ಮೊಬೈಲ್ ಫೋನ್‌ನಲ್ಲಿ ಮುಳುಗಿ, ಮೆಟ್ರೋ ಹಳಿ ಮೇಲೆ ಬಿದ್ದ!: ವೈರಲ್ ವಿಡಿಯೋ

ಮೊಬೈಲ್ ಫೋನ್ ಕೈಯಲ್ಲಿ ಇದ್ದರೆ ಜನರು ಜಗತ್ತನೇ ಮರೆಯುತ್ತಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಮೊಬೈಲ್ ಫೋನ್ ನೋಡುತ್ತಾ ಮೆಟ್ರೋ ಪ್ಲಾಟ್‌ಫಾರ್ಮ್ ಪ್ರವೇಶಿಸಿದ ವ್ಯಕ್ತಿಯೊಬ್ಬರು ಹಳಿಗಳ ಮೇಲೆ ಬಿದ್ದಿದ್ದಾರೆ.

ಮೊಬೈಲ್ ಫೋನ್‌ನಲ್ಲಿ ಮುಳುಗಿ, ಮೆಟ್ರೋ ಹಳಿ ಮೇಲೆ ಬಿದ್ದ!: ವೈರಲ್ ವಿಡಿಯೋ
Linkup
ಹೊಸದಿಲ್ಲಿ: ಪಾದಚಾರಿ ಮಾರ್ಗದಲ್ಲಿ ನಡೆಯುವಾಗ, ರಸ್ತೆ ದಾಟುವಾಗಲೂ ನೋಡುವುದು ಕೆಲವರ ಚಾಳಿ. ಇನ್ನು ಅನೇಕರು ವಾಹನ ಚಾಲನೆ ಮಾಡುವಾಗಲೂ ಫೋನ್ ನೋಡುವ ಖಯಾಲಿ ಹೊಂದಿದ್ದಾರೆ. ಇದರಿಂದ ಆಗುವ ಅನಾಹುತಗಳ ಸಾಕಷ್ಟು ಉದಾಹರಣೆಗಳಿವೆ. ಮೊಬೈಲ್ ನೋಡುತ್ತಾ ಹೋಗುವವರಿಗೆ ತಮ್ಮ ಪಕ್ಕದಲ್ಲಿ ಏನಾದರೂ ಗೊತ್ತಾಗದಷ್ಟು ಅದರೊಳಗೆ ಮುಳುಗಿರುತ್ತಾರೆ. ಹೊಸದಿಲ್ಲಿಯಲ್ಲಿ ವ್ಯಕ್ತಿಯೊಬ್ಬ ಹೀಗೆ ಫೋನ್‌ ಸಹವಾಸದಲ್ಲಿ ಹಳಿ ಮೇಲೆ ಬಿದ್ದು ಯಡವಟ್ಟು ಮಾಡಿಕೊಂಡಿದ್ದಾನೆ. ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಿದ ಈ ಭೂಪ, ಅದರಲ್ಲಿಯೇ ತಲ್ಲೀನನಾಗಿ ಪ್ಲಾಟ್‌ಫಾರ್ಮ್‌ಗೆ ಬಂದಿದ್ದಾನೆ. ಅಕ್ಕ-ಪಕ್ಕ, ಮುಂದೆ ಎಲ್ಲಿಯೂ ನೋಡದೆ ನಡೆಯುತ್ತಾ ಪ್ಲಾಟ್‌ಫಾರ್ಮ್‌ನಿಂದ ಹಳಿಗಳ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳಿಗಳ ಮೇಲೆ ಬಿದ್ದ ಬಳಿಕವೇ ಆತ ವಾಸ್ತವ ಜಗತ್ತಿಗೆ ಮರಳಿದ್ದಾನೆ! ಅಲ್ಲಿಂದ ಏಳಲು ಪರದಾಡಿದ್ದಾನೆ. ಕೊನೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ () ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ ಆತನಿಗೆ ಸಹಾಯ ಮಾಡಿದ್ದಾರೆ. ಕೂಡಲೇ ಹಳಿಗಳ ಮೇಲೆ ಜಿಗಿದ ಸಿಬ್ಬಂದಿ, ಮೆಟ್ರೋ ರೈಲು ಬರುವ ಮುನ್ನವೇ ಆತನನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಕೊಂಚ ತಡವಾಗಿದ್ದರೂ ಮೆಟ್ರೋ ರೈಲು ಆಗಮಿಸಿದ್ದರೆ, ಆತನ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇತ್ತು. ಹೊಸದಿಲ್ಲಿಯ ಶಹದರಾ ಮೆಟ್ರೋ ರೈಲು ನಿಲ್ದಾಣದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ವ್ಯಕ್ತಿಯನ್ನು 58 ವರ್ಷದ ಶೈಲೇಂದರ್ ಮೆಹ್ತಾ ಎಂದು ಗುರುತಿಸಲಾಗಿದೆ. ಅವರ ಕಾಲಿಗೆ ಸಣ್ಣಪುಟ್ಟ ತರುಚಿದ ಗಾಯಗಳಾಗಿವೆ. 'ಪುರುಷ ಪ್ರಯಾಣಿಕರೊಬ್ಬರು ಪ್ಲಾಟ್‌ಫಾರ್ಮ್ ಮಟ್ಟದಲ್ಲಿ ನಡೆದು ಬರುವಾಗ ಮೊಬೈಲ್‌ ಫೋನ್‌ನಲ್ಲಿ ಮಗ್ನವಾಗಿದ್ದರು. ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ಮೆಟ್ರೋ ಹಳಿ ಮೇಲೆ ಜಾರಿ ಬಿದ್ದಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಸಿಐಎಸ್‌ಎಫ್ ಕ್ಯೂಆರ್‌ಟಿ ತಂಡದ ಕಾನ್‌ಸ್ಟೇಬಲ್ ರೋತಾಶ್ ಚಂದ್ರ ಅವರು ಮೆಟ್ರೋ ಹಳಿ ಮೇಲೆ ಇಳಿದು, ಪ್ರಯಾಣಿಕನನ್ನು ಮೆಟ್ರೋ ರೈಲು ಆಗಮಿಸುವ ಮುನ್ನ ಹಳಿಯಿಂದ ಮೇಲೆ ಎತ್ತಿದ್ದಾರೆ' ಎಂದು ಸಿಐಎಸ್‌ಎಫ್ ಹೇಳಿಕೆ ನೀಡಿದೆ.