ಸೆನ್ಸೆಕ್ಸ್‌ 525 ಅಂಕ ಪತನ, ಒಂದೇ ದಿನ 3.78 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 525 ಅಂಕ ಪತನವಾಗಿದ್ದು, ಪರಿಣಾಮ ಹೂಡಿಕೆದಾರರು ಒಂದೇ ದಿನ 3.78 ಲಕ್ಷ ಕೋಟಿ ರೂ. ನಷ್ಟಕ್ಕೀಡಾಗಿದ್ದಾರೆ. ಬಾಂಬೆ ಷೇರು ಮಾರುಕಟ್ಟೆಯ ಮಾರುಕಟ್ಟೆ ಮೌಲ್ಯವೂ ರೂ. 255.18 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ.

ಸೆನ್ಸೆಕ್ಸ್‌ 525 ಅಂಕ ಪತನ, ಒಂದೇ ದಿನ 3.78 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು
Linkup
ಮುಂಬಯಿ: ಬಾಂಬೆ ಸಂವೇದಿ ಸೂಚ್ಯಂಕ ಸೋಮವಾರ 525 ಅಂಕ ಪತನವಾಗಿದ್ದು, 58,490 ಅಂಕಗಳಿಗೆ ದಿನದ ವಹಿವಾಟು ಮಕ್ತಾಯಗೊಳಿಸಿತು. ಸೂಚ್ಯಂಕ 188 ಅಂಕ ಕಳೆದುಕೊಂಡು 17,396 ಅಂಕಗಳಿಗೆ ಸ್ಥಿರವಾಯಿತು. ಈ ಮೂಲಕ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದ ಷೇರು ಪೇಟೆ ಸಂವೇದಿ ಸೂಚ್ಯಂಕಗಳು ಏಕಾಏಕಿ ಭಾರಿ ಕುಸಿತಕ್ಕೀಡಾದವು. ಟಾಟಾ ಸ್ಟೀಲ್‌ ಷೇರು ದರ ದೊಡ್ಡ ಪ್ರಮಾಣದಲ್ಲಿ (ಶೇ. 9.53) ನಷ್ಟಕ್ಕೀಡಾಯಿತು. ಜೆಎಸ್‌ಡಬ್ಲ್ಯೂ ಸ್ಟೀಲ್‌, ಹಿಂಡಾಲ್ಕೊ, ಯುಪಿಎಲ್‌, ಭಾರತ್‌ ಪೆಟ್ರೋಲಿಯಂ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಟಾಟಾ ಮೋಟಾರ್ಸ್‌ ನಷ್ಟ ಅನುಭವಿಸಿದ ಇತರ ಷೇರುಗಳಾಗಿವೆ. ಅಮೆರಿಕದ ಫೆಡರಲ್‌ ರಿಸರ್ವ್‌ ಈ ವಾರ ಸಭೆ ಸೇರಲಿದ್ದು, ಬಡ್ಡಿ ದರಕ್ಕೆ ಸಂಬಂಧಿಸಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಅನಿಶ್ಚಿತತೆ, ಚೀನಾದಲ್ಲಿ ರಿಯಾಲ್ಟಿ ದಿಗ್ಗಜ ಎವರ್‌ಗ್ರ್ಯಾಂಡ್‌ ಬಿಕ್ಕಟ್ಟು ಜಾಗತಿಕ ಷೇರು ಮಾರುಕಟ್ಟೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಅಮೆರಿಕ, ಬ್ರಿಟನ್‌, ಜಪಾನ್‌ ಸೇರಿದಂತೆ 16 ದೇಶಗಳಲ್ಲಿ ಫೆಡರಲ್‌ ಬ್ಯಾಂಕ್‌ಗಳು ಈ ವಾರ ಹಣಕಾಸು ಪರಾಮರ್ಶೆ ನಡೆಸಲಿವೆ. ಇದರ ನಡುವೆಯೂ ಹಿಂದೂಸ್ಥಾನ್‌ ಯುನಿಲಿವರ್‌ ಲಿ. ಷೇರುಗಳು ಶೇ. 2.88 ರಷ್ಟು ಗಳಿಕೆ ದಾಖಲಿಸಿದ್ದು, ಅತೀ ಹೆಚ್ಚಿನ ಗಳಿಕೆ ದಾಖಲಿಸಿದ ಷೇರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬಜಾಜ್‌ ಫಿನ್‌ಸರ್ವ್‌, ಐಟಿಸಿ, ನೆಸ್ಟ್ಲೇ ಇಂಡಿಯಾ, ಎಚ್‌ಸಿಎಲ್‌ ಟೆಕ್‌, ಬ್ರಿಟಾನಿಯಾ ಇಂಡಸ್ಟ್ರೀಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಗಳಿಕೆ ದಾಖಲಿಸಿದ ಷೇರುಗಳಾಗಿವೆ. ಸೆನ್ಸೆಕ್ಸ್‌ ಪತನದ ಪರಿಣಾಮ ಹೂಡಿಕೆದಾರರು ಸೋಮವಾರ 3.78 ಲಕ್ಷ ಕೋಟಿ ರೂ. ನಷ್ಟಕ್ಕೀಡಾದರು. ನಿಮಿಷಕ್ಕೆ 1,000 ಕೋಟಿ ರೂ.ನಂತೆ ಹೂಡಿಕೆದಾರರು ಹಣ ಕಳೆದುಕೊಂಡಿದ್ದು, ಬಾಂಬೆ ಷೇರು ಮಾರುಕಟ್ಟೆಯ ಮಾರುಕಟ್ಟೆ ಮೌಲ್ಯ ರೂ. 255.18 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಚೀನಾದ ಎವರ್‌ಗ್ರ್ಯಾಂಡ್‌ ದಿವಾಳಿಯ ಅಂಚಿಗೆ ತಲುಪಿರುವುದರಿಂದ ಹೂಡಿಕೆದಾರರು ಆತಂಕಿರಾಗಿದ್ದಾರೆ. ಸೂಚ್ಯಂಕಗಳು ಮುಗ್ಗರಿಸಲು ಇದು ಕಾರಣಗಳಲ್ಲೊಂದು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಎಸ್‌. ರಂಗನಾಥನ್‌ ತಿಳಿಸಿದ್ದಾರೆ. ಚೀನಾ, ಹಾಂಕಾಂಗ್‌ನಲ್ಲಿ ಷೇರು ಸೂಚ್ಯಂಕಗಳು ಪತನವಾಗಿವೆ. ಈ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ತುಸು ಇಳಿದಿದ್ದು, ಪ್ರತಿ ಬ್ಯಾರೆಲ್‌ಗೆ 73.89 ಡಾಲರ್‌ಗೆ ಇಳಿಕೆಯಾಗಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ 26 ಪೈಸೆ ಇಳಿಕೆಯಾಗಿದ್ದು, 73.74 ರೂ.ಗೆ ತಗ್ಗಿದೆ.