗುರುವಾರ ಸಂಸತ್‌ಗೆ ನೀಡಿದ ಲಿಖಿತ ಉತ್ತರದಲ್ಲಿಈ ಮಾಹಿತಿ ನೀಡಿದೆ. ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಮೂಲಕ ದೇಶದ ಆರ್ಥಿಕತೆಗೆ ವಿಸ್ತಾ ಯೋಜನೆ ಪೂರಕವಾಗಿದೆ. ಆತ್ಮನಿರ್ಭರ ಭಾರತದ ಸಂಕಲ್ಪವು ಈಡೇರಿಕೆ ಆಗುತ್ತಿದೆ. ಯೋಜನೆ ಅಡಿಯಲ್ಲಿಒಟ್ಟು ನಾಲ್ಕು ಕಟ್ಟಡಗಳ ನಿರ್ಮಾಣವನ್ನು ಈ ಮಾಸಾಂತ್ಯದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 2022ರ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮಕ್ಕೂ ಮುನ್ನ ಯೋಜನೆಯ ಭಾಗವಾದ ನವಪಥ ನಿರ್ಮಾಣವು ಪೂರ್ಣಗೊಳ್ಳುವ ವಿಶ್ವಾಸವಿದೆ. ಮುಂದಿನ ಅಕ್ಟೋಬರ್‌ ವೇಳೆಗೆ ಹೊಸ ಸಂಸತ್‌ ಕಟ್ಟಡದ ನಿರ್ಮಾಣ ಕೂಡ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಸರಕಾರ ತಿಳಿಸಿದೆ. ಒಟ್ಟಾರೆ ವಿಸ್ತಾ ಯೋಜನೆಯಲ್ಲಿ ಕೇಂದ್ರೀಯ ಸಚಿವಾಲಯದ ಮೂರು ಕಟ್ಟಡಗಳ ನಿರ್ಮಾಣಕ್ಕಾಗಿಯೇ 3,690 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ. 2023ರ ನವೆಂಬರ್‌ಗೆ ಈ ಪ್ರಮುಖ ಕಟ್ಟಡಗಳು ಲೋಕಾರ್ಪಣೆಗೊಳ್ಳಲಿವೆ ಎನ್ನಲಾಗಿದೆ. ಸಂಸತ್‌ ಭವನದ ಸಮೀಪಕ್ಕೆ ಮೆಟ್ರೋ ಮಾರ್ಗದ ಸೌಲಭ್ಯವನ್ನು ನೆಲದ್ವಾರದ ಮೂಲಕ ಕಲ್ಪಿಸುವ ಕುರಿತು ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ಕೂಡ ಸರಕಾರ ಮಾಹಿತಿ ನೀಡಿದೆ. ₹971 ಕೋಟಿ ವೆಚ್ಚದ ಈ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್'ಗೆ ನೀಡಲಾಗಿದೆ. ಇದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ನ ಯುದ್ಧ ಸ್ಮಾರಕದವರರೆಗಿನ 3 ಕಿ.ಮೀ ವ್ಯಾಪ್ತಿಯನ್ನು ಒಳಗೊಳ್ಳಲಿದೆ. ಒಟ್ಟು 64,500 ಚ.ಮೀ. ವ್ಯಾಪ್ತಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ವಿಶಾಲ ಸಂಸತ್ ಭವನ ನಿರ್ಮಾಣವಾಗಲಿದ್ದು, 2022ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನ ವ್ಯವಸ್ಥೆ ಇರಲಿದ್ದು, ರಾಜ್ಯಸಭೆಯಲ್ಲಿ 384 ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೇ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಒಟ್ಟು 1,224 ಸದಸ್ಯರಿಗೆ ಆಸನದ ವ್ಯವಸ್ಥೆ ಇರಲಿದೆ. ಅಲ್ಲದೇ ಪ್ರತಿಯೊಬ್ಬ ಸಂಸತ್ ಸದಸ್ಯನಿಗೂ 40 ಚ.ಮೀ ವಿಸ್ತೀರ್ಣದ ಕಚೇರಿಯನ್ನು ಹೊಂದುವ ಅವಕಾಶ ಕೂಡ ಕಲ್ಪಿಸಲಾಗುವುದು. ಇದು 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.