ಅನುಮತಿ ಇಲ್ಲದೆ ಟ್ರ್ಯಾಕ್ಟರ್ ಚಲಾಯಿಸಿದ ರಾಹುಲ್ ಗಾಂಧಿ: ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ

ಕೃಷಿ ಕಾಯ್ದೆಗಳ ವಿರುದ್ಧ ರೈತರಿಗೆ ಬೆಂಬಲ ಸೂಚಿಸಲು ಟ್ರ್ಯಾಕ್ಟರ್ ಏರಿ ಸಂಸತ್ ಭವನದ ಬಳಿ ಚಲಾಯಿಸಿಕೊಂಡು ಬಂದಿದ್ದ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅನುಮತಿ ಇಲ್ಲದೆ ಟ್ರ್ಯಾಕ್ಟರ್ ಚಲಾಯಿಸಿದ ರಾಹುಲ್ ಗಾಂಧಿ: ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ
Linkup
ಹೊಸದಿಲ್ಲಿ: ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಲು ದಿಲ್ಲಿಯ ಮುಖ್ಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್‌ಗೆ ತೆರಳಿದ್ದ ನಾಯಕ ಹಾಗೂ ಇತರೆ ಮುಖಂಡರ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಚಲಾಯಿಸಿದ್ದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿಭಟನೆ ನಡೆಸಲು ಕಾಂಗ್ರೆಸ್ ಯಾವುದೇ ಅನುಮತಿ ಕೇಳಿರಲಿಲ್ಲ ಎಂದು ದಿಲ್ಲಿ ಪೊಲೀಸ್ ಮೂಲಗಳು ತಿಳಿಸಿವೆ. ಮೋಟಾರು ವಾಹನ ಕಾಯ್ದೆ, ಐಪಿಸಿ ಸೆಕ್ಷನ್ 188 ಮತ್ತು ಕೋವಿಡ್ ನಿಯಮ ಉಲ್ಲಂಘನೆ ಆರೋಪಗಳ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ರಾಹುಲ್ ಗಾಂಧಿ ಅವರು ಚಾಲನೆ ಮಾಡಿದ ಟ್ರ್ಯಾಕ್ಟರ್ ಅನ್ನು ಭಾನುವಾರ ರಾತ್ರಿ ಪ್ರತಿಭಟನಾ ಸ್ಥಳಕ್ಕೆ ತರಲಾಗಿತ್ತು. ಅದರಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಲು ಅವಕಾಶವಿಲ್ಲ. ಹೀಗಾಗಿ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಓಡಿಸಿರುವುದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ. ಜತೆಗೆ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಸಮೀಪ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಈ ವೇಳೆ ಗುಂಪುಗೂಡುವುದಕ್ಕೆ ನಿಷೇಧವಿದೆ. ಹೀಗಿದ್ದರೂ ಕಾಂಗ್ರೆಸ್ ಮುಖಂಡರು ಗುಂಪುಗೂಡಿರುವುದು ಈ ಆದೇಶದ ಉಲ್ಲಂಘನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಟ್ರ್ಯಾಕ್ಟರ್‌ನಲ್ಲಿ ತೆರಳಿದ್ದಕ್ಕಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿವಿ ಹಾಗೂ ಇತರೆ ಮುಖಂಡರನ್ನು ಸೋಮವಾರ ಕೆಲ ಕಾಲ ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆ ಮಾಡಲಾಗಿತ್ತು. ಹತ್ತು ಮಂದಿ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. 'ನಾನು ರೈತರ ಸಂದೇಶವನ್ನು ಸಂಸತ್‌ಗೆ ತೆಗೆದುಕೊಂಡು ಬಂದಿದ್ದೇನೆ. ಸರಕಾರವು ರೈತರ ಧ್ವನಿಗಳನ್ನು ಹತ್ತಿಕ್ಕುತ್ತಿದ್ದಾರೆ ಮತ್ತು ಸಂಸತ್‌ನಲ್ಲಿ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ. ಅವರು ಈ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕು. ಈ ಕಾನೂನುಗಳು 2-3 ದೊಡ್ಡ ಉದ್ಯಮಿಗಳಿಗೆ ಅನುಕೂಲಕರವಾಗಿವೆ ಎನ್ನುವುದನ್ನು ಇಡೀ ದೇಶ ತಿಳಿಸಿದೆ' ಎಂದು ರಾಹುಲ್ ಗಾಂಧಿ ಹೇಳಿದ್ದರು. 'ಸರಕಾರದ ಪ್ರಕಾರ, ರೈತರು ಬಹಳ ಖುಷಿಯಾಗಿದ್ದಾರೆ ಮತ್ತು ಹೊರಗೆ ಪ್ರತಿಭಟನೆಗೆ ಕುಳಿತಿರುವ ರೈತರೆಲ್ಲರೂ ಭಯೋತ್ಪಾದಕರು. ಆದರೆ ವಾಸ್ತವದಲ್ಲಿ, ರೈತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ' ಎಂದು ಆರೋಪಿಸಿದ್ದರು.