ಸಿಎಂ ಕೇಜ್ರಿವಾಲ್‌ಗೆ ಸೋಂಕು ಬೆನ್ನಲ್ಲೇ ದಿಲ್ಲಿಯಲ್ಲಿ ಕಠಿಣ ನಿರ್ಬಂಧ: ವಿಕೆಂಡ್‌ ಕರ್ಫ್ಯೂ, ವರ್ಕ್‌ ಫ್ರಂ ಹೋಂ ಜಾರಿ

ಸೋಂಕು ನಿಯಂತ್ರಣಕ್ಕೆ ದೆಹಲಿಯಲ್ಲಿ ವೀಕೆಂಡ್‌ ಕರ್ಫ್ಯೂ ಹೇರಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಗತ್ಯ ಸೇವೆ ಹೊರೆತು ಪಡಿಸಿ ಉಳಿದ ಎಲ್ಲಾ ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಮ್‌ ಮಂಜೂರು ಮಾಡಲಾಗಿದೆ.

ಸಿಎಂ ಕೇಜ್ರಿವಾಲ್‌ಗೆ ಸೋಂಕು ಬೆನ್ನಲ್ಲೇ ದಿಲ್ಲಿಯಲ್ಲಿ ಕಠಿಣ ನಿರ್ಬಂಧ: ವಿಕೆಂಡ್‌ ಕರ್ಫ್ಯೂ, ವರ್ಕ್‌ ಫ್ರಂ ಹೋಂ ಜಾರಿ
Linkup
ಹೊಸ ದಿಲ್ಲಿ: ಓಮಿಕ್ರಾನ್‌ ಹೆಸರಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್‌ಗೆ ರಾಷ್ಟ್ರ ರಾಜಧಾನಿ ಬೆದರಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಕೊರೊನಾ ವೈರಸ್‌ ಧೃಢಪಟ್ಟ ಬೆನ್ನಲ್ಲೇ, ಈಗಾಗಲೇ ಇರುವ ನಿರ್ಬಂಧಗಳ ಜತೆಗೆ ಅಲ್ಲಿ ಇನ್ನೂ ಹೆಚ್ಚಿನ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಸೋಂಕು ನಿಯಂತ್ರಣಕ್ಕೆ ದೆಹಲಿಯಲ್ಲಿ ವೀಕೆಂಡ್‌ ಕರ್ಫ್ಯೂ ಹೇರಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಗತ್ಯ ಸೇವೆ ಹೊರೆತು ಪಡಿಸಿ ಉಳಿದ ಎಲ್ಲಾ ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಮ್‌ ಮಂಜೂರು ಮಾಡಲಾಗಿದೆ. ಖಾಸಗಿ ಕಂಪನಿಗಳು ಶೇ.50 ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಏತನ್ಮಧ್ಯೆ ದೆಹಲಿಯ ಸಿಟಿ ಬಸ್‌ ಹಾಗೂ ಮೆಟ್ರೋ ರೈಲು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿದೆ. ಸತತ ಎರಡು ದಿನಗಳಿಂದ ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದ್ದು, ಹೀಗಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ನಿರ್ಬಂಧಗಳನ್ನು ವಿಧಿಸಿದೆ. ಈಗಾಗಲೇ ದೆಹಲಿ ಕೆಂಪು ವಲಯದಲ್ಲಿ ಇರುವುದರಿಂದ ಈ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಮುಂಜಾನೆ 5 ಗಂಟೆ ವರೆಗೆ ನೈಟ್‌ ಕರ್ಫ್ಯೂ ಇರಲಿದ್ದು, ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ನಿರ್ಬಂಧ ಇಲ್ಲ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಓಮಿಕ್ರಾನ್‌ ತಳಿಯ ಪ್ರಭಾವ ಕಡಿಮೆ ಇದೆ. ಆದರೆ ಜನರಿಗೆ ಎಚ್ಚರಿಕೆ ಇರುವಂತೆ ಸೂಚಿಸಲಾಗಿದೆ. ದೆಹಲಿಯ ಬಸ್‌ ಹಾಗೂ ಮೆಟ್ರೋಗಳು ಶೇ. 100 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಹಾಗೂ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ' ಎಂದು ಅವರು ಹೇಳಿದ್ದಾರೆ. ಅಲ್ಲದೇ ವೈದ್ಯಕೀಯ ಅಗತ್ಯಕ್ಕೆ ಹೊರತಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ದೆಹಲಿಯ ಜನತೆಯೊಂದಿಗೆ ಅವರು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ಕೋವಿಡ್‌ ಹೆಚ್ಚಳವಾಗಿದ್ದು, ಸೋಮವಾರ ಒಂದೇ ದಿನ 4099 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದು ಸಾವು ಸಂಭವಿಸಿದೆ. ಸೋಮವಾರದ ಪಾಸಿಟಿವಿಟಿ ದರ ಶೇ. 6.46 ಇದ್ದು, ಇದು 2021ರ ಮೇ ತಿಂಗಳ ಬಳಿಕ ದಾಖಲಾದ ಅತೀ ಹೆಚ್ಚಿನ ಪಾಸಿಟಿವಿಟಿ ದರ. ಇದರ ಜತೆಗೆ ದೆಹಲಿಯಲ್ಲಿ ಸೋಂಕು ಸ್ಫೋಟಗೊಳ್ಳಲಿಗೆ ಎಂದು ಆರೋಗ್ಯ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಜನವರಿ ಮಧ್ಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿನಿತ್ಯ 20 ರಿಂದ 25 ಸಾವಿರ ಪ್ರಕರಣಗಳು ದಾಖಲಾಗಲಿವೆ. ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಇದೇ ಪಾಸಿಟಿವಿ ದರದಲ್ಲಿ ಹೋದರೆ ಜನವರಿ 8 ರ ಹೊತ್ತಿಗೆ ದೈನಂದಿನ ಪ್ರಕರಣಗಳ ಸಂಖ್ಯೆ 8-9 ಸಾವಿರ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ.