ಬೆಂಗಳೂರಿನ 1,332 ಕಿಮೀ ರಸ್ತೆಯ ಗುಂಡಿಗಳಿಗೆ ಎರಡು ವಾರದಲ್ಲಿ ಮುಕ್ತಿ: ಆರ್ ಅಶೋಕ್

ಬೆಂಗಳೂರು ನಗರದ 1,332 ಕಿಮೀ ಉದ್ದದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಸೆ. 20ರ ಗಡುವು ನೀಡಲಾಗಿದೆ. ಹಾಗೆಯೇ ವಾರ್ಡ್ ಮಟ್ಟದ ರಸ್ತೆಗುಂಡಿಗಳನ್ನು ಮುಚ್ಚಲು ಸೆ. 30 ಗಡುವಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನ 1,332 ಕಿಮೀ ರಸ್ತೆಯ ಗುಂಡಿಗಳಿಗೆ ಎರಡು ವಾರದಲ್ಲಿ ಮುಕ್ತಿ: ಆರ್ ಅಶೋಕ್
Linkup
ಬೆಂಗಳೂರು: ನಗರದ 1,332 ಕಿಮೀ ಉದ್ದದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಸೆಪ್ಟೆಂಬರ್ 20ರ ವೇಳೆಗೆ ಮುಗಿಯಲಿದೆ ಮತ್ತು ವಾರ್ಡ್ ಮಟ್ಟದ 85,791 ಕಿಮೀ ರಸ್ತೆಗಳ ನವೀಕರಣ ಸೆ. 30ರಂದು ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವ ಸೋಮವಾರ ತಿಳಿಸಿದರು. ನಗರದೆಲ್ಲೆಡೆ ಇರುವ ಹೊಂಡ ಗುಂಡಿಗಳ ರಸ್ತೆಗಳ ವಿರುದ್ಧ ಸಾರ್ವಜನಿಕರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಗಡುವನ್ನು ಸಚಿವರು ನೀಡಿದ್ದಾರೆ. ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕಳೆದ ಕೆಲವು ವಾರಗಳಿಂದ ನಗರದಲ್ಲಿ ಜೋರಾಗಿ ಮಳೆಯಾಗುತ್ತಿದೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ತಿಳಿಸಿದರು. 'ಇದು ಸದಾ ನಡೆಯುತ್ತಿರುವ ಪ್ರಕ್ರಿಯೆ. ಈಗ ನಾವು ಕಾಮಗಾರಿಯ ವಿವರಗಳನ್ನು ಬಹಿರಂಗಪಡಿಸುತ್ತೇವೆ. ಪ್ರತಿ ದಿನದ ಕೆಲಸಗಳ ವಿವರಗಳನ್ನು, ಎಷ್ಟು ಲೋಡ್ ಉತ್ಪಾದಿಸಲಾಗುತ್ತಿದೆ ಮತ್ತು ಅದನ್ನು ಎಷ್ಟು ಬಳಸಲಾಗಿದೆ ಎಂಬಿತ್ಯಾದಿ ವಿವರಗಳನ್ನು ಕೂಡ ನಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುತ್ತೇವೆ' ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ತಿಳಿಸಿದ್ದಾರೆ. ಬಿಬಿಎಂಪಿ 1,723 ಸ್ಥಳಗಳನ್ನು ನೀರು ತುಂಬಿಕೊಳ್ಳುವ ಅಪಾಯಕಾರಿ ಜಾಗಗಳೆಂದು ಗುರುತಿಸಿದೆ. ಈ ಸ್ಥಳಗಳಲ್ಲಿ ಎತ್ತರದ ಚರಂಡಿಗಳನ್ನು ನಿರ್ಮಿಸಲಾಗುತ್ತದೆ. 'ಭಾರಿ ಮಳೆಯ ಕಾರಣ, ಅನೇಕ ಸ್ಥಳಗಳಲ್ಲಿನ ರಸ್ತೆಗಳಿಗೆ ಹಾನಿಯಾಗಿದೆ. ಮುಂದಿನ ವರ್ಷ ಇಂತಹ ಪರಿಸ್ಥಿತಿ ಉಂಟಾಗದಂತೆ ನಾವು ಎಚ್ಚರವಹಿಸುತ್ತೇವೆ' ಎಂದು ಪ್ರಹ್ಲಾದ್ ತಿಳಿಸಿದ್ದಾರೆ. ಡಾಂಬರನ್ನು ಬಿಬಿಎಂಪಿ ಘಟಕದಲ್ಲಿಯೇ ಮಿಶ್ರಣ ಮಾಡಲಾಗುತ್ತದೆ. ಪ್ರತಿ ದಿನವೂ ಗುಂಡಿಗಳನ್ನು ಮುಚ್ಚಲು ಎಂಟು ವಲಯಗಳಿಗೆ ಮಿಶ್ರಣ ಘಟಕಗಳಿಂದ ಸುಮಾರು 20 ಲೋಡ್‌ಗಳನ್ನು ಕಳುಹಿಸಲಾಗುತ್ತದೆ. ಪ್ರಸ್ತುತ ನಾವು ಸುಮಾರು 20 ಲೋಡ್‌ಗಳಷ್ಟು ಡಾಂಬರನ್ನು ಉತ್ಪಾದಿಸಿದ ಅಗತ್ಯಕ್ಕೆ ತಕ್ಕಂತೆ ರವಾನಿಸುತ್ತಿದ್ದೇವೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆಯು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅಂಜನಾಪುರ ಮುಖ್ಯರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಪದೇ ಪದೇ ಮನವಿ ಮಾಡಿದ್ದರೂ ಅದಕ್ಕೆ ಕಿವಿಗೊಡದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ರಸ್ತೆ ಗುಂಡಿಗಳಲ್ಲಿ ಗಿಡಗಳನ್ನು ನಾಟಿ ಮಾಡಿ ಪ್ರತಿಭಟನೆ ನಡೆಸಿದ್ದರು. ದೊಡ್ಡಕಲ್ಲಸಂದ್ರದಲ್ಲಿ ಬೃಹತ್ ಗುಂಡಿಗಳಲ್ಲಿ 20 ರೂಪಾಯಿಗೆ ಬೋಟಿಂಗ್ ನಡೆಸುವುದಾಗಿ ಜನರು ಹೇಳಿದ್ದರು. ತಮ್ಮ ಬಳಿ ಸಾಕಷ್ಟು ಕೆಲಸಗಾರರು ಮತ್ತು ಉಪಕರಣಗಳಿದ್ದು, ದೂರು ಬಂದ 48 ಗಂಟೆಗಳಲ್ಲಿಯೇ ಕೆಟ್ಟ ರಸ್ತೆಗಳನ್ನು ಸರಿಪಡಿಸುವುದಾಗಿ ಬಿಬಿಎಂಪಿ ಹೇಳಿತ್ತು. ರಸ್ತೆಗಳ ಮೂಲಸೌಕರ್ಯ ಇಲಾಖೆಗೆ ವಾರ್ಡ್ ಮಟ್ಟದಲ್ಲಿನ ರಸ್ತೆಗಳ ಸಮಸ್ಯೆ ಬಗ್ಗೆ ದೂರುಗಳನ್ನು ನೀಡಿದ್ದರೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರಕಿಲ್ಲ ಎಂದು ನಾಗರಿಕ ಸಂಸ್ಥೆಗಳು ಆರೋಪಿಸುತ್ತಿವೆ. ತಮ್ಮ ದೂರುಗಳು 'ದೀರ್ಘ ಕಾಲದ ಪರಿಹಾರ' ವರ್ಗದೊಳಗೆ ಬರುತ್ತವೆ ಎಂದು ಹೇಳಿ ಅವುಗಳನ್ನು ತಕ್ಷಣವೇ ಮುಚ್ಚಿಹಾಕುತ್ತಿದ್ದಾರೆ ಎಂದು ದೂರಿವೆ.