ಶಾಂಪೇನ್‌ ಬಾಟಲಿಗಳಲ್ಲಿ 2.5 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ ಯುವಕ ಬೆಂಗಳೂರಿನಲ್ಲಿ ಅರೆಸ್ಟ್‌!

ಶಾಂಪೇನ್‌ ಬಾಟಲಿಗಳಲ್ಲಿ ಎಂಡಿಎಂ ಕ್ರಿಸ್ಟಲ್‌ ಪೌಡರ್‌ ತುಂಬಿ ನಗರದಲ್ಲಿ ಅವ್ಯಾಹತವಾಗಿ ಮಾರಾಟ ಮಾಡುತ್ತಿದ್ದ ಐವರಿಕೋಸ್ಟ್‌ ಪ್ರಜೆಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. . 28 ವರ್ಷದ ದೋಸ್ಸೋ ಖಲೀಫಾ ಎಂಬಾತನನ್ನು ಬಂಧಿಸಿ 2.5 ಕೋಟಿ ರೂ. ಮೌಲ್ಯದ ಎರಡೂವರೆ ಕೆ.ಜಿ. ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ.

ಶಾಂಪೇನ್‌ ಬಾಟಲಿಗಳಲ್ಲಿ 2.5 ಕೋಟಿ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ ಯುವಕ ಬೆಂಗಳೂರಿನಲ್ಲಿ ಅರೆಸ್ಟ್‌!
Linkup
ಬೆಂಗಳೂರು: ಪೊಲೀಸರಿಗೆ ಯಾವುದೇ ಅನುಮಾನ ಬಾರದಂತೆ ಶಾಂಪೇನ್‌ ಬಾಟಲಿಗಳಲ್ಲಿ ಎಂಡಿಎಂ ಕ್ರಿಸ್ಟಲ್‌ ಪೌಡರ್‌ ತುಂಬಿ ನಗರದಲ್ಲಿ ಅವ್ಯಾಹತವಾಗಿ ಮಾರಾಟ ಮಾಡುತ್ತಿದ್ದ ಐವರಿಕೋಸ್ಟ್‌ ಪ್ರಜೆಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 28 ವರ್ಷದ ದೋಸ್ಸೋ ಖಲೀಫಾ ಎಂಬಾತನನ್ನು ಬಂಧಿಸಿ 2.5 ಕೋಟಿ ರೂ. ಮೌಲ್ಯದ ಎರಡೂವರೆ ಕೆ.ಜಿ. , ಒಂದು ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ಬೈಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು. ಟೆಕ್ಕಿಗಳು, ವಿದ್ಯಾರ್ಥಿಗಳೇ ಟಾರ್ಗೆಟ್‌:ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಖಲೀಫಾ ಕಳೆದ ಐದು ವರ್ಷಗಳ ಹಿಂದೆ ಟೂರಿಸ್ಟ್‌ ವೀಸಾದಡಿ ಭಾರತಕ್ಕೆ ಬಂದಿದ್ದ. ಡ್ರಗ್ಸ್‌ ದಂಧೆಕೋರರ ಸಂಪರ್ಕ ಸಾಧಿಸಿ ನಿರಂತರವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ದ 2018ರಲ್ಲಿ ಬಾಗಲೂರು ಹಾಗೂ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿಗಳು, ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿಕೊಂಡು ಎಂಡಿಎಂಎ ಮಾರಾಟ ಮಾಡುತ್ತಿದ್ದ. ಇದರ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್‌ ಪ್ರಕಾಶ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಗೋವಾದಿಂದ ಮಾದಕ ವಸ್ತು ಆಮದು: ನಗರದಲ್ಲಿ ನಡೆಯುವ ಹೈ-ಎಂಡ್‌ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಪ್ರಮುಖ ಡ್ರಗ್‌ ಪೆಡ್ಲರ್‌ಗಳಿಗೆ ಆರೋಪಿಯು ಮಾದಕವಸ್ತು ಸರಬರಾಜು ಮಾರಾಟ ಮಾಡುತ್ತಿದ್ದ. ಗೋವಾದ ಡ್ರಗ್‌ ಪೆಡ್ಲರ್‌ ಜತೆ ಸಂಪರ್ಕ ಸಾಧಿಸಿ ಅಲ್ಲಿ ಶಾಂಪೇನ್‌ ಬಾಟಲಿಗಳಲ್ಲಿ ಎಂಎಡಿಎಂ ಕ್ರಿಸ್ಟಲ್‌ ಪೌಡರ್‌ ತುಂಬಿ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ನಿರಂತರವಾಗಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ. ಈತನ ಜತೆ ಸಂಪರ್ಕದಲ್ಲಿರುವವರ ಬಗ್ಗೆ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಎಸ್‌.ಮುರುಗನ್‌ ತಿಳಿಸಿದ್ದಾರೆ. ಫುಟ್ಬಾಲ್‌ ಆಟಗಾರನಾಗಿದ್ದ ಖಲೀಫಾ! ಬಂಧಿತ ಆರೋಪಿ ದೊಸ್ಸೊ ಖಲೀಫಾ ಫುಟ್ಬಾಲ್‌ ಆಟಗಾರನಾಗಿಯೂ ಗುರುತಿಸಿಕೊಂಡಿದ್ದ. ಆರೋಪಿಯು ದೆಹಲಿ ಮತ್ತು ಕೋಲ್ಕೊತ್ತಾದಲ್ಲಿ ಹಲವು ದಿನಗಳ ಕಾಲ ವಾಸ ಮಾಡಿದ್ದ ಎಂದು ತಿಳಿದು ಬಂದಿದೆ. 2018ರಲ್ಲಿ ಬೆಂಗಳೂರಿಗೆ ಬಂದಿದ್ದ ಖಲೀಫಾ ಡ್ರಗ್ಸ್‌ ಜಾಲದಲ್ಲಿ ಸಕ್ರಿಯನಾಗತೊಡಗಿದ್ದ. ಈ ಹಿಂದೆ 2021ರ ಫೆ.10 ರಂದು ಜೆ.ಸಿ.ನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳಾದ ಬಿಡಿಎ ರವಿ ಹಾಗೂ ಶೋಹೆಬುದ್ದೀನ್‌ ಎಂಬುವರಿಗೆ ಆರೋಪಿಯು ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದರು. ಮನೆ ಮಾಲೀಕರ ವಿರುದ್ಧ ಕ್ರಮ! ವಿದೇಶಿ ಪ್ರಜೆಯ ಪಾಸ್‌ಪೋರ್ಟ್‌ ಮತ್ತು ವೀಸಾ ಪರಿಶೀಲಿಸದೆ ಬಾಡಿಗೆ ನೀಡಿದ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಾಲೀಕರು ವಿದೇಶಿ ಪ್ರಜೆಗಳಿಗೆ ಮನೆ ನೀಡಿದ ಬಳಿಕ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಫಾರಂ 'ಸಿ' ಸಲ್ಲಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಮನೆ ಮಾಲೀಕರು ನಿಯಮ ಪಾಲಿಸದ ಕಾರಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದರು.