ಲಸಿಕೆ ಪೇಟೆಂಟ್‌ ಮನ್ನಾ ಬಗ್ಗೆ ಮಾತುಕತೆ ತೀವ್ರಗೊಳಿಸಲು ನಿರ್ಧರಿಸಿದ WTO

ಡಬ್ಲ್ಯುಟಿಒದ ಟ್ರಿಫ್ಸ್‌ ಮಂಡಳಿಯ ಸಭೆಯಲ್ಲಿ ಕೋವಿಡ್‌ ಲಸಿಕೆ ಮತ್ತು ಔಷಧಗಳ ಪೇಟೆಂಟ್‌ ಮನ್ನಾ ಮಾಡಬೇಕು ಎಂಬ ಪ್ರಸ್ತಾಪದ ಬಗ್ಗೆ ಮಾತುಕತೆ ಆರಂಭಿಸಲು ಸಮ್ಮತಿಸಲಾಗಿದೆ. ಜೂನ್‌ 17ಕ್ಕೆ ಮೊದಲ ಹಂತದ ಔಪಚಾರಿಕ ಮಾತುಕತೆ ನಡೆಯಲಿದೆ.

ಲಸಿಕೆ ಪೇಟೆಂಟ್‌ ಮನ್ನಾ ಬಗ್ಗೆ ಮಾತುಕತೆ ತೀವ್ರಗೊಳಿಸಲು ನಿರ್ಧರಿಸಿದ WTO
Linkup
ಹೊಸದಿಲ್ಲಿ: ಕೋವಿಡ್‌ ಲಸಿಕೆ ಮತ್ತು ಔಷಧಗಳ ಮನ್ನಾ ಮಾಡಬೇಕು ಎಂಬ ಭಾರತ ಮತ್ತು ದಕ್ಷಿಣ ಆಫ್ರಿಕಾದ ಜಂಟಿ ಪ್ರಸ್ತಾಪಕ್ಕೆ ಸಂಬಂಧಿಸಿ ಮಾತುಕತೆ ಆರಂಭಿಸಲು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಸಮ್ಮತಿಸಿದೆ. ಡಬ್ಲ್ಯುಟಿಒದ ಟ್ರಿಫ್ಸ್‌ ಮಂಡಳಿಯ ಎರಡು ದಿನಗಳ ಸಭೆ ಬುಧವಾರ ಮುಕ್ತಾಯವಾಗಿದ್ದು, ಈ ಸಭೆಯಲ್ಲಿ ಪ್ರಸ್ತಾಪದ ಬಗ್ಗೆ ಮಾತುಕತೆ ಆರಂಭಿಸಲು ಸಮ್ಮತಿಸಲಾಗಿದೆ. ಡಬ್ಲ್ಯುಟಿಒದ ಟ್ರಿಫ್ಸ್‌ ಕೌನ್ಸಿಲ್‌ನ 48 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಜೂನ್‌ 17ಕ್ಕೆ ಮೊದಲ ಹಂತದ ಔಪಚಾರಿಕ ಮಾತುಕತೆ ನಡೆಯಲಿದೆ. ಜುಲೈ 21ರೊಳಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಟ್ರಿಫ್ಸ್‌ ಕೌನ್ಸಿಲ್‌ ನಿರೀಕ್ಷಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಕಳೆದ 2020ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಡಬ್ಲ್ಯುಟಿಒ ಅಡಿಯಲ್ಲಿ ಕೋವಿಡ್‌ ಲಸಿಕೆ ಮತ್ತು ಔಷಧಗಳ ಪೇಟೆಂಟ್‌ ಮನ್ನಾಗೆ ಒತ್ತಾಯಿಸಿದ್ದವು. ಇದರಿಂದ ಲಸಿಕೆ ಉತ್ಪಾದನೆ ಮತ್ತು ವಿತರಣೆಯ ವೇಗ ಹೆಚ್ಚಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನುಕೂಲವಾಗಲಿದೆ. ವೆಚ್ಚ ತಗ್ಗಲಿದೆ ಎಂದು ಭಾರತ ಪ್ರತಿಪಾದಿಸಿತ್ತು. ಈ ವರ್ಷ ಮೇನಲ್ಲಿ ಪರಿಷ್ಕೃತ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು. ಡಬ್ಲ್ಯುಟಿಒ ಅಡಿಯಲ್ಲಿ ಬೌದ್ಧಿಕ ಆಸ್ತಿಗಳ ಹಕ್ಕಿಗೆ ಸಂಬಂಧಿಸಿದ ವ್ಯಾಪಾರ ವಹಿವಾಟುಗಳ ಕುರಿತು ಟ್ರಿಫ್ಸ್‌ ಒಪ್ಪಂದದ ವ್ಯವಸ್ಥೆ ಇದೆ. ಇದರ ಅಡಿಯಲ್ಲಿ ಡಬ್ಲ್ಯುಟಿಒದ ಸದಸ್ಯತ್ವ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡರೆ ಪೇಟೆಂಟ್‌ ಮನ್ನಾ ಮಾಡಲು ಸಾಧ್ಯವಿದೆ. ಹೀಗಾಗಿ ಮುಂದಿನ ಕೆಲ ವಾರಗಳಲ್ಲಿ ವ್ಯಾಪಕ ಮಾತುಕತೆಗಳು ನಡೆಯಲಿವೆ.

ಕೋವಿಡ್‌ ಲಸಿಕೆ ಮತ್ತು ಔಷಧಗಳ ಉತ್ಪಾದನೆ, ತಂತ್ರಜ್ಞಾನ , ಚಿಕಿತ್ಸೆ ಅಥವಾ ನಿಯಂತ್ರಣ ಕುರಿತ ಪೇಟೆಂಟ್‌ಗಳನ್ನು ಮನ್ನಾ ಮಾಡಬೇಕು ಎಂಬ ಪ್ರಸ್ತಾಪವಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವು ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಾಂಕ್ರಾಮಿಕ ರೋಗದ ಸಂದರ್ಭ ಸಾರ್ವಜನಿಕ ಆರೋಗ್ಯ ಮುಖ್ಯ ಪೇಟೆಂಟ್‌ ಮನ್ನಾ ತಾತ್ಕಾಲಿಕವಾಗಿದ್ದರೂ ಆಗಬಹುದು, ಅದರ ಅಗತ್ಯ ಇದೆ ಎಂದು ಭಾರತೀಯ ನಿಯೋಗ ಪ್ರತಿಪಾದಿಸಿದೆ. ಪರ-ವಿರೋಧ ಯಾರು? ಪೇಟೆಂಟ್‌ ಮನ್ನಾದ ಪರ ಅಮೆರಿಕ, ಆಸ್ಪ್ರೇಲಿಯಾ, ಕೆನಡಾ, ನ್ಯೂಜಿಲೆಂಡ್‌, ಉಕ್ರೇನ್‌, ಬ್ರೆಜಿಲ್‌, ನಾರ್ವೆ, ಚೀನಾ, ಥೈಪೆ ಇದೆ. ಐರೋಪ್ಯ ಒಕ್ಕೂಟ, ಬ್ರಿಟನ್‌, ಸ್ವಿಜರ್ಲೆಂಡ್‌ ಮತ್ತು ಕೊರಿಯಾ ವಿರೋಧಿಸುತ್ತಿವೆ.