ಬೆಂಕಿ ಅವಘಡದ ಬಳಿಕ ಎಚ್ಚೆತ್ತ ಬೆಂಗಳೂರಿನ ಫ್ಲ್ಯಾಟ್‌ ನಿವಾಸಿಗಳು: ಅಗ್ನಿ ಸುರಕ್ಷತೆಗೆ ಒತ್ತು!

ಬೆಂಗಳೂರಿನಲ್ಲಿ ನಡೆದ ಅಗ್ನಿ ಅವಘಡ ಅನೇಕರನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಹೀಗಾಗಿ ಇದೀಗ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲೂ ಅಗ್ನಿ ಸುರಕ್ಷತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬಾಲ್ಕನಿಯ ಗ್ರಿಲ್‌ ಬಗ್ಗೆ ಹೆಚ್ಚಿನವರಿಗೆ ಭಯ ಮೂಡಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಬೆಂಕಿ ಅವಘಡದ ಬಳಿಕ ಎಚ್ಚೆತ್ತ ಬೆಂಗಳೂರಿನ ಫ್ಲ್ಯಾಟ್‌ ನಿವಾಸಿಗಳು: ಅಗ್ನಿ ಸುರಕ್ಷತೆಗೆ ಒತ್ತು!
Linkup
ಬೆಂಗಳೂರು: ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಅಗ್ನಿ ಆಕಸ್ಮಿಕವೊಂದು ಸಂಭವಿಸಿ ಇಬ್ಬರು ಸಜೀವ ದಹನವಾದ ಘಟನೆಯ ಬಳಿಕ ಪ್ರತಿಯೊಬ್ಬರೂ ''ಅಗ್ನಿ ಆಕಸ್ಮಿಕದ ಸಂದರ್ಭದಲ್ಲಿ ನಮ್ಮ ಮನೆಯೆಷ್ಟು ಸುರಕ್ಷಿತ?'' ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಹೌಸಿಂಗ್‌ ಸೊಸೈಟಿ, ನಿವಾಸಿಗಳ ಸಂಘ, ವಸತಿ ಸಂಘಗಳ ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿ, ಮೀಟಿಂಗ್‌ಗಳಲ್ಲಿ'ಅಗ್ನಿ ಸುರಕ್ಷತೆ' ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಭಯ ಹುಟ್ಟಿಸಿದ ಬಾಲ್ಕನಿಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಹೊರಗಿನಿಂದ ಯಾರೂ ನುಸುಳದಂತೆ ಬಾಲ್ಕನಿಗೆ ಗ್ರಿಲ್‌ ಅಳವಡಿಸಿ ಬಂದೋಬಸ್ತ್‌ ಮಾಡಲಾಗಿರುತ್ತದೆ. ''ಕಳ್ಳರಿಂದ ಪಾರಾಗಲು ಇಂತಹ ಗ್ರಿಲ್‌ಗಳಿಗೆ ಬೇಡಿಕೆಯಿತ್ತು. ಇತ್ತೀಚಿನ ಸಜೀವ ದಹನದ ಘಟನೆಯಾದ ಬಳಿಕ ಜನರಿಗೆ ಬಾಲ್ಕನಿಯ ಗ್ರಿಲ್‌ ಭಯ ಹುಟ್ಟಿಸುತ್ತಿವೆ. ಗ್ರಿಲ್‌ಗೆ ಗೇಟ್‌ ಅಳವಡಿಸಿಲು ಅಪಾರ್ಟ್‌ಮೆಂಟ್‌ ನಿವಾಸಿಗಳು ಒತ್ತಾಯಿಸುದ್ದಾರೆ. ಕಳೆದ ಕೆಲವು ದಿನಗಳಿಂದ ಮೀಟಿಂಗ್‌ಗಳಲ್ಲಿ, ಸಂಘದ ವಾಟ್ಸ್ಯಾಪ್‌ ಗ್ರೂಪ್‌ಗಳಲ್ಲಿಇದೇ ಚರ್ಚೆ ನಡೆಯುತ್ತಿದೆ. ಎಲ್ಲರ ಬೇಡಿಕೆಗಳನ್ನು ಗಮನಲ್ಲಿಟ್ಟುಕೊಂಡು ಮತ್ತು ನಿಯಮಾನುಸರ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಸುರಕ್ಷತೆ ಹೆಚ್ಚಿಸಲಾಗುವುದು'' ಎಂದು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಅಪಾಟ್‌ಮೆಂಟ್‌ವೊಂದರ ಹೌಸಿಂಗ್‌ ಸೊಸೈಟಿಯ ಅಧ್ಯಕ್ಷ ರಮೇಶ್‌ ಬಾಬು ಹೇಳಿದ್ದಾರೆ. ಅಸುರಕ್ಷಿತ ಮಾರ್ಪಾಡಿಗೆ ಅವಕಾಶವಿಲ್ಲಬೃಹತ್‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ಕಟ್ಟಡ ಉಪವಿ- 2003, ಪರಿಷ್ಕೃತ ವಲಯ ನಿಯಮಾವಳಿಗಳು-2015 ಮತ್ತು ನ್ಯಾಷನಲ್‌ ಬಿಲ್ಡಿಂಗ್‌ ಕೋಡ್‌ ಆಫ್‌ ಇಂಡಿಯಾ-2016ರ ಅಧಿನ್ವಯ ನಕ್ಷೆ ಮಂಜೂರು, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನು ಸಂಪೂರ್ಣವಾಗಿ ಮುಚ್ಚುವುದು ಇತ್ಯಾದಿ ಅಸುರಕ್ಷತಾ ಮಾರ್ಪಾಡುಗಳನ್ನು ಮಾಡಲು ನಿಯಮಾನುಸಾರ ಅವಕಾಶವಿಲ್ಲ. ಆದಾಗ್ಯೂ ಕಟ್ಟಡ ಮಾಲೀಕರು ನಿಯಮಬಾಹಿರವಾಗಿ ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿರುವುದನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಹೇಳಿದ್ದಾರೆ. ಖರೀದಿಸುವಾಗ ಇರಲಿ ಕಾಳಜಿ '' ಮನೆ ಖರೀದಿಸುವ ಸಮಯದಲ್ಲಿ ಈಜುಕೊಳ ಇದೆಯೇ? ಜಿಮ್‌ ಇದೆಯಾ? ಎಂದು ಕೇಳಿದರೆ ಸಾಲದು. ಫೈರ್‌ ಸೇಫ್ಟಿ ಕುರಿತು ಗಮನ ನೀಡಬೇಕು. ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲೆಲ್ಲಿ ಅಗ್ನಿಶಾಮಕ ಸಾಧನಗಳು ಇರಲಿವೆ? ಎಮರ್ಜೆನ್ಸಿ ಎಕ್ಸಿಟ್‌ ವ್ಯವಸ್ಥೆ ಹೇಗಿರಲಿದೆ? ಎಂದು ತಿಳಿದುಕೊಳ್ಳಬೇಕು. ಕಟ್ಟಡದ ಸುತ್ತ ಖಾಲಿ ಸ್ಥಳವೆಷ್ಟಿದೆ ನೋಡಿಕೊಳ್ಳಿ'' ಎಂದು ಬೆಂಗಳೂರಿನ ರಿಯಲ್‌ ಎಸ್ಟೇಟ್‌ ತಜ್ಞ ಕೆ.ಎನ್‌. ಆನಂದ್‌ ರಾವ್‌ ಹೇಳಿದ್ದಾರೆ. ''ನಿಮ್ಮ ಅಪಾರ್ಟ್‌ಮೆಂಟ್‌ ಗಾತ್ರಕ್ಕೆ ತಕ್ಕಂತೆ ಸ್ಟೇರ್‌ ಕೇಸ್‌ಗಳನ್ನು ಹೊಂದಿರಬೇಕು. ಕೇವಲ ಲಿಫ್ಟ್‌ ಮಾತ್ರ ಇರುವ ಮನೆಯೂ ಅಪಾಯಕಾರಿ. ಇಕ್ಕಟ್ಟಾದ ಮೆಟ್ಟಿಲಿರುವ ಕಟ್ಟಡಗಳೂ ಅಪಾಯಕಾರಿ'' ಎಂದು ಅವರು ಹೇಳಿದ್ದಾರೆ. ''ನಿಮ್ಮ ಅಪಾರ್ಟ್‌ಮೆಂಟ್‌ನ ಸಂಬಂಧಪಟ್ಟ ಕ್ಷೇಮಾಭಿವೃದ್ಧಿ ಸಂಘ ಅಥವಾ ಹೌಸಿಂಗ್‌ ಸೊಸೈಟಿಗಳು ಆಗಾಗ ಫೈರ್‌ ಡ್ರಿಲ್‌ ಮಾಡುತ್ತಿರಬೇಕು. ಬೆಂಕಿ ಆಕಸ್ಮಿಕದ ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡುವ ಕುರಿತು ಜ್ಞಾನ ಹೊಂದಿರುವ ಸಿಬ್ಬಂದಿಯೂ ಇರಬೇಕು. ಕೇವಲ ಕಾಟಾಚಾರಕ್ಕೆ ಒಬ್ಬ ಸೆಕ್ಯುರಿಟಿ ಇದ್ದರೆ ಸಾಲದು'' ಎಂದು ಆನಂದ್‌ ರಾವ್‌ ವಿವರಿಸಿದ್ದಾರೆ. ಹೆಚ್ಚಾದ ಜಾಗೃತಿ ಕಳೆದ ಕೆಲವು ದಿನಗಳಿಂದ ಜನರು ಫೈರ್‌ ಸೇಫ್ಟಿ ಕುರಿತು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಮನೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಸಾಧ್ಯವಾಗುವಂತಹ ಅಗ್ನಿಶಾಮಕ ಸಾಧನಗಳನ್ನು ಖರೀದಿಸುತ್ತಿದ್ದಾರೆ. ''ಬೆಂಕಿ ಅಪಾಯದ ಕುರಿತು ಸದಾ ಎಚ್ಚರಿಕೆ ಹೊಂದಿರಬೇಕು. ಮನೆಯಲ್ಲಿ ಕುಕ್ಕರ್‌ ಸ್ಫೋಟ, ಗ್ಯಾಸ್‌ ಸ್ಪೋಟ ಇತ್ಯಾದಿಗಳ ಜೊತೆಗೆ ದೇವರ ದೀಪ, ವಿದ್ಯುತ್‌ ಉಪಕರಣಗಳು, ವಿದ್ಯುತ್‌ ಪ್ಲಗ್‌ಗಳಿಂದಲೂ ಅಪಾಯವಾಗುತ್ತದೆ. ಒಂದು ದೊಡ್ಡ ಅಪಾರ್ಟ್‌ಮೆಂಟ್‌ ಉರಿದು ಬೂದಿಯಾಗಲು ಒಂದು ಬೆಂಕಿ ಕಿಡಿ ಸಾಕು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು'' ಎಂದು ಬೆಂಗಳೂರಿನ ಅಗ್ನಿಶಾಮಕ ದಳದ ಇನ್‌ಸ್ಪೆಕ್ಟರ್‌ರೊಬ್ಬರು ಹೇಳಿದ್ದಾರೆ.