ಇನ್ಕಂ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯ ಗಡುವು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ

ಇಡೀ ದೇಶ ಕೊರೊನಾ ಕರಾಳ ಹಿಡಿತದಲ್ಲಿ ಒದ್ದಾಡುತ್ತಿರುವಾಗ, ಆದಾಯಕ್ಕೇ ಕೊಡ್ಲಿ ಏಟು ಬಿದ್ದಾಗ ಆದಾಯ ತೆರಿಗೆ ಸಲ್ಲಿಸುವುದಾದರೂ ಹೇಗೆ? ಜನರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಐಟಿಆರ್ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಇನ್ಕಂ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯ ಗಡುವು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ
Linkup
ಹೊಸದಿಲ್ಲಿ : ವೈಯಕ್ತಿಕ ರಿಟರ್ನ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಸರಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಗುರುವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಆದಾಯ ತೆರಿಗೆದಾರರು ಸ್ವಲ್ಪಮಟ್ಟಿಗೆ ನಿರಾಳರಾದಂತಾಗಿದೆ. ಕಂಪನಿಗಳಿಗೆ ಕೂಡ ಐಟಿಆರ್ ಸಲ್ಲಿಕೆಯ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ನವೆಂಬರ್ 30ರವರೆಗೆ ವಿಸ್ತರಿಸಿದೆ. ದೇಶ ಕೋವಿಡ್ ನಿಂದಾಗಿ ವಿಪರೀತ ಪರಿಸ್ಥಿತಿ ಎದುರಿಸುತ್ತಿರುವುದರಿಂದ, ತೆರಿಗೆದಾರರಿಗೆ ಅನುಕೂಲವಾಗಲೆಂದು ಗಡುವನ್ನು ವಿಸ್ತರಿಸಿರುವುದಾಗಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ, ಮತ್ತು ಐಟಿಆರ್-4 ಬಳಸಿ ಇನ್ಕಂ ಟ್ಯಾಕ್ಸ್ ರಿಟರ್ನ್ ಸಲ್ಲಿಸುವವರು ಈ ಮೊದಲು ಜುಲೈ 31ರೊಳಗೆ ಸಲ್ಲಿಸಬೇಕಾಗಿತ್ತು. ಹಾಗೆಯೆ, ಕಂಪನಿಗಳು ಮತ್ತು ಸಂಸ್ಥೆಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಕ್ಟೋಬರ್ 31ರ ಗಡುವಿರುತ್ತಿತ್ತು. ಇದರ ಜೊತೆಗೆ, ಉದ್ಯೋಗಿಗಳಿಗೆ ಉದ್ಯೋಗದಾತರು ನೀಡುವ ಫಾರಂ 16 ಅನ್ನು ಸಲ್ಲಿಕೆಯ ದಿನಾಂಕವನ್ನು ಜುಲೈ 15ರವರೆಗೆ ವಿಸ್ತರಿಸಲಾಗಿದೆ. ಲೆಕ್ಕಪತ್ರ ಶೋಧನೆ ವರದಿ ಮತ್ತು ವರ್ಗಾವಣೆ ಬೆಲೆ ಪ್ರಮಾಣಪತ್ರ ಸಲ್ಲಿಕೆಯ ದಿನಾಂಕವನ್ನು ಕೂಡ ಕ್ರಮವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಆದಾಯ ತೆರಿಗೆಯನ್ನು ಸಲ್ಲಿಸುವ ದಿನಾಂಕವನ್ನು 2022ರ ಜನವರಿ 31ರವರೆಗೆ ವಿಸ್ತರಿಸಲಾಗಿದೆ. ಆದರೆ, ಯಾರ ತೆರಿಗೆಯು ಮೂಲದಲ್ಲಿಯೇ ಕಡಿತವಾಗುವುದಿಲ್ಲವೋ, ಯಾರು ಮುಂಗಡ ತೆರಿಗೆಯನ್ನು 1 ಲಕ್ಷ ರು.ಗಿಂತ ಹೆಚ್ಚು ಉಳಿಸಿಕೊಂಡಿದ್ದಾರೆಯೋ ಅವರು ಮೊದಲಿನ ನಿಗದಿತ ಸಮಯದಲ್ಲಿಯೇ ಇನ್ಕಂ ಟ್ಯಾಕ್ಸ್ ರಿಟರ್ನ್ ಸಲ್ಲಿಸಬೇಕು. ಇಲ್ಲದಿದ್ದರೆ, ಆದಾಯ ತೆರಿಗೆ ಕಾಯ್ದೆಯ 234 ಸೆಕ್ಷನ್ ಅಡಿಯಲ್ಲಿ ಪ್ರತಿ ತಿಂಗಳು ಶೇ.1ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.